Pahalgam attack: ಭಾರತದಲ್ಲಿ ಪಾಕ್ ಸೂಪರ್ ಲೀಗ್ ಪಂದ್ಯಗಳ ಪ್ರಸಾರ ರದ್ದು
India Bans PSL Streaming: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ನಂತರ, ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರ ರದ್ದಾಗಿದೆ. ಫ್ಯಾನ್‌ಕೋಡ್ ಪಿಎಸ್‌ಎಲ್ ಪ್ರಸಾರವನ್ನು ನಿಲ್ಲಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಸಂಬಂಧಗಳ ಮೇಲೆ ಈ ಘಟನೆಯ ಪ್ರಭಾವ ಚರ್ಚೆಯಾಗುತ್ತಿದೆ. ಸೋನಿ ಸ್ಪೋರ್ಟ್ಸ್‌ನ ನಿರ್ಧಾರವನ್ನೂ ಎಲ್ಲರೂ ಕಾಯುತ್ತಿದ್ದಾರೆ. ಭಯೋತ್ಪಾದನೆಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಭಯೋತ್ಪಾದಕರ (Pahalgam Terrorist Attack) ಹೇಡಿತನದ ದಾಳಿಯಲ್ಲಿ ಅನೇಕ ಪ್ರವಾಸಿಗರು ಸಾವನ್ನಪ್ಪಿರುವ ಘಟನೆಗೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನ ಬೆಂಬಲಿತ ಉಗ್ರರ ಈ ಹೇಯ್ಯ ಕೃತ್ಯಕ್ಕೆ ದೇಶಾದ್ಯಂತ ಪ್ರತಿಕಾರದ ಕೂಗು ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಈಗಾಗಲೇ ಪಾಕಿಸ್ತಾನದ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈಗ ಪಾಕಿಸ್ತಾನ ಕ್ರಿಕೆಟ್ ಮೇಲೂ ಕ್ರಮ ಕೈಗೊಳ್ಳಲಾಗಿದ್ದು ಪಾಕಿಸ್ತಾನದ ಟಿ20 ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ (Pakistan Super League) ಅನ್ನು ಭಾರತದಲ್ಲಿ ಪ್ರಸಾರ ಮಾಡುವ ಕಂಪನಿಯು ತಕ್ಷಣದಿಂದ ಜಾರಿಗೆ ಬರುವಂತೆ ಲೀಗ್ ಪ್ರಸಾರವನ್ನು ರದ್ದುಗೊಳಿಸಿದೆ. ಇದರರ್ಥ ಈಗ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ.
ಭಾರತೀಯರ ಆಕ್ರೋಶ
ಏಪ್ರಿಲ್ 22, ಮಂಗಳವಾರ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ ಭಯೋತ್ಪಾದಕರ ರಕ್ತಸಿಕ್ತ ಆಟಕ್ಕೆ ಸಾಕ್ಷಿಯಾಯಿತು. ಕೆಲವು ಪಾಕಿಸ್ತಾನಿ ಭಯೋತ್ಪಾದಕರು ಹಲವಾರು ಪ್ರವಾಸಿಗರನ್ನು ಆಯ್ದು ಗುಂಡಿಕ್ಕಿ ಕೊಂದಿದ್ದರು. ಈ ಘಟನೆಯಲ್ಲಿ 26 ಜನರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಅಂದಿನಿಂದ, ಇಡೀ ದೇಶದಲ್ಲಿ ಪಾಕಿಸ್ತಾನಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪಾಠ ಕಲಿಸಬೇಕು ಮತ್ತು ಅದರ ವಿರುದ್ಧ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಇದೆ.
ಪಿಎಸ್‌ಎಲ್ ಪ್ರಸಾರ ರದ್ದು
ಇಷ್ಟೆಲ್ಲಾ ಆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಈ ವಿಷಯದಲ್ಲಿ ಎಲ್ಲರ ಕಣ್ಣುಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೇಲೆ ನೆಟ್ಟಿವೆ. ಆದರೆ ಅದಕ್ಕೂ ಮುನ್ನ, ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಫ್ಯಾನ್‌ಕೋಡ್ ಪಾಕಿಸ್ತಾನ ಸೂಪರ್ ಲೀಗ್‌ನ ಪ್ರಸಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಿದೆ.
‘ನಮ್ಮ ಸಮಾಜ…’; ಪಹಲ್ಗಾಮ್ ದುರಂತದಲ್ಲಿ ಮಡಿದವರಿಗೆ ಮೊಹಮ್ಮದ್ ಶಮಿ ಸಂತಾಪ
ವೇಳಾಪಟ್ಟಿ ಡಿಲೀಟ್
ಪಾಕಿಸ್ತಾನ ಸೂಪರ್ ಲೀಗ್‌ನ 10 ನೇ ಸೀಸನ್ ಏಪ್ರಿಲ್ 11 ರಂದು ಪ್ರಾರಂಭವಾಗಿದ್ದು ಇದುವರೆಗೆ, ಪಂದ್ಯಾವಳಿಯಲ್ಲಿ 13 ಪಂದ್ಯಗಳನ್ನು ಆಡಲಾಗಿತ್ತು. ಫ್ಯಾನ್‌ಕೋಡ್ ಈ ಪಂದ್ಯಗಳನ್ನು ಭಾರತದಲ್ಲಿ ಏಪ್ರಿಲ್ 23 ರವರೆಗೆ ಪ್ರಸಾರ ಮಾಡಿತ್ತು. ಆದರೆ ಇನ್ನು ಮುಂದೆ ಈ ಪಂದ್ಯಾವಳಿ ಭಾರತದಲ್ಲಿ ಪ್ರಸಾರವಾಗುವುದಿಲ್ಲ. ಆದಾಗ್ಯೂ ಫ್ಯಾನ್‌ಕೋಡ್ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಆದರೆ ಫ್ಯಾನ್‌ಕೋಡ್ ತನ್ನ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ಎಲ್ಲಾ ಪಿಎಸ್‌ಎಲ್ ಪಂದ್ಯಗಳ ಸ್ಟ್ರೀಮಿಂಗ್ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಇದರರ್ಥ ಈಗ ಪಂದ್ಯಾವಳಿಯನ್ನು ಭಾರತದಲ್ಲಿ ಪ್ರಸಾರ ಮಾಡಲಾಗುವುದಿಲ್ಲ.
ಸೋನಿ ಸ್ಪೋರ್ಟ್ಸ್ ವಿಷಯದಲ್ಲಿ, ಭಾರತದಲ್ಲಿ ಪಂದ್ಯಾವಳಿಯನ್ನು ಪ್ರಸಾರ ಮಾಡುತ್ತಾದೋ ಇಲ್ಲವೋ ಎಂಬುದರ ಕುರಿತು ಕಂಪನಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಸೋನಿ ಸ್ಪೋರ್ಟ್ಸ್ ಪಾಕಿಸ್ತಾನ ತಂಡದ ತವರಿನ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿತ್ತು. ಕೆಲವು ಪಂದ್ಯಗಳನ್ನು ಪ್ರಸಾರ ಮಾಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈ ಕಂಪನಿಯು ಪಾಕಿಸ್ತಾನಿ ಮಂಡಳಿಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಈಗ ಎಲ್ಲರ ಕಣ್ಣುಗಳು ನೆಟ್ಟಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ