ಭಾರತ vs ಪಾಕಿಸ್ತಾನ್ ನಡುವಣ ಮೊದಲ ಬೌಲ್ ಔಟ್ ಪಂದ್ಯಕ್ಕೆ 17 ವರ್ಷ..!

|

Updated on: Sep 14, 2024 | 12:01 PM

2007ರ ಟಿ20 ವಿಶ್ವಕಪ್​ನಲ್ಲಿ ಟೈ ಪಂದ್ಯಗಳ ಫಲಿತಾಂಶವನ್ನು ನಿರ್ಣಯಿಸಲು ಬೌಲ್ಡ್ ಔಟ್ ನಿಯಮವನ್ನು ಪರಿಚಯಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಆದರೆ 2007ರ ಟಿ20 ವಿಶ್ವಕಪ್​ ಬಳಿಕ ಈ ನಿಯಮವನ್ನು ರದ್ದುಗೊಳಿಸಿ ಟೈ ಪಂದ್ಯಗಳ ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಅನ್ನು ಪರಿಚಯಿಸಲಾಯಿತು.

ಭಾರತ vs ಪಾಕಿಸ್ತಾನ್ ನಡುವಣ ಮೊದಲ ಬೌಲ್ ಔಟ್ ಪಂದ್ಯಕ್ಕೆ 17 ವರ್ಷ..!
IND vs PAK
Follow us on

ಅದು, ಸೆಪ್ಟೆಂಬರ್ 14, 2007… ಡರ್ಬನ್​ನ ಕಿಂಗ್ಸ್​ಮೀಡ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ 10ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಶೊಯೆಬ್ ಮಲಿಕ್ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಗೌತಮ್ ಗಂಭೀರ್ ಮೊಹಮ್ಮದ್ ಆಸಿಫ್ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಇನ್ನು ವೀರೇಂದ್ರ ಸೆಹ್ವಾಗ್ 5 ರನ್​ಗಳಿಸಿ ಪೆವಿಲಿಯನ್​ಗೆ ಹಿಂತಿರುಗಿದರು. ಇದರ ಬೆನ್ನಲ್ಲೇ ಯುವರಾಜ್ ಸಿಂಗ್ (1) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ರಾಬಿನ್ ಉತ್ತಪ್ಪ ಹಾಗೂ ಎಂಎಸ್ ಧೋನಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಕಾಯಕಕ್ಕೆ ಕೈಹಾಕಿದರು. ಅದರಂತೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ 39 ಎಸೆತಗಳಲ್ಲಿ 2 ಸಿಕ್ಸ್ 4 ಫೋರ್​ಗಳೊಂದಿಗೆ 50 ರನ್ ಬಾರಿಸಿದರು. ಮತ್ತೊಂದೆಡೆ ಧೋನಿ 31 ಎಸೆತಗಳಲ್ಲಿ 33 ರನ್ ಕಲೆಹಾಕಿದರು.

ಇನ್ನು ಅಂತಿಮ ಓವರ್​ಗಳ ವೇಳೆ 20 ರನ್ ಸಿಡಿಸುವ ಮೂಲಕ ಇರ್ಫಾನ್ ಪಠಾಣ್ ಅಬ್ಬರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 141 ರನ್​ ಕಲೆಹಾಕಿತು.

ಪಾಕ್​ ಪಡೆಗೆ 142 ರನ್​ಗಳ ಗುರಿ:

142 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಪಿ ಸಿಂಗ್ ಮೊದಲ ಆಘಾತ ನೀಡಿದರು. ಮೂರನೇ ಓವರ್​ನಲ್ಲಿ ಇಮ್ರಾನ್ ನಝೀರ್ (7) ವಿಕೆಟ್ ಕಬಳಿಸಿ ಮೊದಲ ಯಶಸ್ಸು ತಂದುಕೊಟ್ಟರು. ಸಲ್ಮಾನ್ ಬಟ್ (17) ಅಗರ್ಕರ್ ಎಸೆತದಲ್ಲಿ ಔಟಾದರೆ, ಇರ್ಫಾನ್ ಪಠಾಣ್ 4 ಓವರ್​ಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: 11 ವಿಕೆಟ್​ ಉರುಳಿಸಿ ಮಿಂಚಿದ ಮಾಜಿ ಆಟಗಾರನ ಪುತ್ರ..!

ಪರಿಣಾಮ ಕೊನೆಯ ಓವರ್​ನಲ್ಲಿ ಗೆಲ್ಲಲು ಪಾಕಿಸ್ತಾನ್ ತಂಡಕ್ಕೆ 12 ರನ್​ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ಶ್ರೀಶಾಂತ್ 11 ರನ್​ಗಳನ್ನು ನೀಡಿದರು. ಪಂದ್ಯವು 141 ರನ್​ಗಳೊಂದಿಗೆ ಟೈನಲ್ಲಿ ಅಂತ್ಯಗೊಂಡಿತು.

ಬೌಲ್ ಔಟ್ ನಿಯಮ:

ಪಂದ್ಯವು ಟೈ ಆಗಿದ್ದರಿಂದ ಫಲಿತಾಂಶ ನಿರ್ಧರಿಸಲು ಬೌಲ್ ಔಟ್​ನ ಮೊರೆ ಹೋಗಲಾಯಿತು. ಈ ನಿಯಮದ ಪ್ರಕಾರ 5 ಎಸೆತಗಳಲ್ಲಿ ಯಾವ ತಂಡ ಹೆಚ್ಚು ಬೌಲ್ಡ್ ಮಾಡುತ್ತಾರೊ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

    • ಮೊದಲ ಸುತ್ತಿನಲ್ಲಿ ಭಾರತದ ಪರ ವೀರೇಂದ್ರ ಸೆಹ್ವಾಗ್ ವಿಕೆಟ್​ಗೆ ಬೌಲ್ ಮಾಡಿದರು. ಕ್ಲೀನ್ ಬೌಲ್ಡ್.
    • ಪಾಕಿಸ್ತಾನ್ ಪರ ಮೊದಲ ಎಸೆತ ಯಾಸಿರ್ ಅರಾಫತ್ ಬೌಲ್ಡ್ ಮಾಡುವಲ್ಲಿ ವಿಫಲರಾದರು.
    • ಭಾರತದ ಪರ ಎರಡನೇ ಎಸೆತ ಎಸೆದ ಹರ್ಭಜನ್ ಸಿಂಗ್ ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು.
    • ಪಾಕ್ ಪರ ಎರಡನೇ ಎಸೆತ ಉಮರ್ ಗುಲ್ ಚೆಂಡನ್ನು ವಿಕೆಟ್​ಗೆ ತಾಗಿಸುವಲ್ಲಿ ವಿಫಲರಾದರು.
    • ಟೀಮ್ ಇಂಡಿಯಾ ಪರ  ಮೂರನೇ ಎಸೆತ ಎಸೆದ ರಾಬಿನ್ ಉತ್ತಪ್ಪ ಕ್ಲೀನ್ ಬೌಲ್ಡ್ ಮಾಡಿದರು.
    • ಪಾಕಿಸ್ತಾನ್ ಪಾಲಿಗೆ ನಿರ್ಣಾಯಕವಾಗಿದ್ದ ಮೂರನೇ ಎಸೆತದಲ್ಲಿ ಬೌಲ್ಡ್ ಮಾಡುವಲ್ಲಿ ಶಾಹೀದ್ ಅಫ್ರಿದಿ ವಿಫಲರಾದರು.

ಈ ಮೂಲಕ ಭಾರತ ತಂಡವು ಚೊಚ್ಚಲ ಬೌಲ್ಡ್ ಔಟ್ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. ಇದೀಗ ಈ ಬೌಲ್ಡ್ ಔಟ್ ಪಂದ್ಯಕ್ಕೆ 17 ವರ್ಷಗಳು ತುಂಬಿವೆ. ಈ ರಣರೋಚಕ ಪಂದ್ಯದ ಫಲಿತಾಂಶ ನಿರ್ಣಯಿಸಿದ ಬೌಲ್ಡ್ ಔಟ್ ವಿಡಿಯೋವನ್ನು ಐಸಿಸಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.

 

 

 

 

Published On - 12:00 pm, Sat, 14 September 24