ಒಲಿಂಪಿಕ್ ಕ್ರೀಡಾಕೂಟದಲ್ಲಿ ಯುಎಸ್ ಮತ್ತು ಚೀನಾ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 39 ಚಿನ್ನ ಸೇರಿದಂತೆ ಒಟ್ಟು 113 ಪದಕಗಳನ್ನು ಅಮೆರಿಕ ಗೆದ್ದಿದೆ. ಹಾಗೆಯೇ ಚೀನಾ 38 ಚಿನ್ನ ಸೇರಿದಂತೆ 88 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಂದು ಚಿನ್ನ ಸೇರಿದಂತೆ 7 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ 48 ನೇ ಸ್ಥಾನದಲ್ಲಿದೆ. ಅಂದಹಾಗೆ, ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಎಂಬುದು ವಿಶೇಷ. ಭಾರತದಲ್ಲಿ ಕ್ರಿಕೆಟ್ಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿರುವುದರಿಮದ ಒಲಿಂಪಿಕ್ಸ್‌ನಲ್ಲಿ ಕಳಪೆ ಪ್ರದರ್ಶನ ಕಂಡು ಬರುತ್ತಿದೆ ಎಂಬ ಟೀಕೆಗಳು ಕೂಡ ಕೇಳಿ ಬರುತ್ತಿವೆ. ಆದರೆ, ಕ್ರಿಕೆಟ್ನಲ್ಲೂ ಪಾರುಪತ್ಯ ಹೊಂದಿರುವ ಇಂಗ್ಲೆಂಡ್-ಆಸ್ಟ್ರೇಲಿಯಾ ದೇಶಗಳು ಟೋಕಿಯೊದಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ ಅಗ್ರ -10 ರಲ್ಲಿ ಸ್ಥಾನ ಪಡೆದಿದೆ ಎಂಬುದನ್ನು ಕೂಡ ಗಮನಿಸಬೇಕು. ಹಾಗಿದ್ರೆ ಕ್ರಿಕೆಟ್ ಆಡುವ ರಾಷ್ಟ್ರಗಳು ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಎಂದು ನೋಡೋಣ.
1- ಇಂಗ್ಲೆಂಡ್: ಗ್ರೇಟ್ ಬ್ರಿಟನ್ (ಇಂಗ್ಲೆಂಡ್) ಈ ಬಾರಿಯ ಒಲಿಂಪಿಕ್ಸ್ ನಲ್ಲಿ 22 ಚಿನ್ನ, 21 ಬೆಳ್ಳಿ ಮತ್ತು 22 ಕಂಚು ಸೇರಿದಂತೆ ಒಟ್ಟು 65 ಪದಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡವು ಕ್ರಿಕೆಟ್ ಜಗತ್ತಿನಲ್ಲಿ ಮತ್ತು ಫುಟ್ಬಾಲ್ನಲ್ಲೂ ಪ್ರಮುಖ ತಂಡವಾಗಿ ಗುರುತಿಸಿಕೊಂಡಿರುವುದು ಇಲ್ಲಿ ವಿಶೇಷ.
2- ಆಸ್ಟ್ರೇಲಿಯಾ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ಆರನೇ ಸ್ಥಾನದಲ್ಲಿದ್ದು, 17 ಚಿನ್ನ, 7 ಬೆಳ್ಳಿ ಮತ್ತು 22 ಕಂಚು ಸೇರಿದಂತೆ ಒಟ್ಟು 46 ಪದಕಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಅಂಗಳದ ಸರ್ವಶ್ರೇಷ್ಠ ತಂಡವಾಗಿ ಇಂದು ಕೂಡ ಗುರುತಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೇ ಈ ತಂಡ ಐದು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವುದು.
3- ನ್ಯೂಜಿಲೆಂಡ್: ಟೋಕಿಯೊ ಒಲಿಂಪಿಕ್ಸ್ ನಲ್ಲಿ ನ್ಯೂಜಿಲ್ಯಾಂಡ್ 7 ಚಿನ್ನ, 6 ಬೆಳ್ಳಿ ಮತ್ತು 7 ಕಂಚು ಸೇರಿದಂತೆ ಒಟ್ಟು 20 ಪದಕಗಳೊಂದಿಗೆ 13 ನೇ ಸ್ಥಾನದಲ್ಲಿದೆ. ಇತ್ತ ಈ ದೇಶದಲ್ಲೂ ಕ್ರಿಕೆಟ್ ಕ್ರೇಜ್ ಜೋರಾಗಿಯೇ ಇದೆ. ಇಷ್ಟೇ ಅಲ್ಲದೆ ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿತ್ತು.
4- ಜಮೈಕಾ: ಹಲವಾರು ದ್ವೀಪ ರಾಷ್ಟ್ರಗಳಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ರೂಪಿತವಾಗಿದೆ. ಇದು ಜಮೈಕಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ, ಸೇಂಟ್ ಕಿಟ್ಸ್ ಮತ್ತು ನೆವಿಸ್ ಸೇರಿದಂತೆ ಹಲವು ದ್ವೀಪಗಳನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಜಮೈಕಾ ದ್ವೀಪರಾಷ್ಟ್ರವಯ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4 ಚಿನ್ನ, ಒಂದು ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ 21 ನೇ ಸ್ಥಾನದಲ್ಲಿದೆ.
5- ಐರ್ಲೆಂಡ್: 2018 ರಲ್ಲಿ ಐರ್ಲೆಂಡ್ ದೇಶವು ಟೆಸ್ಟ್ ತಂಡದ ಮಾನ್ಯತೆ ಪಡೆಯಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ದೇಶದ ಪ್ರದರ್ಶನವನ್ನು ಗಮನಿಸಿದರೆ ಭಾರತಕ್ಕಿಂತ ಉತ್ತಮವಾಗಿದೆ. ಈ ಬಾರಿ ಐರ್ಲೆಂಡ್ ಎರಡು ಚಿನ್ನ, 2 ಕಂಚು ಸೇರಿದಂತೆ ಒಟ್ಟು 4 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ 38 ನೇ ಸ್ಥಾನದಲ್ಲಿದೆ.
6- ಭಾರತ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಈ ಬಾರಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಒಟ್ಟು 7 ಪದಕಗಳೊಂದಿಗೆ 48 ನೇ ಸ್ಥಾನ ಪಡೆದಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ 1 ತಂಡ ಎನಿಸಿಕೊಂಡಿರುವ ಭಾರತದ ಒಲಿಂಪಿಕ್ಸ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ ಎಂಬುದಕ್ಕೆ ಇದುವರೆಗಿನ ಪದಕ ಪಟ್ಟಿಗಳೇ ಸಾಕ್ಷಿ.
7-ದಕ್ಷಿಣ ಆಫ್ರಿಕಾ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಸೇರಿದಂತೆ ಒಟ್ಟು 3 ಪದಕಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿದ್ದು, ಈ ಮೂಲಕ ಮೆಡಲ್ ಟೇಬಲ್ನಲ್ಲಿ 52 ನೇ ಸ್ಥಾನ ಪಡೆದಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಂಗಳದ ಬಲಿಷ್ಠ ತಂಡಗಳಲ್ಲೊಂದು ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ.
ಇದಲ್ಲದೇ, ಕ್ರಿಕೆಟ್ ಆಡುವ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವುದೇ ಪದಕ ಗೆದ್ದಿಲ್ಲ.
ಇದನ್ನೂ ಓದಿ: Airtel: ಏರ್ಟೆಲ್ ಕಡೆಯಿಂದ ನಿಮಗೆ ಈ ಮೆಸೇಜ್ ಬಂದಿದ್ರೆ ನಿರ್ಲಕ್ಷಿಸಿ
ಇದನ್ನೂ ಓದಿ: Suresh Raina: ರೈನಾ ಜೊತೆ ಸಚಿನ್ ಹೆಂಡ್ತಿಯನ್ನು ವಿಚಾರಿಸಿದ ಏರ್ ಹೋಸ್ಟೆಸ್: ಆಮೇನಾಯ್ತು?
ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
(olympics vs cricket: cricket nations medal tally in Tokyo olympics)
Published On - 4:02 pm, Mon, 9 August 21