Asia Cup 2023: ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ನ ಅನಿಶ್ಚಿತತೆ ಮುಂದುವರೆದಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಭಾಗವಹಿಸುವುದಿಲ್ಲ ಎಂಬ ಬಿಸಿಸಿಐ ಅಧ್ಯಕ್ಷ ಜಯ್ ಶಾ ಅವರ ಹೇಳಿಕೆಯಿಂದ ಶುರುವಾದ ಚರ್ಚೆಯು ಇದೀಗ ಎರಡು ಮಂಡಳಿಗಳ ವಾಕ್ಸಮರಕ್ಕೆ ಕಾರಣವಾಗಿದೆ. ಇತ್ತ ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಯೋಜಿಸಿದರೆ ಮಾತ್ರ ಭಾರತ ತಂಡವು ಭಾಗವಹಿಸಲಿದೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ ಟೂರ್ನಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸುವುದಾಗಿ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ (Ramiz Raja) ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಪಾಕಿಸ್ತಾನದಲ್ಲಿ ಟೂರ್ನಿ ಆಯೋಜಿಸಿ ಟೀಮ್ ಇಂಡಿಯಾ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ್ ಹಿಂದೆ ಸರಿಯಲಿದೆ ಎಂದು ಈ ಹಿಂದೆ ರಮೀಜ್ ರಾಜಾ ಬೆದರಿಸುವ ತಂತ್ರಕ್ಕೆ ಕೈಹಾಕಿದ್ದರು. ಆದರೆ ಪಿಸಿಬಿ ಮುಖ್ಯಸ್ಥನ ಹೇಳಿಕೆಯನ್ನು ಭಾರತ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇದೀಗ ಯು-ಟರ್ನ್ ಹೊಡೆದಿರುವ ಪಿಸಿಬಿ ಮುಖ್ಯಸ್ಥ, ಭಾರತ ಆಡದಿದ್ದರೂ ನಾವು ಟೂರ್ನಿ ನಡೆಸಲಿದ್ದೇವೆ ಎಂದಿದ್ದಾರೆ.
2023 ರ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ್ ಹೊಂದಿದೆ. ಹೀಗಾಗಿ ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಭಾರತ ಭಾಗವಹಿಸದಿದ್ದರೆ, ನಾವು ಟೂರ್ನಿಯನ್ನು ಆಯೋಜಿಸಲು ರೆಡಿ. ಟೀಮ್ ಇಂಡಿಯಾ ಇಲ್ಲದಿದ್ದರೂ ನಾವು ಏಷ್ಯಾಕಪ್ ಆಯೋಜಿಸಲಿದ್ದೇವೆ. ಒಂದು ವೇಳೆ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಿದರೆ ಪಾಕಿಸ್ತಾನ್ ತಂಡ ಏಷ್ಯಾಕಪ್ನಿಂದ ಹೊರಗುಳಿಯಲಿದೆ ಎಂದು ರಮೀಜ್ ರಾಜಾ ತಿಳಿಸಿದ್ದಾರೆ.
ಇದಾಗ್ಯೂ ಈ ಬಾರಿ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ್ ಹಿಂದೆ ಸರಿಯಲಿದೆ ಎಂಬ ಹೇಳಿಕೆಯನ್ನು ಮಾತ್ರ ಪುನರುಚ್ಚರಿಸಿಲ್ಲ. ಏಕೆಂದರೆ ಭಾರತದಲ್ಲಿ ಏಕದಿನ ವಿಶ್ವಕಪ್ ಅನ್ನು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುತ್ತಿದೆ. ಒಂದು ವೇಳೆ ಐಸಿಸಿ ಟೂರ್ನಿಯಿಂದ ಪಾಕಿಸ್ತಾನ್ ಹೊರಗುಳಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ಭಾರತದಲ್ಲಿ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವ ಸಾಹಸಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗುವುದಿಲ್ಲ ಎಂಬುದು ಸ್ಪಷ್ಟ.
ಇತ್ತ ಏಷ್ಯಾಕಪ್ ಅನ್ನು ಪಾಕಿಸ್ತಾನದಲ್ಲೇ ಆಯೋಜಿಸಲು ಪಿಸಿಬಿ ಮುಂದಾದರೂ ಅದರ ಮೇಲೆ ಬಿಸಿಸಿಐಯ ಪ್ರಭಾವ ಕೂಡ ಕಂಡು ಬರಲಿದೆ. ಏಕೆಂದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ, ಇತರೆ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು.
ಇದನ್ನೂ ಓದಿ: IPL 2023: CSK ತಂಡದ ಮುಂದಿನ ನಾಯಕ ಯಾರೆಂಬ ಸುಳಿವು ನೀಡಿದ ಮೈಕೆಲ್ ಹಸ್ಸಿ
ಈಗಾಗಲೇ ಪಾಕಿಸ್ತಾನದ ಮಾಜಿ ಆಟಗಾರ ದಾನಿಶ್ ಕನೇರಿಯಾ ಕೂಡ ಪಾಕ್ ಕ್ರಿಕೆಟ್ ಮಂಡಳಿಗೆ ಇಂತಹದೊಂದು ಎಚ್ಚರಿಕೆ ನೀಡಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡಲು ಹಿಂಜರಿದರೆ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಕೂಡ ಟೂರ್ನಿಯಿಂದ ಹಿಂದೆ ಸರಿಯಬಹುದು ಎಂದಿದ್ದಾರೆ. ಹೀಗಾಗಿಯೇ ಇದೀಗ ಭಾರತ ತಂಡ ಭಾಗವಹಿಸದಿದ್ದರೂ, ನಾವು ಪಾಕಿಸ್ತಾನದಲ್ಲೇ ಟೂರ್ನಿಯನ್ನು ಆಯೋಜಿಸುತ್ತೇವೆ. ಒಂದು ವೇಳೆ ತಟಸ್ಥ ಸ್ಥಳದಲ್ಲಿ ಆಯೋಜಿಸಿದರೆ ಪಾಕಿಸ್ತಾನ್ ತಂಡ ಏಷ್ಯಾಕಪ್ನಿಂದ ಹೊರಗುಳಿಯಲಿದೆ ಎಂದು ರಮೀಜ್ ರಾಜಾ ತಿಳಿಸಿದ್ದಾರೆ.
Published On - 10:59 pm, Sat, 3 December 22