ಇದೆಂತಾ ಅತಿರೇಕ… ಟೆಂಬಾ ಬವುಮಾ ಮುಂದೆ ಪಾಕಿಸ್ತಾನಿಗಳ ಪರಾಕ್ರಮ..!

Pakistan vs South Africa: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 352 ರನ್ ಕಲೆಹಾಕಿದರೆ, ಈ ಗುರಿಯನ್ನು ಪಾಕಿಸ್ತಾನ್ 49 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಪಂದ್ಯದ ನಡುವೆ ಪಾಕಿಸ್ತಾನ್ ಆಟಗಾರರು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರನ್ನು ಗುರಿಯಾಗಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು.

ಇದೆಂತಾ ಅತಿರೇಕ... ಟೆಂಬಾ ಬವುಮಾ ಮುಂದೆ ಪಾಕಿಸ್ತಾನಿಗಳ ಪರಾಕ್ರಮ..!
Pak Vs Sa

Updated on: Feb 13, 2025 | 10:58 AM

ಜಂಟಲ್​ಮ್ಯಾನ್ ಗೇಮ್​ನ ಜಂಟಲ್​ಮ್ಯಾನ್​ಗಳಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಕೂಡ ಒಬ್ಬರು. ಮೈದಾನದಲ್ಲಾಗಲಿ, ಹೊರಗೆಯಾಗಲಿ ಯಾವುದೇ ವಿವಾದಕ್ಕೀಡಾಗದ ಆಟಗಾರ. ಅದರಲ್ಲೂ ಪ್ರತಿಯೊಬ್ಬ ಆಟಗಾರರೊಂದಿಗೆ ಬವುಮಾ ಗೌರವದಿಂದಲೇ ವರ್ತಿಸುತ್ತಾರೆ. ಇದಾಗ್ಯೂ ಪಾಕ್ ಆಟಗಾರರು ಟೆಂಬಾ ಬವುಮಾ ಅವರನ್ನು ಗುರಿಯಾಗಿಸಿಕೊಂಡಿದ್ದು ಯಾಕೆ ಎಂಬುದೇ ಪ್ರಶ್ನೆ.

ಹೌದು, ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಬವುಮಾ ಬ್ಯಾಟಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಟೆಂಬಾ ಬವುಮಾ ಅತ್ಯುತ್ತಮ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ಬವುಮಾ 96 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ 82 ರನ್ ಬಾರಿಸಿದ್ದರು.

ಆದರೆ 29ನೇ ಓವರ್​ನ 5ನೇ ಎಸೆತವನ್ನು ಎದುರಿಸಿದ ಟೆಂಬಾ ಬವುಮಾ ರನ್​ ಓಡುವ ಯತ್ನದಲ್ಲಿ ರನೌಟ್ ಆದರು. ಇತ್ತ ಟೆಂಬಾ ಬವುಮಾ ವಿಕೆಟ್ ಸಿಗುತ್ತಿದ್ದಂತೆ ಪಾಕ್ ಫೀಲ್ಡರ್​ಗಳು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.

ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಅಘಾ, ಸೌದ್ ಶಕೀಲ್ ಹಾಗೂ ಕಮ್ರಾನ್ ಗುಲಾಮ್ ಟೆಂಬಾ ಬವುಮಾ ಅವರನ್ನು ಸುತ್ತುವರೆದು ಸಂಭ್ರಮಿಸಿದ್ದಾರೆ. ಅದರಲ್ಲೂ ಸೌದ್ ಶಕೀಲ್ ಹಾಗೂ ಕಮ್ರಾನ್ ಗುಲಾಮ್ ಆಕ್ರಮಣಕಾರಿ ವರ್ತನೆಯೊಂದಿಗೆ ಬವುಮಾ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ಪಾಕ್ ಆಟಗಾರರ ಅತಿರೇಕದ ವರ್ತನೆ:

ಮೊದಲೇ ಹೇಳಿದಂತೆ ಜಂಟಲ್​ಮ್ಯಾನ್ ಗೇಮ್​ನ ಜಂಟಲ್​ಮ್ಯಾನ್​ ಆಟಗಾರನಾಗಿರುವ ಟೆಂಬಾ ಬವುಮಾ ಒಂದೇ ಒಂದು ಮಾತನಾಡದೇ, ಈ ವರ್ತನೆ ಬಗ್ಗೆ ಅಂಪೈರ್​ಗೆ ದೂರು ನೀಡದೇ ಹೊರ ನಡೆದಿದ್ದಾರೆ. ಇದೀಗ ಪಾಕಿಸ್ತಾನ್ ಆಟಗಾರರ ಈ ಅತಿರೇಕದ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಭಾರತದ ಯಾವುದೇ ಬ್ಯಾಟರ್​ಗೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಶುಭ್​ಮನ್ ಗಿಲ್

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 49 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 355 ರನ್ ಬಾರಿಸಿದ್ದಾರೆ. ಈ ಮೂಲಕ ಪಾಕ್ ಪಡೆ ದಾಖಲೆಯ ವಿಜಯ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.