ಭಾರತದೆದುರಿನ ಪಂದ್ಯಕ್ಕೂ ಮುನ್ನ ನಂ.1 ಸ್ಥಾನದಿಂದ ಮತ್ತೆ ಕೆಳಗಿಳಿದ ಪಾಕಿಸ್ತಾನ..!
ICC Team Ranking: ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಉಭಯ ತಂಡಗಳು ಒಂದೊಂದು ಏಕದಿನ ಪಂದ್ಯವನ್ನಾಡಿದಾಗಲೆಲ್ಲ, ರ್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ.
ಏಷ್ಯಾಕಪ್ ಸೂಪರ್ ಫೋರ್ ಸುತ್ತಿನಲ್ಲಿ ಟೀಂ ಇಂಡಿಯಾವನ್ನು ಎದುರಿಸಲು ತಯಾರಿ ನಡೆಸಿರುವ ಪಾಕಿಸ್ತಾನ ತಂಡ (India vs Pakistan) ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ (ICC ODI Team Ranking) ತನ್ನ ನಂ.1 ಕಿರೀಟವನ್ನು ಮತ್ತೊಮ್ಮೆ ಕಳೆದುಕೊಂಡಿದೆ. ಏಕದಿನ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಉಭಯ ತಂಡಗಳು ಒಂದೊಂದು ಏಕದಿನ ಪಂದ್ಯವನ್ನಾಡಿದಾಗಲೆಲ್ಲ, ರ್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾದ (South Africa vs Australia) ಏಕದಿನ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಏಕದಿನ ಮಾದರಿಯಲ್ಲಿ ನಂ. 1 ಸ್ಥಾನವನ್ನು ಅಲಂಕರಿಸಿತ್ತು. ಆ ಬಳಿಕ ಆಫ್ರಿಕಾ- ಆಸೀಸ್ ಏಕದಿನ ಸರಣಿಯಲ್ಲಿ, ಕಾಂಗರೂ ಪಡೆ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸುವುದರೊಂದಿಗೆ ಮತ್ತೊಮ್ಮೆ ನಂ.1 ಪಟ್ಟವನ್ನು ತನ್ನ ಖಾತೆಗೆ ಹಾಕಿಕೊಂಡಿತ್ತು.
ಆಸೀಸ್ಗೆ ಸತತ 2ನೇ ಗೆಲುವು
ಪ್ರಸ್ತುತ ಈಗ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಬೀಗಿರುವ ಆಸ್ಟ್ರೇಲಿಯನ್ ತಂಡ ಈಗ ವಿಶ್ವದ ಹೊಸ ನಂ.1 ಏಕದಿನ ತಂಡವಾಗಿ ಹೊರಹೊಮ್ಮಿದೆ. ಉಭಯ ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಇಬ್ಬರ ಶತಕದ ನೆರವಿನಿಂದ 392 ರನ್ಗಳ ಬೃಹತ್ ಗುರಿ ಸೆಟ್ ಮಾಡಿತು.
ಪಾಕ್ ಮಾಜಿನಾಯಕನ ಮಗಳನ್ನು ಎರಡನೇ ಬಾರಿಗೆ ವರಿಸಲಿದ್ದಾರೆ ವೇಗಿ ಶಾಹೀನ್ ಅಫ್ರಿದಿ..!
ಇನ್ನು ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 269 ರನ್ಗಳಿಗೆ ಆಲೌಟ್ ಆಗುವ ಮೂಲಕ 123 ರನ್ಗಳ ಹೀನಾಯ ಸೋಲು ಅನುಭವಿಸಿತು. ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ಆಸ್ಟ್ರೇಲಿಯಾ ವಿಶ್ವ ನಂ.1
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮತ್ತೆ ಏಕದಿನ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತು. ಪ್ರಸ್ತುತ ಆಸೀಸ್ 121 ರೇಟಿಂಗ್ ಅಂಕಗಳನ್ನು ಹೊಂದಿದ್ದರೆ, 120 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ರ್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಭಾರತವು 114 ರೇಟಿಂಗ್‌ಗಳೊಂದಿಗೆ ವಿಶ್ವದಲ್ಲಿ ನಂ.3 ಸ್ಥಾನದಲ್ಲಿದೆ.
ಇದೀಗ ಪಾಕಿಸ್ತಾನ, ಭಾರತದೆದುರು ಏಕದಿನ ಏಷ್ಯಾಕಪ್ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಪಾಕ್ ಗೆದ್ದರೆ, ರ್ಯಾಂಕಿಂಗ್ನಲ್ಲಿ ಮತ್ತೆ ಬದಲಾವಣೆ ಕಂಡು ಬರಲಿದೆ. ಒಂದು ವೇಳೆ ಪಾಕಿಸ್ತಾನ, ಭಾರತದೆದುರು ಸೋತರೆ, ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲೇ ಮುಂದುವರೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ