PAK vs NZ: ಕಿವೀಸ್ ವಿರುದ್ಧ ಕೊನೆಗೂ ಗೆದ್ದು ಮಾನ ಉಳಿಸಿಕೊಂಡ ಪಾಕಿಸ್ತಾನ

|

Updated on: Mar 21, 2025 | 3:29 PM

Pakistan Stuns New Zealand: ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಹಸನ್ ನವಾಜ್ ಅವರ ಅದ್ಭುತ ಶತಕದಿಂದಾಗಿ ಪಾಕಿಸ್ತಾನ 9 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ನ್ಯೂಜಿಲೆಂಡ್ ನೀಡಿದ 205 ರನ್‌ಗಳ ಗುರಿಯನ್ನು ಪಾಕಿಸ್ತಾನ ಸುಲಭವಾಗಿ ಬೆನ್ನಟ್ಟಿತು. ನವಾಜ್ ಹೊರತಾಗಿ ಮೊಹಮ್ಮದ್ ಹ್ಯಾರಿಸ್ ಮತ್ತು ಸಲ್ಮಾನ್ ಅಗಾ ಕೂಡ ಉತ್ತಮ ಪ್ರದರ್ಶನ ನೀಡಿದರು.

PAK vs NZ: ಕಿವೀಸ್ ವಿರುದ್ಧ ಕೊನೆಗೂ ಗೆದ್ದು ಮಾನ ಉಳಿಸಿಕೊಂಡ ಪಾಕಿಸ್ತಾನ
Pak Vs Nz
Follow us on

ಒಂದೆಡೆ ಭಾರತದಲ್ಲಿ ಐಪಿಎಲ್ (IPL 2025) ಜ್ವರದ ಕಾವು ದಿನೇದಿನೇ ಹೆಚ್ಚುತ್ತದ್ದರೆ, ಮತ್ತೊಂದೆಡೆ ನೇರೆಯ ರಾಷ್ಟ್ರ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನಿರತವಾಗಿದೆ. ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಮೊದಲೆರಡು ಪಂದ್ಯಗಳನ್ನು ಹೀನಾಯವಾಗಿ ಸೋತ್ತಿದ್ದ ಪಾಕಿಸ್ತಾನ, ಇಂದು ನಡೆದ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವೈಟ್ ವಾಶ್ ಅವಮಾನದಿಂದ ಪಾರಾಗಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು.

44 ಎಸೆತಗಳಲ್ಲಿ ಶತಕ

ಅಚ್ಚರಿಯ ಸಂಗತಿಯೆಂದರೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ಪಾಕಿಸ್ತಾನಕ್ಕೆ 205 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇದರ ಹೊರತಾಗಿಯೂ, ಸಲ್ಮಾನ್ ಆಗಾ ನೇತೃತ್ವದ ಪಾಕ್ ತಂಡವು ಈ ಗುರಿಯನ್ನು ಕೇವಲ 16 ಓವರ್‌ಗಳಲ್ಲಿ ಸಾಧಿಸಿತು. ತಂಡದ ಪರ 22 ವರ್ಷದ ಬ್ಯಾಟ್ಸ್‌ಮನ್ ಹಸನ್ ನವಾಜ್ ಕೇವಲ 44 ಎಸೆತಗಳಲ್ಲಿ ಶತಕ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ನವಾಜ್ ಮಾತ್ರವಲ್ಲದೆ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಕೂಡ 20 ಎಸೆತಗಳಲ್ಲಿ 41 ರನ್​ಗಳ ಕಾಣಿಕೆ ನೀಡಿದರೆ, ನಾಯಕ ಸಲ್ಮಾನ್ ಅಗಾ ಕೂಡ 34 ಎಸೆತಗಳಲ್ಲಿ ಔಟಾಗದೆ 51 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ಹಸನ್ ನವಾಜ್ ಬಿರುಸಿನ ಶತಕ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಸನ್ ನವಾಜ್ 45 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು. ಇದರಲ್ಲಿ 7 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳು ಸೇರಿದ್ದವು. 233.33 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ನವಾಜ್, ತಮ್ಮ ವೃತ್ತಿಜೀವನದ ಮೂರನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು. ಇದರೊಂದಿಗೆ ಪಾಕಿಸ್ತಾನ ಪರ ಟಿ20ಯಲ್ಲಿ ಅತಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಹಸನ್ ನವಾಜ್ ಪಾತ್ರರಾಗಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ಅವರು ಕಳೆದ ಎರಡು ಟಿ20 ಪಂದ್ಯಗಳಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

ಇದನ್ನೂ ಓದಿ
ಭಾರತ-ಪಾಕಿಸ್ತಾನ ಕ್ರಿಕೆಟ್ ಕುರಿತು ಪ್ರಧಾನಿ ಮೋದಿ ಮಾತು
ಪಾಕ್ ಕ್ರಿಕೆಟಿಗನ ಮನೆಯಲ್ಲಿ ಹಗಲು ದರೋಡೆ
ದಿ ಹಂಡ್ರೆಡ್ ಲೀಗ್​ನಲ್ಲಿ ಪಾಕ್ ಆಟಗಾರರನ್ನು ಖರೀದಿಸುವವರೇ ಇಲ್ಲ
ಬಾಬರ್ ಮುಂದೆ ವಿರಾಟ್ ಶೂನ್ಯ ಎಂದ ಪಾಕ್ ಮಾಜಿ ಕೋಚ್

ಕಿವೀಸ್ ನೀಡಿದ ಬೆಟ್ಟದಂತಹ ಮೊತ್ತವನ್ನು ಬೆನ್ನಟ್ಟಿದ ಪಾಕ್ ಪರ ಹಸನ್ ನವಾಜ್ ಮತ್ತು ಮೊಹಮ್ಮದ್ ಹಸಿಲ್ ಕೇವಲ 35 ಎಸೆತಗಳಲ್ಲಿ 74 ರನ್​ಗಳ ಜೊತೆಯಾಟ ನೀಡಿದರು. ಪವರ್ ಪ್ಲೇನಲ್ಲಿ ಈ ಸ್ಫೋಟಕ ಪಾಲುದಾರಿಕೆಯ ಆಧಾರದ ಮೇಲೆ ಪಾಕಿಸ್ತಾನದ ಗೆಲುವು ಖಚಿತವಾಯಿತು. ಆದಾಗ್ಯೂ, ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪತನದ ನಂತರ, ನಾಯಕ ಸಲ್ಮಾನ್ ಆಗಾ ಕೂಡ 31 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 51 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

‘ಫಲಿತಾಂಶವೇ ಹೇಳುತ್ತದೆ’; ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ? ಮೋದಿ ಉತ್ತರ ಏನು ಗೊತ್ತಾ?

ಶತಕ ವಂಚಿತ ಚಾಪ್ಮನ್

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 19.5 ಓವರ್‌ಗಳಲ್ಲಿ 204 ರನ್ ಕಲೆಹಾಕಿ ಆಲೌಟ್ ಆಯಿತು. ತಂಡದ ಪರ ಮಾರ್ಕ್​ ಚಾಪ್ಮನ್ 41 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಾಯದಿಂದ 94 ರನ್ ಬಾರಿಸಿ ಕೇವಲ 6 ರನ್​​ಗಳಿಂದ ಶತಕ ವಂಚಿತರಾದರು. ಇವರನ್ನು ಹೊರತುಪಡಿಸಿ ನಾಯಕ ಬ್ರೇಸ್​ವೆಲ್ 31 ರನ್​ಗಳ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ