ODI World Cup: ‘ಈ ನಡೆ ಸರಿಯಿಲ್ಲ’; ಪಾಕ್ ಸರ್ಕಾರದ ನಿಲುವನ್ನು ಟೀಕಿಸಿದ ಮಂಡಳಿಯ ಮಾಜಿ ಅಧ್ಯಕ್ಷ
ODI World Cup 2023: ಹ್ಸಾನ್ ಮಜಾರಿ ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಎಂದಿಗೂ ಈ ಕೆಲಸವನ್ನು ಮಾಡಿಲ್ಲ ಎಂದಿದ್ದಾರೆ.
ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ (ODI World Cup) ಪಾಕ್ ತಂಡ ಆಡುವ ಬಗ್ಗೆ ಸಾಕಷ್ಟು ಕುತೂಹಲ ಏರ್ಪಟ್ಟಿದೆ. ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ತಕರಾರು ತೆಗೆಯುತ್ತಿರುವ ಪಾಕಿಸ್ತಾನ ಇದೀಗ ಹೊಸ ತಲೆನೋವೊಂದನ್ನು ಐಸಿಸಿ (ICC) ಮುಂದಿಟ್ಟಿದೆ. ಈ ಮೊದಲು ಅಹಮದಬಾದ್ನಲ್ಲಿ ಪಂದ್ಯವನ್ನಾಡುವುದಿಲ್ಲ ಎಂದಿದ್ದ ಪಾಕ್, ಆ ಬಳಿಕ ಪಾಕ್ ತಂಡ ಆಡುವ ಎರಡು ಪಂದ್ಯಗಳ ಸ್ಥಳಗಳನ್ನು ಬದಲಿಸಬೇಕು ಎಂದಿತ್ತು. ಆ ಬಳಿಕ ನಮ್ಮ ಸರ್ಕಾರ ಒಪ್ಪಿಗೆ ನೀಡಿದರಷ್ಟೇ ಪಾಕ್ ತಂಡ ಭಾರತಕ್ಕೆ ಬರಲಿದೆ ಎಂದು ಪಾಕ್ ಮಂಡಳಿ ಹೇಳಿತ್ತು. ಇದೀಗ ಪಾಕ್ ತಂಡ ಭಾರತಕ್ಕೆ ವಿಶ್ವಕಪ್ (World Cup) ಆಡಲು ಹೋಗಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸಲು ಪಾಕ್ ಪ್ರಧಾನಿ ಶಹಬಾಜ್ ಷರೀಫ್ 11 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಇದೀಗ ಈ ಸಮಿತಿ ರಚನೆಗೆ (Forming panel) ಆಕ್ಷೇಪ ಹೊರಹಾಕಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಖಾಲಿದ್ ಮಹಮೂದ್ (Khalid Mahmood), ಪಾಕ್ ಸರ್ಕಾರದ ಈ ನಡೆಯನ್ನು ಖಂಡಿಸಿದ್ದಾರೆ.
ವಾಸ್ತವವಾಗಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲ್ಲಿರುವವ ಏಕದಿನ ವಿಶ್ವಕಪ್ಗೆ ಭಾರತವು ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ಪಾಕಿಸ್ತಾನವು ತನ್ನ ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲಿದೆ. ಆದರೆ ಅದಕ್ಕೂ ಮುನ್ನ ಭಾರತಕ್ಕೆ ಬರುವ ಬಗ್ಗೆ ತೀರ್ಮಾನ ಕೈಗೊಳ್ಳುವ ಬಗ್ಗೆ ಪಾಕ್ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಪಾಕಿಸ್ತಾನ ತಂಡ ಭಾರತಕ್ಕೆ ವಿಶ್ವಕಪ್ ಆಡಲು ತೆರಳುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಆ ಬಳಿಕ ತನ್ನ ವರದಿಯನ್ನು ಪಾಕ್ ಪ್ರಧಾನಿಗೆ ನೀಡಲಿದೆ. ಈ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಪಾಕ್ ಪ್ರಧಾನಿ ಪಾಕ್ ತಂಡದ ವಿಶ್ವಕಪ್ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
IND vs PAK: ಸೋಲುವ ಭೀತಿಯಿಂದ ಭಾರತ ನಮ್ಮೊಂದಿಗೆ ದ್ವಿಪಕ್ಷೀಯ ಸರಣಿ ಆಡುತ್ತಿಲ್ಲ ಎಂದ ಪಾಕ್ ಮಾಜಿ ಆಟಗಾರ..!
ಪಿಸಿಬಿಯ ಯಾವುದೇ ಪ್ರತಿನಿಧಿ ಏಕೆ ಇಲ್ಲ
ಇದೀಗ ಪಾಕ್ ಪ್ರಧಾನಿಯವರ ನಡೆಯನ್ನು ಟೀಕಿಸಿರುವ ಪಾಕ್ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ಮಹಮೂದ್, ಪಾಕ್ ಪ್ರಧಾನಿ ರಚಿಸಿರುವ ಸಮಿತಿಯಲ್ಲಿ ಪಿಸಿಬಿಯ ಯಾವುದೇ ಪ್ರತಿನಿಧಿ ಏಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಚಿವರನ್ನೊಳಗೊಂಡ ಸಮಿತಿಯನ್ನು ರಚಿಸುವುದು ಕ್ರೀಡೆ ಮತ್ತು ರಾಜಕೀಯವನ್ನು ಪ್ರತ್ಯೇಕಿಸುವ ಸರ್ಕಾರದ ಹಿಂದಿನ ನಿಲುವಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಟೀಂ ಇಂಡಿಯಾ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ, ನಮ್ಮ ತಂಡ ಕೂಡ ವಿಶ್ವಕಪ್ ಆಡಲು ಭಾರತಕ್ಕೆ ಹೋಗುವುದಿಲ್ಲ ಎಂದು ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಯನ್ನು ಕಂಡಿಸಿರುವ ಮಹಮೂದ್, ‘ಎಹ್ಸಾನ್ ಮಜಾರಿ ಈ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಕ್ರೀಡೆಯಲ್ಲಿ ರಾಜಕೀಯ ಬೆರಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಎಂದಿಗೂ ಈ ಕೆಲಸವನ್ನು ಮಾಡಿಲ್ಲ. ಆದರೀಗ ಪಾಕ್ ಪ್ರಧಾನಿ ಆ ರೀತಿಯ ಕೆಲಸಕ್ಕೆ ಕೈಹಾಕಿದ್ದಾರೆ ಎಂದಿದ್ದಾರೆ.
ಪಾಕ್ ಸರ್ಕಾರ ಹಸ್ತಕ್ಷೇಪ
ಪಾಕ್ ತಂಡ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಏಷ್ಯಾಕಪ್ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿರುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು ಎಂದಿದ್ದಾರೆ. ಹಾಗೆಯೇ ಪಿಸಿಬಿಯ ದೈನಂದಿನ ವ್ಯವಹಾರಗಳಲ್ಲಿ ಪಾಕ್ ಸರ್ಕಾರ ಪದೇಪದೇ ಹಸ್ತಕ್ಷೇಪ ಮಾಡುತ್ತಿರುವುದನ್ನು ಮಹಮೂದ್ ಖಂಡಿಸಿದ್ದಾರೆ.
ಒಂದು ವೇಳೆ ಪಾಕ್ ತಂಡ ವಿಶ್ವಕಪ್ ಆಡಲು ಭಾರತಕ್ಕೆ ತೆರಳದಿದ್ದರೆ, ಇದು ಪಾಕ್ ಕ್ರಿಕೆಟ್ ತಂಡದ ಮೇಲೆ ಪರಿಣಾಮ ಬೀರಲಿದೆ. ಹಾಗೆಯೇ ಇತರ ಕ್ರಿಕೆಟ್ ಮಂಡಳಿಗಳೊಂದಿಗಿನ ಸಂಬಂಧವನ್ನು ಹದಗೆಡಿಸುತ್ತದೆ. ಹೀಗಾಗಿ ಪಾಕ್ ತಂಡವನ್ನು ವಿಶ್ವಕಪ್ ಆಡಲು ಭಾರತಕ್ಕೆ ಕಳುಹಿಸುವುದು ಅರ್ಥಪೂರ್ಣವಾಗಿದೆ ಎಂದಿದ್ದಾರೆ. ಹಾಗೆಯೇ ಹಿಂದಿನ ಅಧ್ಯಕ್ಷ ನಜಮ್ ಸೇಥಿ ಅನುಮತಿಸಿರುವ ಏಷ್ಯಾಕಪ್ ಹೈಬ್ರಿಡ್ ಮಾದರಿಯನ್ನು ನೂತನ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಗೌರವಿಸಬೇಕು ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Mon, 10 July 23