PSL 2025: ವಿದೇಶಿ ಆಟಗಾರರು ಬರದಿದ್ದರೂ, ಮೇ 16 ರಿಂದ ಲೀಗ್ ಮತ್ತೆ ಆರಂಭ
PSL 2025: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಶೀಘ್ರದಲ್ಲೇ ಮರು ಆರಂಭಗೊಳ್ಳಲಿದೆ. ಉಭಯ ದೇಶಗಳ ನಡುವಿನ ಕದನವಿರಾಮದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಿಎಸ್‌ಎಲ್‌ನ ಉಳಿದ ಪಂದ್ಯಗಳು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಮುನ್ನ ಪೂರ್ಣಗೊಳ್ಳಲಿವೆ. ವಿದೇಶಿ ಆಟಗಾರರ ಆಗಮನದ ಬಗ್ಗೆ ಅನಿಶ್ಚಿತತೆಯಿದ್ದರೂ, ಪಿಎಸ್‌ಎಲ್ ಅನ್ನು ಯಾವುದೇ ವೆಚ್ಚದಲ್ಲಾದರೂ ಪೂರ್ಣಗೊಳಿಸುವ ಉದ್ದೇಶ ಪಿಸಿಬಿ ಹೊಂದಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಎರಡೂ ದೇಶಗಳಲ್ಲಿ ನಡೆಯುತ್ತಿದ್ದ ಟಿ20 ಲೀಗ್ಗಳಾದ ಐಪಿಎಲ್ (IPL 2025) ಮತ್ತು ಪಾಕಿಸ್ತಾನ ಸೂಪರ್ ಲೀಗ್ (PSL 2025) ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೀಗ ಉಭಯ ದೇಶಗಳು ಕದನ ವಿರಾಮ ಘೋಷಿಸಿರುವುದರಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ ಶೀಘ್ರದಲ್ಲೇ ಮತ್ತೆ ಪ್ರಾರಂಭವಾಗಲಿದ್ದು, ಉಳಿದ ಎಲ್ಲಾ ಪಂದ್ಯಗಳು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೊದಲು ಪೂರ್ಣಗೊಳ್ಳಲಿವೆ ಎಂದು ವರದಿಯಾಗಿದೆ. ಪಿಸಿಬಿ ಮೂಲಗಳ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್ಎಲ್ ಅನ್ನು ಪುನರಾರಂಭಿಸಲು ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮೇ ತಿಂಗಳ ಅಂತ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಮುನ್ನ ಪಿಎಸ್‌ಎಲ್ ಫೈನಲ್ ಪಂದ್ಯವನ್ನು ನಡೆಸುವ ಗುರಿಯನ್ನು ಪಿಸಿಬಿ ಹೊಂದಿದೆ. ಪಾಕಿಸ್ತಾನ ಸೂಪರ್ ಲೀಗ್‌ನ ಉಳಿದ ಪಂದ್ಯಗಳು ಮೇ 16 ರಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ.
ವಿದೇಶಿ ಆಟಗಾರರು ಬರ್ತರಾ?
ಪಿಸಿಬಿ ಮೂಲಗಳ ಪ್ರಕಾರ, ವಿದೇಶಿ ಆಟಗಾರರು ಬರಲಿ ಅಥವಾ ಬರದಿರಲಿ, ಪಿಎಸ್ಎಲ್ ಅನ್ನು ಯಾವುದೇ ಬೆಲೆ ತೆತ್ತಾದರೂ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಪಿಸಿಬಿ ಅಧಿಕಾರಿಯ ಪ್ರಕಾರ, ಕೆಲವು ವಿದೇಶಿ ಆಟಗಾರರು ಇನ್ನೂ ದುಬೈನಲ್ಲಿದ್ದರೆ, ಕೆಲವರು ಮನೆಗೆ ಮರಳಿದ್ದಾರೆ. ವಿದೇಶಿ ಆಟಗಾರರನ್ನು ಮರಳಿ ಕರೆತರುವಂತೆ ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ, ಆದರೆ ಅಂತಿಮ ನಿರ್ಧಾರವು ಆಟಗಾರರು ಮತ್ತು ಅವರ ಮಂಡಳಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಮಾತ್ರವಲ್ಲದೆ ಪಿಸಿಬಿ, ಪಿಎಸ್‌ಎಲ್‌ನ ಉಳಿದ ಪಂದ್ಯಗಳನ್ನು ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಆಯೋಜಿಸಲು ಯೋಜಿಸಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು, ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಮುಂದೂಡಿದ್ದ ಪಿಸಿಬಿ, ಆ ಬಳಿಕ ಈ ಪಂದ್ಯಾವಳಿಯನ್ನು ಯುಎಇ ನೆಲದಲ್ಲಿ ನಡೆಸಲಾಗುವುದು ಎಂದು ಘೋಷಿಸಿತ್ತು. ಆದರೆ ಯುಎಇ ತನ್ನ ಸ್ಥಳದಲ್ಲಿ ಪಿಎಸ್ಎಲ್ 2025 ರ ಪಂದ್ಯಗಳನ್ನು ಆಯೋಜಿಸಲು ನಿರಾಕರಿಸಿತು. ಈ ಕಾರಣಕ್ಕಾಗಿ, ಪ್ರಧಾನಿ ಶಹಬಾಜ್ ಷರೀಫ್ ಅವರ ಸಲಹೆಯ ಮೇರೆಗೆ, ಪಿಎಸ್ಎಲ್ 2025 ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿತ್ತು.
IPL 2025: ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್; ಬಿಸಿಸಿಐ ಅಧಿಕೃತ ಹೇಳಿಕೆ
ಐಪಿಎಲ್ ಬಗ್ಗೆ ಬೇಗ ನಿರ್ಧಾರ
ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭದ ಬಗ್ಗೆಯೂ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು. ಧರ್ಮಶಾಲಾದಲ್ಲಿ ಪಂಜಾಬ್ ಮತ್ತು ದೆಹಲಿ ನಡುವಿನ ಪಂದ್ಯದ ಸಮಯದಲ್ಲಿ, ಬಿಸಿಸಿಐ ಇದ್ದಕ್ಕಿದ್ದಂತೆ ಈ ಲೀಗ್ ಅನ್ನು ನಿಲ್ಲಿಸಲು ನಿರ್ಧರಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ, ಐಪಿಎಲ್‌ನ ಹೊಸ ವೇಳಾಪಟ್ಟಿ ವಾರದ ಅಂತ್ಯದ ವೇಳೆಗೆ ಬರಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ