
ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಗೆ ಕೊಂಚ ಬ್ರೇಕ್ ಬಿದ್ದಿದೆ. ಉಭಯ ದೇಶಗಳು ಪ್ರಸ್ತುತ ಕದನ ವಿರಾಮ ಘೋಷಿಸಿವೆ. ಆದಾಗ್ಯೂ ತನ್ನ ನರಿ ಬುದ್ದಿ ಬಿಡದ ಪಾಕಿಸ್ತಾನ ಗಡಿ ರಾಜ್ಯಗಳ ಮೇಲೆ ಡ್ರೋನ್ ದಾಳಿ ಮಾಡುತ್ತಿದೆ. ಭಾರತ ಕೂಡ ತಕ್ಕೆ ತಿರುಗೇಟು ನೀಡುತ್ತಿದೆ. ಹೀಗಾಗಿ ಕದನ ವಿರಾಮದ ನಂತರವೂ ಭಾರತದ ದಾಳಿಗೆ ಬೆದರಿ ಬೆಂಡಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿಯಿಂದಾಗಿ, ಪ್ರೆಸಿಡೆಂಟ್ ಟ್ರೋಫಿ ಗ್ರೇಡ್ II ಟೂರ್ನಮೆಂಟ್, ಪ್ರಾದೇಶಿಕ ಇಂಟ್ರಾ-ಡಿಸ್ಟ್ರಿಕ್ಟ್ ಚಾಲೆಂಜ್ ಕಪ್ ಮತ್ತು ಅಂತರ-ಜಿಲ್ಲಾ ಅಂಡರ್-19 ಏಕದಿನ ಟೂರ್ನಮೆಂಟ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದೂಡಿದೆ.
ವಾಸ್ತವವಾಗಿ ಏಪ್ರಿಲ್‌ನಲ್ಲಿ ಪ್ರಾರಂಭವಾಗಿದ್ದ ದೇಶೀ ಟೂರ್ನಿ ಪ್ರೆಸಿಡೆಂಟ್ಸ್ ಟ್ರೋಫಿ ಗ್ರೇಡ್ II ಟೂರ್ನಮೆಂಟ್ ಮೇ ನಾಲ್ಕನೇ ವಾರದವರೆಗೆ ನಡೆಯಬೇಕಿತ್ತು. ಇದರ ಫೈನಲ್ ಪಂದ್ಯ ಮೇ 22 ರಂದು ನಡೆಯಬೇಕಿತ್ತು. ಆದರೆ ಭಾರತದ ದಾಳಿಗೆ ಹೆದರಿ ಈ ಟೂರ್ನಮೆಂಟ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಪಂದ್ಯಾವಳಿಯನ್ನು ಎಲ್ಲಿಗೆ ನಿಲ್ಲಿಸಲಾಗಿದೆಯೋ ಅಲ್ಲಿಂದಲೇ ಪುನರಾರಂಭಗೊಳ್ಳಲಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದೆ..
ಇದಕ್ಕೂ ಮೊದಲು, ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಮುಂದೂಡಿದ್ದ ಪಿಸಿಬಿ, ಆ ಬಳಿಕ ಈ ಪಂದ್ಯಾವಳಿಯನ್ನು ಯುಎಇ ನೆಲದಲ್ಲಿ ನಡೆಸಲಾಗುವುದು ಎಂದು ಘೋಷಿಸಿತ್ತು, ಆದರೆ ಯುಎಇ ತನ್ನ ಸ್ಥಳದಲ್ಲಿ ಪಿಎಸ್ಎಲ್ 2025 ರ ಪಂದ್ಯಗಳನ್ನು ಆಯೋಜಿಸಲು ನಿರಾಕರಿಸಿತು. ಈ ಕಾರಣಕ್ಕಾಗಿ, ಪ್ರಧಾನಿ ಶಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ, ಪಿಎಸ್ಎಲ್ 2025 ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಈಗ ಪಿಎಸ್ಎಲ್ ತಂಡಗಳ ಹೆಚ್ಚಿನ ವಿದೇಶಿ ಆಟಗಾರರು ತವರಿಗೆ ಮರಳಿದ್ದಾರೆ.
IPL 2025: ಉಳಿದ ಐಪಿಎಲ್ ಪಂದ್ಯಗಳಿಗೆ ಜೋಶ್ ಹೇಜಲ್‌ವುಡ್ ಅನುಮಾನ
ವಾಸ್ತವವಾಗಿ ಬಾಂಗ್ಲಾದೇಶ ತಂಡವು ಮೇ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಟಿ20 ಸರಣಿಯ ಪಂದ್ಯಗಳು ಲಾಹೋರ್ ಮತ್ತು ಫೈಸಲಾಬಾದ್‌ನಲ್ಲಿ ನಡೆಯಲಿವೆ. ಆದರೆ ಈ ನಗರಗಳ ಮೇಲೆ ಭಾರತದ ದಾಳಿ ಹೆಚ್ಚಾಗಿರುವ ಕಾರಣ ಬಾಂಗ್ಲಾದೇಶವು ಟಿ 20 ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ಹೋಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಹೀಗಾಗಿ ಈ ಸರಣಿಯನ್ನು ಕೂಡ ಮುಂದೂಡುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ