IPL 2025: RCB ಪಾಲಿಗೆ ಕಂಟಕವಾಗಿರುವ 6ನೇ ಪಿಚ್
IPL 2025 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಯಾವ ಪಿಚ್ನಲ್ಲಿ ಜರುಗಲಿದೆ ಎಂಬುದೇ ಈಗ ಕುತೂಹಲ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈವರೆಗೆ 5 ಗೆಲುವು ದಾಖಲಿಸಿದೆ. ಈ ಐದು ಜಯ ಮೂಡಿಬಂದಿರುವುದು ಎದುರಾಳಿಗಳ ತವರು ಮೈದಾನದಲ್ಲಿ ಎಂಬುದು ವಿಶೇಷ. ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಆರ್ಸಿಬಿ ಮುಗ್ಗರಿಸಿದೆ. ಈ ಸೋಲಿನ ಬೆನ್ನಲ್ಲೇ ರಾಯಲ್ ಪಡೆಯ ಪಿಚ್ ಆಯ್ಕೆ ಬಗ್ಗೆ ಪ್ರಶ್ನೆಗಳೆದ್ದಿವೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೇಳೆ ರನ್ ಸುರಿಮಳೆ ಕಂಡು ಬರುತ್ತವೆ. ಆದರೆ ಈ ಬಾರಿ ಅಂತಹ ರನ್ ಮಳೆ ಕಂಡು ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಿನ್ನಸ್ವಾಮಿ ಮೈದಾನದಲ್ಲಿ 6ನೇ ಪಿಚ್ನಲ್ಲಿ ಆಡುತ್ತಿರುವುದು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಟ್ಟು 8 ಪಿಚ್ಗಳಿವೆ. ಅವುಗಳಲ್ಲಿ ಬಹುತೇಕ ಪಿಚ್ಗಳು ಪಂದ್ಯವಾಡಲು ಯೋಗ್ಯವಾಗಿದೆ. ಈ ಪಿಚ್ಗಳಲ್ಲಿ ಆರ್ಸಿಬಿ ಮೊದಲ ಮೂರು ಪಂದ್ಯಗಳಿಗೆ ಆಯ್ಕೆ ಮಾಡಿಕೊಂಡಿದ್ದು 6ನೇ ಪಿಚ್ ಎಂಬುದು ವಿಶೇಷ.
ಆರನೇ ಪಿಚ್ ಬ್ಯಾಟಿಂಗ್ಗೆ ಸಹಕಾರಿ. ಆದರೆ ಇದೇ ಪಿಚ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಬೌಲರ್ಗಳಿಗೆ ಹೆಚ್ಚಿನ ನೆರವು ಸಹ ಸಿಗುತ್ತದೆ. ಇದೇ ಕಾರಣದಿಂದಾಗಿ ಈ ಬಾರಿ ಆಡಿದ ಮೊದಲ ಮೂರು ಮ್ಯಾಚ್ಗಳಲ್ಲಿ ಬೃಹತ್ ಮೊತ್ತದ ಸ್ಕೋರ್ ಕಂಡು ಬಂದಿಲ್ಲ.
- ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಕಲೆಹಾಕಿದ್ದು ಕೇವಲ 169 ರನ್ಗಳು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡ 17.2 ಓವರ್ಗಳಲ್ಲಿ ಚೇಸ್ ಮಾಡಿತ್ತು.
- ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು 163 ರನ್ಗಳು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ಗಳಲ್ಲಿ ಚೇಸ್ ಮಾಡಿದೆ.
- ಮಳೆಯ ಕಾರಣ 14 ಓವರ್ಗಳಿಗೆ ಸೀಮಿತವಾಗಿದ್ದ ಮೂರನೇ ಪಂದ್ಯದಲ್ಲಿ ಆರ್ಸಿಬಿ ಕಲೆಹಾಕಿದ್ದು ಕೇವಲ 95 ರನ್ಗಳು ಮಾತ್ರ. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ 12.1 ಓವರ್ಗಳಲ್ಲಿ ಚೇಸ್ ಮಾಡಿದೆ.
6ನೇ ಪಿಚ್ನಲ್ಲಿ ಆಡಲಾದ ಈ ಮೂರು ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದೆ. ಅದರಲ್ಲೂ ಮೊದಲೆರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳನ್ನು ಆಡಿದರೂ 175 ರನ್ಗಳ ಗಡಿದಾಟಲು ಸಾಧ್ಯವಾಗಿಲ್ಲ ಎಂಬುದು ಉಲ್ಲೇಖಾರ್ಹ.
ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಮೊದಲ ಇನಿಂಗ್ಸ್ನ ಅವರೇಜ್ ಸ್ಕೋರ್ 193 ರನ್ಗಳು. ಇದಾಗ್ಯೂ ಆರ್ಸಿಬಿ ಮೂರು ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ 6ನೇ ಪಿಚ್ನಲ್ಲಿ ಪಂದ್ಯವಾಡುತ್ತಿರುವುದು.
ಅಲ್ಲದೆ 6ನೇ ಪಿಚ್ನಲ್ಲಿ ಪಂದ್ಯವಾಡಿ ಆರ್ಸಿಬಿ ತಂಡ ಮೂರು ಪಂದ್ಯಗಳಲ್ಲೂ ಸೋಲೊಪ್ಪಿಕೊಂಡಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಿಚ್ ಬದಲಿಸಿಕೊಳ್ಳಲಿದೆಯಾ ಎಂಬುದೇ ಪ್ರಶ್ನೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ನನ್ನ ದೇಶದ ಕೈವಾಡವಿದೆ: ಪಾಕ್ ಕ್ರಿಕೆಟಿಗನ ಹೇಳಿಕೆ..!
ಏಕೆಂದರೆ ಆರ್ಸಿಬಿ ಪಾಲಿಗೆ ಮುಂದಿನ 6 ಪಂದ್ಯಗಳು ನಿರ್ಣಾಯಕ. ಅದರಲ್ಲೂ ಮುಂದಿನ ಆರು ಮ್ಯಾಚ್ಗಳಲ್ಲಿ 4 ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ತವರು ಮೈದಾನದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಬಹುದು. ಹೀಗಾಗಿ ಆರ್ಸಿಬಿ 6ನೇ ಪಿಚ್ ಬಿಟ್ಟು ಬೇರೆ ಪಿಚ್ನಲ್ಲಿ ಕಣಕ್ಕಿಳಿಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.