ODI World Cup 2023: ಒಂದು ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ಪೈಪೋಟಿ..!
ODI World Cup 2023: ಸ್ಕಾಟ್ಲ್ಯಾಂಡ್ ಹಾಗೂ ಓಮಾನ್ ವಿರುದ್ಧ ನೆದರ್ಲ್ಯಾಂಡ್ಸ್ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಹೆಚ್ಚಿನ ನೆಟ್ ರನ್ ರೇಟ್ನೊಂದಿಗೆ 6 ಅಂಕಗಳೊಂದಿಗೆ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಬಹುದು.
ODI World Cup 2023: ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನಲ್ಲಿ ಸತತ 4 ಗೆಲುವು ದಾಖಲಿಸಿ ಶ್ರೀಲಂಕಾ (Sri Lanka) ತಂಡವು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ 10 ತಂಡಗಳು ಭಾಗವಹಿಸಲಿರುವ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 9 ತಂಡಗಳು ಫೈನಲ್ ಆಗಿವೆ. ಇದಕ್ಕೂ ಮುನ್ನ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ಸೌತ್ ಆಫ್ರಿಕಾ ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡಿತ್ತು. ಇದೀಗ 9ನೇ ತಂಡವಾಗಿ ಶ್ರೀಲಂಕಾ ಎಂಟ್ರಿ ಕೊಟ್ಟಿದೆ. ಇನ್ನು ಒಂದು ತಂಡಕ್ಕೆ ಅವಕಾಶವಿದ್ದು, ಈ ಸ್ಥಾನಕ್ಕಾಗಿ ಮೂರು ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿರುವುದು ವಿಶೇಷ. ಆ ಮೂರು ತಂಡಗಳಾವುವು, ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
1- ಝಿಂಬಾಬ್ವೆ: ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ತಂಡವು ಇದೀಗ 6 ಅಂಕಗಳನ್ನು ಹೊಂದಿದೆ. ಇನ್ನು ಸ್ಕಾಟ್ಲ್ಯಾಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಜಯಗಳಿಸಿದರೆ 8 ಅಂಕಗಳೊಂದಿಗೆ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿದೆ. ಒಂದು ವೇಳೆ ಸ್ಕಾಟ್ಲ್ಯಾಂಡ್ ಗೆದ್ದರೆ ಝಿಂಬಾಬ್ವೆ ತಂಡದ ವಿಶ್ವಕಪ್ ಆಡುವ ಕನಸು ಕಮರಲಿದೆ.
2- ಸ್ಕಾಟ್ಲ್ಯಾಂಡ್: ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ 3 ಪಂದ್ಯಗಳನ್ನಾಡಿರುವ ಸ್ಕಾಟ್ಲ್ಯಾಂಡ್ 2 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನುಳಿದಿರುವುದು ಝಿಂಬಾಬ್ವೆ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಗಳು. ಈ ಎರಡು ಪಂದ್ಯಗಳಲ್ಲಿ ಸ್ಕಾಟ್ಲ್ಯಾಂಡ್ ಗೆದ್ದರೆ 8 ಅಂಕಗಳೊಂದಿಗೆ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
3- ನೆದರ್ಲ್ಯಾಂಡ್ಸ್: ಸೂಪರ್ ಸಿಕ್ಸ್ ಹಂತದಲ್ಲಿ ಮೂರು ಪಂದ್ಯಗಳನ್ನಾಡಿರುವ ನೆದರ್ಲ್ಯಾಂಡ್ಸ್ ತಂಡ 1 ಪಂದ್ಯವನ್ನು ಗೆದ್ದುಕೊಂಡಿದೆ. ಸದ್ಯ 2 ಅಂಕಗಳನ್ನು ಹೊಂದಿರುವ ನೆದರ್ಲ್ಯಾಂಡ್ಸ್ ಓಮಾನ್ ಹಾಗೂ ಸ್ಕಾಟ್ಲ್ಯಾಂಡ್ ವಿರುದ್ಧ ಪಂದ್ಯಗಳನ್ನಾಡಬೇಕಿದೆ. ಒಂದು ವೇಳೆ ಝಿಂಬಾಬ್ವೆ ವಿರುದ್ಧ ಸ್ಕಾಟ್ಲ್ಯಾಂಡ್ ಗೆದ್ದರೆ ಮಾತ್ರ ನೆದರ್ಲ್ಯಾಂಡ್ಸ್ ತಂಡದ ಏಕದಿನ ವಿಶ್ವಕಪ್ ಅರ್ಹತೆ ಜೀವಂತವಿರಲಿದೆ.
ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್..!
ಅಂದರೆ ಇಲ್ಲಿ ಝಿಂಬಾಬ್ವೆ ವಿರುದ್ಧ ಸ್ಕಾಟ್ಲ್ಯಾಂಡ್ ಗೆಲ್ಲಬೇಕು. ಹಾಗೆಯೇ ಸ್ಕಾಟ್ಲ್ಯಾಂಡ್ ಹಾಗೂ ಓಮಾನ್ ವಿರುದ್ಧ ನೆದರ್ಲ್ಯಾಂಡ್ಸ್ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಹೆಚ್ಚಿನ ನೆಟ್ ರನ್ ರೇಟ್ನೊಂದಿಗೆ 6 ಅಂಕಗಳೊಂದಿಗೆ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಈ ಮೂರು ತಂಡಗಳಲ್ಲಿ ಯಾವ ತಂಡ 10ನೇ ತಂಡವಾಗಿ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.