ಪಾಕಿಸ್ತಾನ್ ಹೊರಕ್ಕೆ: ಭಾರತದಲ್ಲೇ ಸೆಮಿಫೈನಲ್, ಫೈನಲ್ ಪಂದ್ಯ

Womens ODI World Cup 2025: ಮಹಿಳಾ ಏಕದಿನ ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ, ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಭಾರತ, ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ನಡುವೆ ಸೆಮಿಫೈನಲ್ ರೇಸ್ ಮುಂದುವರೆದಿದೆ.

ಪಾಕಿಸ್ತಾನ್ ಹೊರಕ್ಕೆ: ಭಾರತದಲ್ಲೇ ಸೆಮಿಫೈನಲ್, ಫೈನಲ್ ಪಂದ್ಯ
Ind Vs Pak

Updated on: Oct 22, 2025 | 12:55 PM

ಮಹಿಳಾ ಏಕದಿನ ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಬಿದ್ದಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಪಾಕ್ ಪಡೆ ಸೋಲನುಭವಿಸಿದೆ. ಇನ್ನು ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದವು. ಅದರಂತೆ ಕೇವಲ 2 ಅಂಕಗಳನ್ನು ಮಾತ್ರ ಪಡೆದಿರುವ ಪಾಕಿಸ್ತಾನ್ ತಂಡ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ.

ಇತ್ತ ಪಾಕಿಸ್ತಾನ್ ತಂಡವು ಸೆಮಿಫೈನಲ್​ ರೇಸ್​ನಿಂದ ಹೊರಬೀಳುತ್ತಿದ್ದಂತೆ ಈ ಬಾರಿಯ ಏಕದಿನ ವಿಶ್ವಕಪ್​ನ ನಾಕೌಟ್ ಪಂದ್ಯಗಳು ಭಾರತದಲ್ಲೇ ನಡೆಯುವುದು ಖಚಿತವಾಗಿದೆ. ಇದಕ್ಕೂ ಮುನ್ನ ಈ ಪಂದ್ಯಗಳನ್ನು ಕೊಲಂಬೊದಲ್ಲಿ ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿತ್ತು.

ಕೊಲಂಬೊದಲ್ಲಿ ಯಾಕೆ?

ಏಕದಿನ ವಿಶ್ವಕಪ್​ಗೂ ಮುನ್ನ ಭಾರತದಲ್ಲಿ ಪಂದ್ಯವಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರಾಕರಿಸಿತ್ತು. ಅದರಂತೆ ಪಾಕಿಸ್ತಾನ್ ತಂಡದ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿತ್ತು. ಅಂದರೆ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಅದರಂತೆ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೆ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದೆ.

ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್​​ಗೆ ಪ್ರವೇಶಿಸಿದರೆ, ಮೊದಲ ಸೆಮಿಫೈನಲ್ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಅಷ್ಟೇ ಅಲ್ಲದೆ ಪಾಕ್ ತಂಡ ಫೈನಲ್​ಗೆ ತಲುಪಿದ್ದರೆ, ಅಂತಿಮ ಪಂದ್ಯವನ್ನೂ ಸಹ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಬೇಕಿತ್ತು.

ಆದರೀಗ ಪಾಕಿಸ್ತಾನ್ ತಂಡವು ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಇದರಿಂದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನು ಕೊಲಂಬೊದಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.

ಫೈನಲ್ ಪಂದ್ಯ ನಡೆಯುವುದು ಎಲ್ಲಿ?

ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನು ಮೊದಲ ಸೆಮಿಫೈನಲ್​​​ಗೆ ಸ್ಥಳ ಇನ್ನೂ ಸಹ ನಿಗದಿ ಮಾಡಲಾಗಿಲ್ಲ.

ಅತ್ತ ಪಾಕಿಸ್ತಾನ್ ತಂಡ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಬಿಸಿಸಿಐ ಇನ್ನಷ್ಟೇ ಮೊದಲ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಸ್ಟೇಡಿಯಂ ನಿಗದಿ ಮಾಡಲಿದೆ. ಅದರಂತೆ ಅಹಮದಾಬಾದ್ ಅಥವಾ ಕೊಲ್ಕತ್ತಾ ಅಥವಾ ಮುಂಬೈನಲ್ಲಿ ಅಂತಿಮ ಹಣಾಹಣಿ ನಡೆಯಬಹುದು.

ಇದನ್ನೂ ಓದಿ: ಈ ಒಂದು ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇದುವೇ ಕೊನೆಯ ಅವಕಾಶ

ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳ ವೇಳಾಪಟ್ಟಿ:

  • ಅಕ್ಟೋಬರ್ 29- ಮೊದಲ ಸೆಮಿಫೈನಲ್ ಪಂದ್ಯ​ (ಸ್ಥಳ ನಿಗದಿಪಡಿಸಲಾಗಿಲ್ಲ)
  • ಅಕ್ಟೋಬರ್ 30- ಎರಡನೇ ಸೆಮಿಫೈನಲ್ ಪಂದ್ಯ (ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ)
  • ನವೆಂಬರ್ 2- ಫೈನಲ್ ಪಂದ್ಯ (ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ)