NZ vs PAK: ಬಾಬರ್- ರಿಜ್ವಾನ್ ಫ್ಲಾಪ್, ಕೊನೆಯ ಓವರ್​ನಲ್ಲಿ ಸಿಕ್ಸರ್! ತ್ರಿಕೋನ ಸರಣಿ ಗೆದ್ದ ಪಾಕಿಸ್ತಾನ

| Updated By: ಪೃಥ್ವಿಶಂಕರ

Updated on: Oct 14, 2022 | 11:38 AM

NZ vs PAK: ಪಾಕ್ ತಂಡದ ಇಫ್ತಿಕರ್ ಅಹ್ಮದ್ ಕೊನೆಯ ಓವರ್​ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು.

NZ vs PAK: ಬಾಬರ್- ರಿಜ್ವಾನ್ ಫ್ಲಾಪ್, ಕೊನೆಯ ಓವರ್​ನಲ್ಲಿ ಸಿಕ್ಸರ್! ತ್ರಿಕೋನ ಸರಣಿ ಗೆದ್ದ ಪಾಕಿಸ್ತಾನ
NZ vs PAK
Follow us on

ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯನ್ನು (tri-series) ಪಾಕಿಸ್ತಾನ ತಂಡ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಪಾಕ್ ತಂಡ, ಆತಿಥೇಯ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತ್ರಿಕೋನ ಸರಣಿಯನ್ನು ತಮ್ಮದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ (New Zealand) 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಗಳಿಸಿತು. ಇದಕ್ಕುತ್ತರವಾಗಿ 164 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ( Pakistan team) 5 ವಿಕೆಟ್‌ಗಳನ್ನು ಕಳೆದುಕೊಂಡು 3 ಎಸೆತಗಳು ಬಾಕಿ ಇರುವಂತೆಯೆ ಗುರಿ ತಲುಪಿತು. ಪಾಕ್ ತಂಡದ ಇಫ್ತಿಕರ್ ಅಹ್ಮದ್ (Iftikar Ahmed) ಕೊನೆಯ ಓವರ್​ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನದ ಗೆಲುವನ್ನು ಖಚಿತಪಡಿಸಿದರು.

ಇಷ್ಟು ದಿನ ಪಾಕ್ ತಂಡದ ಫ್ಲಾಪ್ ಸ್ಟಾರ್ ಎನಿಸಿಕೊಂಡಿದ್ದ ಇಫ್ತಿಕರ್ ಅಹ್ಮದ್, ಬಾಬರ್ ಪಡೆಯ ಈ ಸರಣಿ ಗೆಲುವಿನ ಹೀರೋ ಎನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ ನಿರಂತರವಾಗಿ ವಿಫಲರಾಗಿದ್ದ ಇಫ್ತಿಕರ್ ಅಹ್ಮದ್, ನ್ಯೂಜಿಲೆಂಡ್‌ ನೆಲದಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಈ ಪಂದ್ಯದಲ್ಲಿ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಮಿಂಚಿದಿದ್ದರೂ ಪಾಕ್ ತಂಡ ಸರಣಿ ಗೆಲ್ಲುವಲ್ಲಿ ತಂಡದ ಮಧ್ಯಮ ಕ್ರಮಾಂಕ ಹೆಚ್ಚು ಪ್ರಭಾವ ಬೀರಿತು. ಇದರೊಂದಿಗೆ ವಿಶ್ವಕಪ್​ಗೂ ಮುನ್ನ ನ್ಯೂಜಿಲೆಂಡ್‌ನಲ್ಲಿ ತ್ರಿಕೋನ ಸರಣಿ ಗೆದ್ದಿರುವುದು ಪಾಕಿಸ್ತಾನಕ್ಕೆ ಆನೆ ಬಲ ಬಂದಂತ್ತಾಗಿದೆ. 2022ರ ಟಿ20 ವಿಶ್ವಕಪ್‌ಗೂ ಮುನ್ನ ಈ ಗೆಲುವು ಅವರಿಗೆ ಟಾನಿಕ್‌ನಂತಿದ್ದು, ಇದರ ಪರಿಣಾಮವನ್ನು ಈಗ ಐಸಿಸಿ ಟೂರ್ನಿಯಲ್ಲೂ ಕಾಣಬಹುದಾಗಿದೆ.

ಬಾಬರ್-ರಿಜ್ವಾನ್ ಫ್ಲಾಪ್ ನಡುವೆಯೂ ಗೆದ್ದ ಪಾಕಿಸ್ತಾನ

ಪಾಕಿಸ್ತಾನದ ಈ ಗೆಲುವು ತುಂಬಾ ಅವಶ್ಯಕವಾಗಿತ್ತು. ಏಕೆಂದರೆ ಈ ಸರಣಿ ಗೆಲುವಿನೊಂದಿಗೆ ಪಾಕ್ ತಂಡದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತ್ತಾಗಿದೆ. ಪಾಕಿಸ್ತಾನ ತಂಡದ ಪ್ರಮುಖ ಸಮಸ್ಯೆಯಾಗಿದ್ದ ಮಧ್ಯಮ ಕ್ರಮಾಂಕ ಅಂತಿಮ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದೆ. ಈ ಸರಣಿಗೂ ಮೊದಲು ಬಾಬರ್ ಮತ್ತು ರಿಜ್ವಾನ್ ಒಂದು ವೇಳೆ ಬ್ಯಾಟಿಂಗ್​ನಲ್ಲಿ ವಿಫಲವಾದರೆ ಪಾಕಿಸ್ತಾ ಗೆಲ್ಲುವುದು ಕಷ್ಟ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಈ ಸರಣಿ ಮುನ್ನೆಲೆಗೆ ಬಂದಿದೆ.

ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನದ ಪ್ಲೇಯಿಂಗ್ XI ನ ಭಾಗವಾಗಿದ್ದರು. ಆದರೆ ಇವರಿಬ್ಬರಿಗೂ ದೊಡ್ಡ ಇನ್ನಿಂಗ್ಸ್ ಆಡಲಾಗಲಿಲ್ಲ. 164 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಬರ್ 14 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ, ರಿಜ್ವಾನ್ 29 ಎಸೆತಗಳಲ್ಲಿ 34 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರರ್ಥ ಈ ಇಬ್ಬರ ನಡುವೆ ಯಾವುದೇ ಪಾಲುದಾರಿಕೆ ಕಂಡುಬಂದಿಲ್ಲ. ಇದರ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗೆಲುವಿಗೆ ಅಗತ್ಯ ರನ್ ಗಳಿಸಿದ್ದರಿಂದ ಪಾಕಿಸ್ತಾನ ತ್ರಿಕೋನ ಸರಣಿಯನ್ನು ಗೆದ್ದುಕೊಂಡಿತು.

Published On - 11:18 am, Fri, 14 October 22