Pakistan vs England: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್-ಇಂಗ್ಲೆಂಡ್ (Pakistan vs England) ನಡುವಣ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ಹೊಸ ಇತಿಹಾಸ ಬರೆದಿದೆ. ಅದು ಕೂಡ ಇಂಗ್ಲೆಂಡ್ ದಾಂಡಿಗರ ಸಿಡಿಲಬ್ಬರದ ಮೂಲಕ ಎಂಬುದು ವಿಶೇಷ. ಅಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲೇ ಇಂಗ್ಲೆಂಡ್ ತಂಡದ ನಾಲ್ವರು ಶತಕ ಸಿಡಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪಾಕ್ ಬೌಲರ್ಗಳಿಗೆ ಬಾಝ್ ಬಾಲ್ ಎಫೆಕ್ಟ್ ತೋರಿಸಿದರು.
ಮೊದಲ ಓವರ್ನಲ್ಲೇ 14 ರನ್ ಬಾರಿಸುವ ಮೂಲಕ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾವ್ಲೆ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್ಗೆ 233 ರನ್ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 35.4 ಓವರ್ಗಳಲ್ಲಿ ಎಂಬುದು ವಿಶೇಷ. ಈ ಭರ್ಜರಿ ಜೊತೆಯಾಟದಲ್ಲಿ ಝ್ಯಾಕ್ ಕ್ರಾವ್ಲೆ 111 ಎಸೆತಗಳಲ್ಲಿ 21 ಫೋರ್ನೊಂದಿಗೆ 122 ರನ್ ಬಾರಿಸಿದರು. ಮತ್ತೊಂದೆಡೆ ಬೆನ್ ಡಕೆಟ್ 110 ಎಸೆತಗಳಲ್ಲಿ 15 ಫೋರ್ನೊಂದಿಗೆ 107 ರನ್ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಈ ಹಂತದಲ್ಲಿ ಝಾಹಿದ್ ಮೆಹಮೂದ್ ಎಸೆತದಲ್ಲಿ ಕ್ರಾವ್ಲೆ (107) ಔಟಾದರೆ, ಇದರ ಬೆನ್ನಲ್ಲೇ ಹ್ಯಾರಿಸ್ ರೌಫ್ ಎಸೆತದಲ್ಲಿ ಡಕೆಟ್ (122) ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಯಾದ ಒಲಿ ಪೋಪ್ ಹಾಗೂ ಜೋ ರೂಟ್ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಆದರೆ 23 ರನ್ಗಳಿಸಿದ್ದ ರೂಟ್ ಝಾಹಿದ್ ಮೆಹಮೂದ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
ಆ ನಂತರ ಶುರುವಾಗಿದ್ದು ಪೋಪ್ ಹಾಗೂ ಹ್ಯಾರಿ ಬ್ರೂಕ್ ಅಬ್ಬರ. ಟೆಸ್ಟ್ ಕ್ರಿಕೆಟ್ನಲ್ಲಿ ಏಕದಿನ ಇನಿಂಗ್ಸ್ ಆಡಿದ ಈ ಜೋಡಿ ಪಾಕಿಸ್ತಾನದ ಪ್ರಮುಖ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ 104 ಎಸೆತಗಳಲ್ಲಿ 14 ಫೋರ್ನೊಂದಿಗೆ ಒಲಿ ಪೋಪ್ 108 ರನ್ ಬಾರಿಸಿದರು. ಇದೇ ವೇಳೆ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೋಪ್ ಎಲ್ಬಿ ಆಗಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸೌದ್ ಶಕೀಲ್ ಎಸೆದ 68ನೇ ಓವರ್ನ 6 ಎಸೆತಗಳಲ್ಲೂ ಭರ್ಜರಿ ಬೌಂಡರಿ ಬಾರಿಸಿದರು.
ಶಕೀಲ್ ಎಸೆದ ಮೊದಲ ಎಸೆತವನ್ನು ಔಟ್ ಸೈಡ್ ಆಫ್ನತ್ತ ಫೋರ್ ಬಾರಿಸಿದ ಬ್ರೂಕ್, 2ನೇ ಎಸೆತವನ್ನು ಎಕ್ಸ್ಟ್ರಾ ಕವರ್ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡರು. ಇನ್ನು 3ನೇ ಎಸೆತವನ್ನು ಆಕರ್ಷಕ ಆಫ್ ಸೈಡ್ ಶಾಟ್ ಮೂಲಕ ಬೌಂಡರಿಗೆ ತಲುಪಿಸಿದರು. ಹಾಗೆಯೇ 4ನೇ ಎಸೆತವನ್ನು ಆಫ್ ಸೈಡ್ನತ್ತ ಪುಲ್ ಮಾಡುವ ಮೂಲಕ ಫೋರ್ಗಳಿಸಿದರೆ, 5ನೇ ಎಸೆತವನ್ನು ಎಕ್ಸ್ಟ್ರಾ ಕವರ್ನತ್ತ ಬಾರಿಸಿದರು. ಇನ್ನು ಅಂತಿಮ ಎಸೆತವನ್ನು ಮಿಡ್ ವಿಕೆಟ್ನತ್ತ ಬಾರಿಸುವ ಮೂಲಕ ಸೌದ್ ಶಕೀಲ್ ಓವರ್ನಲ್ಲಿ 24 ರನ್ ಕಲೆಹಾಕಿದರು. ಈ ಮೂಲಕ ಒಂದೇ ಓವರ್ನಲ್ಲಿ 6 ಫೋರ್ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಹ್ಯಾರಿ ಬ್ರೂಕ್ ಸೇರ್ಪಡೆಯಾದರು.
ಅಷ್ಟೇ ಅಲ್ಲದೆ ಕೇವಲ 80 ಎಸೆತಗಳಲ್ಲಿ 14 ಫೋರ್, 2 ಸಿಕ್ಸ್ನೊಂದಿಗೆ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದ್ದರು. ಸದ್ಯ ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡು 506 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಹ್ಯಾರಿ ಬ್ರೂಕ್ (101) ಹಾಗೂ ನಾಯಕ ಬೆನ್ ಸ್ಟೋಕ್ಸ್ (34) ಅಜೇಯರಾಗಿ ಉಳಿದಿದ್ದಾರೆ.
112 ವರ್ಷಗಳ ವಿಶ್ವ ದಾಖಲೆ ಉಡೀಸ್:
ವಿಶೇಷ ಎಂದರೆ ಇಂಗ್ಲೆಂಡ್ ತಂಡವು ಮೊದಲ ದಿನದಾಟದಲ್ಲಿ ಕೇವಲ 75 ಓವರ್ಗಳಲ್ಲಿ 506 ರನ್ ಕಲೆಹಾಕಿದೆ. ಅಂದರೆ 450 ಎಸೆತಗಳಲ್ಲಿ 506 ರನ್ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಈ ಹಿಂದೆ ಮೊದಲ ದಿನದಾಟದಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು.
1910 ರಲ್ಲಿ ಆಸ್ಟ್ರೇಲಿಯಾ ತಂಡವು ಸಿಡ್ನಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಮೊದಲ ದಿನದಾಟದಲ್ಲಿ ಬರೋಬ್ಬರಿ 494 ರನ್ ಕಲೆಹಾಕಿ ದಾಖಲೆ ನಿರ್ಮಿಸಿತ್ತು. ಇದೀಗ ಮೊದಲ ದಿನದಾಟದಲ್ಲಿ 506 ರನ್ ಬಾರಿಸುವ ಮೂಲಕ ಇಂಗ್ಲೆಂಡ್ ತಂಡವು 112 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿ ಹಾಕಿರುವುದು ವಿಶೇಷ.
ಇದನ್ನೂ ಓದಿ: BazBall: ಟೆಸ್ಟ್ ಕ್ರಿಕೆಟ್ ಅನ್ನೇ ಉಡೀಸ್ ಮಾಡ್ತಾರಾ ಬಾಝ್: ಏನಿದು ಬಾಝ್ಬಾಲ್?
ಪಾಕ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಶತಕ ಬಾರಿಸಿದವರು:
Published On - 6:31 pm, Thu, 1 December 22