- Kannada News Photo gallery Cricket photos Shubman Gill Wins ICC Player of the Month: February 2025 Dominance
ICC Awards: ಶುಭ್ಮನ್ ಗಿಲ್ಗೆ ಒಲಿದ ಐಸಿಸಿಯ ವಿಶೇಷ ಪ್ರಶಸ್ತಿ
Shubman Gill Wins ICC Player of the Month: ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆಬ್ರವರಿಯಲ್ಲಿ ಅವರು 5 ಏಕದಿನ ಪಂದ್ಯಗಳಲ್ಲಿ 409 ರನ್ ಕಲೆಹಾಕಿದ್ದರು. ಹಾಗೆಯೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿ ಆಂಗ್ಲರನ್ನು ವೈಟ್ ವಾಶ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ಶತಕವನ್ನೂ ಬಾರಿಸಿದ್ದರು.
Updated on: Mar 12, 2025 | 5:04 PM

ಉಪನಾಯಕನ ಜವಬ್ದಾರಿ ಹೊತ್ತು ಟೀಂ ಇಂಡಿಯಾವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುನ್ನಡೆಸಿದ್ದ ಭವಿಷ್ಯದ ನಾಯಕ ಶುಭ್ಮನ್ ಗಿಲ್ಗೆ ಐಸಿಸಿಯಿಂದ ಭರ್ಜರಿ ಬಹುಮಾನ ಸಿಕ್ಕಿದೆ. ಭಾರತದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಇದೀಗ ಐಸಿಸಿ ನೀಡುವ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭ್ಮನ್ ಗಿಲ್ ಅವರ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲದಿದ್ದರೂ, ಫೆಬ್ರವರಿ ತಿಂಗಳಲ್ಲಿ ಗಿಲ್ ಬ್ಯಾಟ್ ಅಬ್ಬರಿಸಿತ್ತು. ಹೀಗಾಗಿ ಶುಭ್ಮನ್ ಗಿಲ್, ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿ ರೇಸ್ನಲ್ಲಿ ಗಿಲ್ ಜೊತೆಗೆ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಫಿಲಿಪ್ಸ್ ಕೂಡ ಇದ್ದರು.

ಆದರೆ ಗಿಲ್ ಸ್ಮಿತ್ ಮತ್ತು ಫಿಲಿಪ್ಸ್ ಅವರನ್ನು ಸೋಲಿಸಿ ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಗಿಲ್, ಆಡಿದ 5 ಏಕದಿನ ಪಂದ್ಯಗಳಲ್ಲಿ 101.50 ಸರಾಸರಿಯಲ್ಲಿ 409 ರನ್ ಕಲೆಹಾಕಿದ್ದರು.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಸತತ ಮೂರು ಅರ್ಧಶತಕಗಳನ್ನು ಬಾರಿಸಿದ್ದರು. ಗಿಲ್ ಅವರ ಈ ಆಟದ ಪರಿಣಾಮವಾಗಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ವೈಟ್ ವಾಶ್ ಮಾಡಿತ್ತು. ಇದಲ್ಲದೆ ಗಿಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವಿನ ಶತಕವನ್ನು ಬಾರಿಸಿದ್ದರು.

ಫೆಬ್ರವರಿ ತಿಂಗಳ ಅಮೋಘ ಆಟಕ್ಕೆ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದಿರುವ ಶುಭ್ಮನ್ ಗಿಲ್ ಏಕದಿನ ರ್ಯಾಂಕಿಂಗ್ನಲ್ಲೂ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಇಂದು ಬಿಡುಗಡೆಯಾದ ನೂತನ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಗಿಲ್, 784 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.
























