ಪಾಕ್ ಕ್ರಿಕೆಟಿಗನ ಮನೆಯಲ್ಲಿ ಹಾಡುಹಗಲೇ ಕಳ್ಳತನ; ಅಳವಡಿಸಿದ ಮರುದಿನವೇ ಸೌರ ಫಲಕಗಳು ನಾಪತ್ತೆ
Daylight Robbery at Kamran Akmal's House: ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಕಮ್ರಾನ್ ಮತ್ತು ಉಮರ್ ಅಕ್ಮಲ್ ಅವರ ತಂದೆಯ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನ ನಡೆದಿದೆ. 5 ಲಕ್ಷ ಪಾಕಿಸ್ತಾನಿ ರೂಪಾಯಿಗಳಷ್ಟು ಮೌಲ್ಯದ ಹೊಸದಾಗಿ ಅಳವಡಿಸಲಾದ ಸೌರ ಫಲಕಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಲಾಹೋರ್‌ನಲ್ಲಿ ನಡೆದ ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರಾದ ಕಮ್ರಾನ್ ಮತ್ತು ಉಮರ್ ಅಕ್ಮಲ್ ಅವರ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಈ ಮಾಜಿ ಕ್ರಿಕೆಟಿಗರ ತಂದೆಯ ತೋಟದ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕೆಲವು ಕಳ್ಳರು ಹಗಲು ಹೊತ್ತಿನಲ್ಲಿ ಮುಖ್ಯ ದ್ವಾರದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಹೊಸದಾಗಿ ಅಳವಡಿಸಲಾದ ಸೌರ ಫಲಕಗಳನ್ನು ಕದ್ದೊಯ್ದಿದ್ದಾರೆ. ಇದರ ಬೆಲೆ ಸುಮಾರು 5 ಲಕ್ಷ ಪಾಕಿಸ್ತಾನಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ. ಪೊಲೀಸರ ಪ್ರಕಾರ, ಈ ಘಟನೆ ಲಾಹೋರ್‌ನ ಹೇರ್ ಪ್ರದೇಶದಲ್ಲಿ ನಡೆದಿದ್ದು, ದೂರಿನ ಆಧಾರದ ಮೇಲೆ, ಅಪರಾಧಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.
ತನಿಖೆ ಆರಂಭಿಸಿರುವ ಪೊಲೀಸರು
ಅಚ್ಚರಿಯ ಸಂಗತಿಯೆಂದರೆ ಕಮ್ರಾನ್ ಅಕ್ಮಲ್ ಅವರ ತಂದೆ ಸೌರ ಫಲಕಗಳನ್ನು ಅಳವಡಿಸಿದ ಮರುದಿನವೇ ಅವುಗಳನ್ನು ಕದ್ದೊಯ್ಯಲಾಗಿದೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಘಟನಾ ಸ್ಥಳಕ್ಕೆ ಆಗಮನಿಸಿದ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅಪರಾಧಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುವ ಕಾಶಿಫ್ ಮಹಮೂದ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಮ್ರಾನ್ ವೃತ್ತಿಜೀವನ
ಒಂದು ಸಮಯದಲ್ಲಿ ಪಾಕ್ ತಂಡದ ಖಾಯಂ ಆಟಗಾರನಾಗಿದ್ದ ಕಮ್ರಾನ್ ಅಕ್ಮಲ್ 2023 ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದರು. ಕ್ರಿಕೆಟ್ ತೊರೆದ ನಂತರ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಮ್ರಾನ್, ಇದರ ಜೊತೆಗೆ ಟಿವಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ವಿಶ್ಲೇಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಮ್ರಾನ್ ತಮ್ಮ ವೃತ್ತಿಜೀವನದಲ್ಲಿ ಪಾಕಿಸ್ತಾನ ಪರ 268 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 6871 ರನ್ ಗಳಿಸಿದ್ದಾರೆ.
ಉಮರ್ ಗಂಭೀರ ಆರೋಪ
ಕಮ್ರಾನ್ ಅಕ್ಮಲ್ 2023 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆಯಾದರೂ, ಅವರ ಸಹೋದರ ಉಮರ್ ಅಕ್ಮಲ್ ಮಾತ್ರ ಇನ್ನೂ ನಿವೃತ್ತಿ ಹೊಂದಿಲ್ಲ. ಪಾಕ್ ತಂಡಕ್ಕೆ ಮರಳಲು ನಿರಂತರವಾಗಿ ಹೆಣಗಾಡುತ್ತಿರುವ ಅವರು ಪಾಕಿಸ್ತಾನಿ ಮಾಧ್ಯಮಗಳ ಮುಂದೆ ಪಿಸಿಬಿ ಅಧಿಕಾರಿಗಳ ಬಗ್ಗೆ ಗಂಭೀರ ಆರೋಪ ಹೊರಿಸಿದ್ದರು. ಇತ್ತೀಚೆಗೆ, ಪಾಕ್ ಮಂಡಳಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದೆ. ನಾನು ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಸಂಪರ್ಕಿಸಲು ಸಾಕಷ್ಟು ಭಾರಿ ಪ್ರಯತ್ನಿಸಿದೆ. ಅವರನ್ನು ಭೇಟಿಯಾಗುವ ಸಲುವಾಗಿ ನಾನು ಅವರ ಮ್ಯಾನೇಜರ್‌ಗೂ ಕರೆ ಮಾಡಿದ್ದೆ. ಆದರೆ ಅವರು ನನ್ನ ಕರೆಯನ್ನು ಕಡಿತಗೊಳಿಸಿ ಅಸಭ್ಯವಾಗಿ ವರ್ತಿಸಿದರು ಎಂದು ಆರೋಪಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Sun, 16 March 25