Fact Check: ಎದೆ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡ ಶುಭ್ಮನ್ ಗಿಲ್?: ವೈರಲ್ ಫೋಟೋದ ಸತ್ಯ ಏನು?
Shubman Gill Ambedkar tattoo: ಸಾಮಾಜಿಕ ಜಾಲತಾಣಗಳಲ್ಲಿ ಶುಭ್ಮನ್ ಗಿಲ್ಗೆ ಸಂಬಂಧಿಸಿದ ಫೋಟೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಗಿಲ್ ತಮ್ಮ ಎದೆಯ ಮೇಲೆ ಬಾಬಾ ಸಾಹೇಬ್ ಅಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ.

ಬೆಂಗಳೂರು (ಮಾ. 21): ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿರುವ ಶುಭ್ಮನ್ ಗಿಲ್ (Shubman Gill) ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ತಯಾರಿಯಲ್ಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಕ್ಯಾಪ್ಟನ್ ಆಗಿರುವ ಇವರು ತವರು ನೆಲದಲ್ಲಿ ಮೊದಲ ಪಂದ್ಯಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ್ಮನ್ ಗಿಲ್ಗೆ ಸಂಬಂಧಿಸಿದ ಫೋಟೋ ಒಂದು ಭರ್ಜರಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಗಿಲ್ ತಮ್ಮ ಎದೆಯ ಮೇಲೆ ಬಾಬಾ ಸಾಹೇಬ್ ಅಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಅನೇಕ ಎಕ್ಸ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ಇವರು ತಮ್ಮ ಇಚ್ಛೆಯಂತೆ ಆಡುತ್ತಿದ್ದರು, ಆಗ ಇವರು ಯಾರೆಂದು ನನಗೆ ಅರ್ಥವಾಯಿತು. ಧೈರ್ಯವಿರುವವನು ತಾನು ಚಾಮರ್ ಕುಲದವನು ಎಂದು ಹೇಳುತ್ತಾನೆ. ಜೈ ಚಾಮರ್ ಸಮುದಾಯ, ಜೈ ಚಾಮರ್ ಸಮಾಜ, ಕ್ರಾಂತಿಕಾರಿ ಜೈ ಭೀಮ್’’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ये जस हिसाब से खेल रहा था तभी समझ आगया था की कौन है ये…जिसमें होगा दम वही कहेगा चमार वंश से है हम ।। जय चमार कौम जय चमार समाज… क्रांतिकारी जय भीम pic.twitter.com/dVxVCdioB7
— Seema Singh Shudr (@SeemaSinghShudr) February 25, 2025
ಗಿಲ್ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದು ನಿಜವೇ?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ಕಂಡುಬಂದಿದೆ. ಶುಭ್ಮನ್ ಗಿಲ್ ಅಂತಹ ಯಾವುದೇ ಹಚ್ಚೆ ಹಾಕಿಸಿಕೊಂಡಿಲ್ಲ. ಶುಭಮನ್ ಮೂಲತಃ ಪಂಜಾಬ್‌ನ ಜಾಟ್ ಸಿಖ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆದರೆ, ಈ ಸಂದರ್ಭ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ. ಬಳಿಕ ಗೂಗಲ್ನಲ್ಲಿ ಕೀವರ್ಸ್ ಮೂಲಕ ಹುಡುಕಿದ್ದೇವೆ. ಆಗಲೂ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ.
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನೊನ್ಬ ಎದೆಯ ಮೇಲೆ ಅಂಬೇಡ್ಕರ್ ಅವರ ಹಚ್ಚೆ ಹಾಕಿಸಿಕೊಂಡಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮ ವರದಿ ಮಾಡಿಲ್ಲ. ಬಳಿಕ ನಮಗೆ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು. ಹೀಗಾಗಿ ನಾವು ಈ ವೈರಲ್ ಫೋಟೋವನ್ನು AI ಇಮೇಜ್ ಡಿಟೆಕ್ಟರ್ ಟೂಲ್ Decopy.ai ನಲ್ಲಿ ಪರಿಶೀಲಿಸಿದ್ದೇವೆ. ಇಲ್ಲಿ ಈ ಚಿತ್ರ ನಕಲಿ ಎಂದು ಕಂಡುಬಂದಿದೆ. ಈ ಚಿತ್ರವನ್ನು ಶೇ. 92 AI ಬಳಸಿ ರಚಿಸಲಾಗಿದೆ ಎಂದು ಉಪಕರಣವು ಹೇಳಿದೆ.
Fact Check: ಅಂತರಿಕ್ಷದಿಂದ ಭೂಮಿಗೆ ಬಂದ ಸುನಿತಾ ವಿಲಿಯಮ್ಸ್ ಎಂದು ಹಳೆಯ ವಿಡಿಯೋ ವೈರಲ್
ಹೆಚ್ಚಿನ ತನಿಖೆಗಾಗಿ, ನಾವು ಶುಭ್ಮನ್ ಗಿಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡ ಪರಿಶೀಲಿಸಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ ತೋರಿಸಿರುವಂತೆ ಅವರ ಶರ್ಟ್‌ಲೆಸ್ ಫೋಟೋದಲ್ಲಿ ಯಾವುದೇ ಹಚ್ಚೆ ಇಲ್ಲ.
View this post on Instagram
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಶುಭ್ಮನ್ ಗಿಲ್ ಎದೆಯ ಮೇಲೆ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿರುವುದು ಸುಳ್ಳು, ಇದು ಕೃತಕ ಬುದ್ದಿಮತ್ತೆಯಿಂದ ರಚಿಸಲಾದ ಫೋಟೋ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಶುಭ್ಮನ್ ಗಿಲ್ಗೆ ಐಸಿಸಿಯ ವಿಶೇಷ ಪ್ರಶಸ್ತಿ:
ಉಪನಾಯಕನ ಜವಬ್ದಾರಿ ಹೊತ್ತು ಟೀಮ್ ಇಂಡಿಯಾವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುನ್ನಡೆಸಿದ್ದ ಭವಿಷ್ಯದ ನಾಯಕ ಶುಭ್ಮನ್ ಗಿಲ್ಗೆ ಐಸಿಸಿಯಿಂದ ಭರ್ಜರಿ ಬಹುಮಾನ ಸಿಕ್ಕಿದೆ. ಭಾರತದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಐಸಿಸಿ ನೀಡುವ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭ್ಮನ್ ಗಿಲ್ ಅವರ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲದಿದ್ದರೂ, ಫೆಬ್ರವರಿ ತಿಂಗಳಲ್ಲಿ ಗಿಲ್ ಬ್ಯಾಟ್ ಅಬ್ಬರಿಸಿತ್ತು. ಹೀಗಾಗಿ ಶುಭ್ಮನ್ ಗಿಲ್, ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಫೆಬ್ರವರಿಯಲ್ಲಿ ಗಿಲ್, ಆಡಿದ 5 ಏಕದಿನ ಪಂದ್ಯಗಳಲ್ಲಿ 101.50 ಸರಾಸರಿಯಲ್ಲಿ 409 ರನ್ ಕಲೆಹಾಕಿದ್ದರು. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಸತತ ಮೂರು ಅರ್ಧಶತಕಗಳನ್ನು ಬಾರಿಸಿದ್ದರು.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Fri, 21 March 25