ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ರಣರೋಚಕ ಕದನ ಇದೇ ಭಾನುವಾರ ಏಷ್ಯಾಕಪ್ 2022 ರಲ್ಲಿ ನಡೆಯಲಿದೆ. ಹೈವೋಲ್ಟೇಜ್ ಪಂದ್ಯದ ಒತ್ತಡದ ನಡುವೆ ಉಭಯ ತಂಡಗಳು ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ-ಪಾ್ ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ವೇಳೆ ವಿಶ್ವ ಶ್ರೇಷ್ಠ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಬರ್ ಅಜಮ್ (Babar Azam) ಮುಖಾಮುಖಿ ಆದ ಘಟನೆ ನಡೆದಿತ್ತು. ಈ ಫೋಟೋ ಭರ್ಜರಿ ವೈರಲ್ ಕೂಡ ಆಗಿತ್ತು.
ಸದ್ಯ ಇದರ ಬಗ್ಗೆ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಸಕ್ಲೈನ್ ಮುಸ್ತಾಕ್ ಮಾತನಾಡಿದ್ದು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ”ಕೆಲವು ವರ್ಷಗಳ ಹಿಂದೆ ನಾನು ಆಲ್–ಸ್ಟಾರ್ ಗೇಮ್ ಆಡಲು ಹೋಗಿದ್ದೆ, ಅಲ್ಲಿ ವಿಶ್ವದ ಟಾಪ್ 25 ಕ್ರಿಕೆಟಿಗರು ಇದ್ದರು ಮತ್ತು ನಾವು ಒಟ್ಟಿಗೆ ಆಡುತ್ತಿದ್ದೆವು. ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ಎಲ್ಲರೂ ಒಟ್ಟಾಗಿ ಸೇರಿದ ಪಂದ್ಯವಾಗಿತ್ತು. ಆ ಪಂದ್ಯವನ್ನು ಅಮೆರಿಕದಲ್ಲಿ ಕೇವಲ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಮಾತ್ರ ಫಾಲೋ ಮಾಡುತ್ತಿದ್ದರು. ವಿಶೇಷ ಎಂದರೆ ಆ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಒಟ್ಟಿಗೆ ಧ್ವಜಗಳನ್ನು ಹೊಲಿಯುತ್ತಿದ್ದರು ಮತ್ತು ಅದನ್ನು ಏಕರೂಪದಲ್ಲಿ ಪ್ರದರ್ಶಿಸಿದರು. ಇದನ್ನು ಕಂಡು ಖುಷಿಯಾಗಿತ್ತು,” ಎಂದು ಹೇಳಿದ್ದಾರೆ.
”ಇದು ಕೇವಲ ಕ್ರಿಕೆಟ್ ಮತ್ತು ಮನರಂಜನೆ ಅಲ್ಲ ಎಂದು ನಾನು ಆಗ ಟ್ವೀಟ್ ಮಾಡಿದ್ದೆ. ಇದು ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ. ನಾವು ಪಂದ್ಯಗಳನ್ನು ಆಡಿದಾಗ, ಭಾವನೆಗಳು ಉತ್ತುಂಗಕ್ಕೇರುತ್ತವೆ. ಆದರೆ ಈ ಆಟವು ಮಾನವೀಯತೆಯ ಬಗ್ಗೆ ಪಾಠಗಳನ್ನು ನೀಡಲು ಸಹಾಯ ಮಾಡುತ್ತದೆ. ಬಾಬರ್ ಮತ್ತು ವಿರಾಟ್ ನಡುವಿನ ಫೋಟೋ ಕೂಡ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದಿದ್ದಾರೆ.
”ಭಾರತ–ಪಾಕಿಸ್ತಾನ ಪಂದ್ಯ ಅದೊಂದು ಮನರಂಜನೆ, ಅದೊಂದು ಕ್ರೀಡೆ. ಭಾವನೆಗಳು ಹೆಚ್ಚು ಇರುತ್ತದೆ. ಆದರೆ ದಿನದ ಕೊನೆಯಲ್ಲಿ ಇದೊಂದು ಕ್ರೀಡೆಯಷ್ಟೆ. ನಾವು ಪ್ರೀತಿಯ ಸಂದೇಶವನ್ನು ಹರಡಲು ಪ್ರಯತ್ನಿಸುತ್ತಿದ್ದೇವೆ. ಅದಕ್ಕಾಗಿಯೇ ಎರಡೂ ದೇಶಗಳ ಆಟಗಾರರು ಪರಸ್ಪರ ಒಟ್ಟಾಗಿ ಬೆರೆಯುತ್ತಾರೆ,” ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ 28 ರಂದು ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ–ಬಾಬರ್ ಮೇಲೆ ಎಲ್ಲರ ಕಣ್ಣಿದೆ. ಬೊಂಬಾಟ್ ಫಾರ್ಮ್ನಲ್ಲಿರುವ ಬಾಬರ್ ಮತ್ತು ಕೊಹ್ಲಿ ಆಟ ಹೇಗಿರಲಿದೆ ಎಂದು ನೋಡಲು ಅನೇಕರು ಕಾದುಕುಳಿತಿದ್ದಾರೆ. ಕೊಹ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದ ನಡುವೆ ಇತ್ತೀಚೆಗಷ್ಟೆ ಪಾಕ್ ನಾಯಕ ಬಾಬರ್ ಅಜಮ್ ಟ್ವೀಟ್ ಮಾಡಿ ಕೊಹ್ಲಿಗೆ ವಿಶೇಷ ಸಂದೇಶ ರವಾನಿಸಿದ್ದರು. ‘ಇದೂ ಸಾಗಿಹೋಗಲಿದೆ, ಗಟ್ಟಿಯಾಗಿರಿ’ ಎಂದು ಬರೆದಿದ್ದರು. ಇದಕ್ಕೆ ಕೊಹ್ಲಿ ಕೂಡ ಪ್ರತಿಕ್ರಿಯಿಸಿ, ‘ಧನ್ಯವಾದಗಳು. ಹೀಗೇ ಮಿಂಚುತ್ತಿರಿ ಮತ್ತು ಮೇಲೇರುತ್ತಿರಿ. ನಿಮಗೆ ಶುಭವಾಗಲಿ’ ಎಂದು ಮರು ಟ್ವೀಟ್ ಮಾಡಿದ್ದರು.
Published On - 11:23 am, Fri, 26 August 22