ಜೂನ್ 14, 1979…ಇಂಗ್ಲೆಂಡ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪ್ರೇಮಿಗಳು ತುಂಬಿ ತುಳುಕುತ್ತಿದ್ದರು. ಏಕೆಂದರೆ ಅಂದು ವಿಶ್ವಕಪ್ನ 8ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಿತ್ತು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅತ್ತ ಕೆನಡಾದಿಂದ ಬಂದಿದ್ದ ಕ್ರಿಕೆಟ್ ಭರ್ಜರಿ ಬ್ಯಾಟಿಂಗ್ ಅನ್ನು ನಿರೀಕ್ಷಿಸಿದ್ದರು. ಆದರೆ ಪಂದ್ಯದ ಮೊದಲ ಓವರ್ನಲ್ಲೇ ವೇಗಿ ಹೆಂಡ್ರಿಕ್ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಇಯಾನ್ ಬಾಥಂ ಎಸೆತದಲ್ಲಿ ಕ್ರಿಸ್ಟೊಫರ್ ಚಾಪೆಲ್ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು. ಇದಾಗ್ಯೂ 60 ಓವರ್ಗಳ ಪಂದ್ಯವಾಗಿದ್ದರಿಂದ ಕೆನಡಾ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಇಂಗ್ಲೆಂಡ್ ಬೌಲರ್ಗಳ ಮುಂದೆ ಕೆನಡಾ ಬ್ಯಾಟ್ಸ್ಮನ್ಗಳು ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದರು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಲು ಆರಂಭಿಸಿದರು. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಆಡಿದ ಫ್ರಾಂಕ್ಲಿನ್ ಡೆನಿಸ್ ಮಾತ್ರ ಒಂದು ಬದಿಯಲ್ಲಿ ಬಂಡೆಯಂತೆ ನೆಲೆಯೂರಿದರು. ಪರಿಣಾಮ ಬರೋಬ್ಬರಿ 99 ಎಸೆತಗಳನ್ನು ಎದುರಿಸಿ ಕೇವಲ 21 ರನ್ ಕಲೆಹಾಕಿದರು. ಆದರೆ ಮತ್ತೊಂದೆಡೆ ವಿಕೆಟ್ ಉರುಳುತ್ತಲೇ ಇತ್ತು. ಆದರೆ ಡೆನಿಸ್ ಮಾತ್ರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು.
ತಂಡದ ಮೊತ್ತ 41 ಆಗಿದ್ದ ವೇಳೆ ಡೆನಿಸ್ ಹಿಟ್ ವಿಕೆಟ್ ಆಗಿ ಔಟ್ ಆದರು. ಆದರೆ ಕ್ರೀಸ್ ಕಚ್ಚಿ ನಿಂತಿದ್ದ ಡೆನಿಸ್ ಅದಾಗಲೇ ಇಂಗ್ಲೆಂಡ್ ಬೌಲರ್ಗಳಿಂದ 40.3 ಓವರ್ಗಳನ್ನು ಎಸೆಯುವಂತೆ ಮಾಡಿದ್ದರು. ಅಂತಿಮವಾಗಿ ಕೆನಡಾ ತಂಡವು ಕೇವಲ 45 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಬಾಬ್ ವಿಲ್ಲಿಸ್ ಹಾಗೂ ಕ್ರಿಸ್ ಓಲ್ಡ್ ತಲಾ 4 ವಿಕೆಟ್ ಪಡೆದು ಮಿಂಚಿದರು.
46 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 2 ವಿಕೆಟ್ ನಷ್ಟಕ್ಕೆ 13.5 ಓವರ್ನಲ್ಲಿ ಜಯ ಸಾಧಿಸಿತು. ಈ ಮೂಲಕ 277 ಎಸೆತಗಳನ್ನು ಉಳಿಸಿ ಗೆದ್ದು ಬೀಗಿತು. ಇತ್ತ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿ ದಾಖಲೆ ಬರೆದರೆ, ಕೆನಡಾ ತಂಡವು 45 ರನ್ಗಳಿಸಿ ಕಳಪೆ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿತು. ಆ ಸಮಯದಲ್ಲಿ ಅದು ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿತ್ತು. ಈ ಕೆಟ್ಟ ದಾಖಲೆಗೆ ಇಂದು 43 ವರ್ಷಗಳು ತುಂಬಿದೆ.
ಅಂದಹಾಗೆ ಈ ಕೆಟ್ಟ ದಾಖಲೆಯನ್ನು ಮುರಿದಿದ್ದು ಕೂಡ ಕೆನಡಾ ತಂಡವೇ ಎಂಬುದು ವಿಶೇಷ. ಅಂದರೆ 2003 ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪರ್ಲ್‌ನಲ್ಲಿ ಕೆನಡಾ 36 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ವಿಶ್ವಕಪ್‌ನಲ್ಲಿ ತಂಡವೊಂದರ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಅಂದರೆ ತನ್ನದೇ 45 ರನ್ಗಳ ಕೆಟ್ಟ ದಾಖಲೆಯನ್ನು ಕೇವಲ 36 ರನ್ಗಳಿಸಿ ಆಲೌಟ್ ಆಗುವ ಮೂಲಕ ಕೆನಡಾ ತಂಡವೇ ಅಳಿಸಿ ಹಾಕಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Tue, 14 June 22