Former Cricketers Remuneration: ಮಾಜಿ ಕ್ರಿಕೆಟರ್ಸ್, ಅಂಪೈರ್​ಗಳಿಗೆ ಬಿಸಿಸಿಐಯಿಂದ ಭರ್ಜರಿ ಬೋನಸ್: ಸಿಗುತ್ತಿರುವ ಹಣ ಎಷ್ಟು ಗೊತ್ತೇ?

BCCI: ಐಪಿಎಲ್‌ 2023 ರಿಂದ ಐಪಿಎಲ್‌ 2027 ರವರೆಗಿನ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂ.ಗಳ ಬೆಲೆಗೆ ಮಾರಾಟವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮಾಜಿ ಕ್ರಿಕೆಟಿಗರು ಮತ್ತು ಅಂಪೈರ್‌ಗಳಿಗೆ ಬಂಪರ್ ಶುಭಸುದ್ದಿಯೊಂದನ್ನು ನೀಡಿದೆ. ತಿಂಗಳ ಪಿಂಚಣಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.

Former Cricketers Remuneration: ಮಾಜಿ ಕ್ರಿಕೆಟರ್ಸ್, ಅಂಪೈರ್​ಗಳಿಗೆ ಬಿಸಿಸಿಐಯಿಂದ ಭರ್ಜರಿ ಬೋನಸ್: ಸಿಗುತ್ತಿರುವ ಹಣ ಎಷ್ಟು ಗೊತ್ತೇ?
BCCI
TV9kannada Web Team

| Edited By: Vinay Bhat

Jun 14, 2022 | 10:37 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಹಣದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ದಾಖಲೆ ಎಂಬಂತೆ ಐಪಿಎಲ್‌ 2023 ರಿಂದ ಐಪಿಎಲ್‌ 2027 ರವರೆಗಿನ ಎಲ್ಲಾ 410 ಪಂದ್ಯಗಳ ಪ್ರಸಾರ ಹಕ್ಕು ಬರೋಬ್ಬರಿ 44,075 ಕೋಟಿ ರೂ.ಗಳ ಬೆಲೆಗೆ ಮಾರಾಟವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮಾಜಿ ಕ್ರಿಕೆಟಿಗರು ಮತ್ತು ಅಂಪೈರ್‌ಗಳಿಗೆ ಬಂಪರ್ ಶುಭಸುದ್ದಿಯೊಂದನ್ನು ನೀಡಿದೆ. ಮಾಜಿ ಆಟಗಾರರ ತಿಂಗಳ ಪಿಂಚಣಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ಈ ನಿರ್ಧಾರದಿಂದಾಗಿ ಸುಮಾರು 900 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ನಡೆದ ಇ-ಹರಾಜಿನ 2ನೇ ದಿನದಂದು ಜಯ್ ಶಾ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.

“ಮಾಜಿ ಕ್ರಿಕೆಟಿಗರು (ಪುರುಷರು, ಮಹಿಳೆಯರು) ಮತ್ತು ಅಂಪೈರ್‌ಗಳ ಪಿಂಚಣಿ ಹೆಚ್ಚಿಸಿರುವುದನ್ನು ಘೋಷಿಸಲು ಸಂತಸವಾಗುತ್ತಿದೆ. ಸುಮಾರು 900 ಆಟಗಾರರು ಇದರ ಲಾಭ ಪಡೆಯಲಿದ್ದಾರೆ. ಇದರಲ್ಲಿ ಶೇ. 75 ರಷ್ಟು ಮಂದಿಯ ಪಿಂಚಣಿಯನ್ನು ಶೇ 100 ರಷ್ಟು ಹೆಚ್ಚಿಸಲಾಗಿದೆ,” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.

“ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಆಟಗಾರರು ಕ್ರಿಕೆಟ್‌ನ ಮತ್ತು ಮಂಡಳಿಯ ಜೀವನಾಡಿಯಾಗಿ ಉಳಿಯುತ್ತಾರೆ. ಅವರ ಆಟದ ದಿನಗಳು ಮುಗಿದ ನಂತರ ಅವರ ಜೊತೆಗಿರುವುದು ನಮ್ಮ ಕರ್ತವ್ಯ. ಅಂಪೈರ್‌ಗಳು ಅನ್‌ಸಂಗ್ ಹೀರೋಗಳು ಮತ್ತು ಬಿಸಿಸಿಐ ಅವರ ಕೊಡುಗೆಯನ್ನು ನಿಜವಾಗಿಯೂ ಗೌರವಿಸುತ್ತದೆ,” ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

IND vs SA 3rd T20I: ಇಂದು ತೃತೀಯ ಟಿ20: ಟೀಮ್ ಇಂಡಿಯಾ ಆಟಗಾರರಿಂದ ಭರ್ಜರಿ ಅಭ್ಯಾಸ

ಇದೀಗ ಪ್ರಥಮ ದರ್ಜೆ ಪಂದ್ಯವನ್ನಾಡಿದ ಮಾಜಿ ಆಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು 15 ಸಾವಿರ ರೂಪಾಯಿಯಿಂದ 30 ಸಾವಿರಕ್ಕೆ ಏರಿಕೆ ಮಾಡಿದೆ. ಪ್ರತಿ ತಿಂಗಳು 37,500 ರೂ. ಪಿಂಚಣಿ ಪಡೆಯುತ್ತಿದ್ದ ಟೆಸ್ಟ್‌ ತಂಡದ ಮಾಜಿ ಆಟಗಾರರು ಇನ್ನುಂದೆ 60,000 ಹಾಗೂ 50,000 ರೂ. ಪಡೆಯುತ್ತಿದ್ದವರು 70,000 ರೂ. ಪಡೆಯಲಿದ್ದಾರೆ. ಅಂತೆಯೆ ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ್ತಿಯರು 30 ಸಾವಿರ ರೂ. ಬದಲು 52,500 ರೂ. ಪಡೆಯಲಿದ್ದಾರೆ. 2003ಕ್ಕೂ ಮುನ್ನ ನಿವೃತ್ತಿಯಾಗಿದ್ದ ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರರು 22,500 ರೂ. ಬದಲು 45 ರೂ. ಸಾವಿರ ಪಡೆದುಕೊಳ್ಳುತ್ತಾರೆ.

IPL ಪ್ರಸಾರ ಹಕ್ಕು ದಾಖಲೆಯ ಮೊತ್ತಕ್ಕೆ ಹರಾಜು:

2023-2027ರ ಅವಧಿಯಲ್ಲಿ ನಡೆಯಲಿರುವ 410 ಪಂದ್ಯಗಳಿಗೆ ನಡೆದ ಹರಾಜಿನಲ್ಲಿ ಪ್ಯಾಕೇಜ್ ಎ (TV) ಪ್ರಸಾರದ ಹಕ್ಕು 23,575 ಕೋಟಿ ರೂಪಾಯಿಗೆ ಹರಾಜಾಗಿದೆ. ಕಳೆದ ಬಾರಿ ಸ್ಟಾರ್ ಇಂಡಿಯಾ 2017ರಲ್ಲಿ 16,347 ಕೋಟಿ ರೂ. ನೀಡಿತ್ತು. ಆದರೀಗ ಅದಕ್ಕಿಂತ 7 ಸಾವಿರ ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದು, ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿ ದಾಖಲಾಗಿದೆ. ಡಿಸ್ನಿ ಸ್ಟಾರ್ ಮುಂದಿನ ಐದು ವರ್ಷಗಳ ಕಾಲ ಐಪಿಎಲ್‌ನ ಭಾರತೀಯ ಟಿವಿ ಹಕ್ಕುಗಳನ್ನು ಉಳಿಸಿಕೊಂಡಿದೆ. Viacom18 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಭಾರತೀಯ ಟಿವಿ ಮತ್ತು ಪ್ರತಿ ಪಂದ್ಯದ ಡಿಜಿಟಲ್ ಹಕ್ಕುಗಳಿಂದ ಮಾತ್ರ ಪ್ರತಿ ಪಂದ್ಯದ ಮೌಲ್ಯವು 107.5 ಕೋಟಿಯಾಗಿದೆ.

ಇದನ್ನೂ ಓದಿ

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada