Fact Check: ಜಾಫರ್ ಎಕ್ಸ್ ಪ್ರೆಸ್ ರೈಲ್ ಹೈಜಾಕ್ ಎಂದು 2022ರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್
Pakistan train hijack Fact Check: ಚಲಿಸುತ್ತಿರುವ ರೈಲೊಂದು ಸ್ಪೋಟಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಾಫರ್ ಎಕ್ಸ್‌ಪ್ರೆಸ್ ಮೇಲಿನ ಬಿಎಲ್‌ಎ ದಾಳಿಯನ್ನು ಇದು ತೋರಿಸಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ವೈರಲ್ ಆಗಿರುವ ವೀಡಿಯೊ 2022 ರದ್ದಾಗಿದೆ. ಹೀಗಾಗಿ ರೈಲು ಅಪಹರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಬೆಂಗಳೂರು (ಮಾ. 13): ಕಳೆದ ಮಂಗಳವಾರ ಮಾರ್ಚ್ 11 ರಂದು ಪಾಕಿಸ್ತಾನದಲ್ಲಿ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು (Pakistan Train Attack) ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಎಂಬ ಪ್ರತ್ಯೇಕತಾವಾದಿ ಗುಂಪು ಅಪಹರಿಸಿತು. ರೈಲಿನಿಂದ ಅಪಹರಿಸಲ್ಪಟ್ಟ 50 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖಚಿತಪಡಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.
ಇದೀಗ ಚಲಿಸುತ್ತಿರುವ ರೈಲೊಂದು ಸ್ಪೋಟಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಾಫರ್ ಎಕ್ಸ್‌ಪ್ರೆಸ್ ಮೇಲಿನ ಬಿಎಲ್‌ಎ ದಾಳಿಯನ್ನು ಇದು ತೋರಿಸಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪಾಕಿಸ್ತಾನ ಜಾಫರ್ ಎಕ್ಸ್ ಪ್ರೆಸ್ ರೈಲ್ ಹೈಜಾಕ್ ಮಾಡಿ. 20.ಸೈನಿಕರನ್ನು ಹತ್ತೇ ಮಾಡಿ ನೂರಾರು ಜನರನ್ನು ಒತ್ತೆಯಾಳಗಿ ಇಟ್ಟುಕೋಡಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.
ಇದು 2025 ರಲ್ಲಿ ಜಾಫರ್ ಎಕ್ಸ್ ಪ್ರೆಸ್ ರೈಲ್ ಹೈಜಾಕ್ ಮಾಡಿದ ವಿಡಿಯೋ ಅಲ್ಲ:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ವೀಡಿಯೊ 2022 ರದ್ದಾಗಿದೆ. ಹೀಗಾಗಿ ರೈಲು ಅಪಹರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
Fact Check: ಏಪ್ರಿಲ್ 1, 2025 ರಿಂದ ದೇಶದಲ್ಲಿ ಎಲ್ಲ ಬ್ಯಾಂಕ್ಗಳ ಯುಪಿಐ ವಹಿವಾಟುಗಳು ಸ್ಥಗಿತ?
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೆಏಜ್ ಸರ್ಚ್ ಮಾಡಿದ್ದೇವೆ. ಆಗ ಏಪ್ರಿಲ್ 15, 2022 ರಂದು ಇದೇ ವೈರಲ್ ವಿಡಿಯೋವನ್ನು ಹೊಂದಿರುವ ಪೋಸ್ಟ್ ಒಂದು ನಮಗೆ ಸಿಕ್ಕಿತು. ‘‘ಬಲೂಚಿಸ್ತಾನದ ಸಿಬ್ಬಿ ಬಳಿ FC (ಫ್ರಾಂಟಿಯರ್ ಕಾರ್ಪ್ಸ್) ಸಾಗಿಸುತ್ತಿದ್ದ ರೈಲಿನ ಮೇಲೆ IED ದಾಳಿಯ ದೃಶ್ಯಗಳನ್ನು BLA ಬಿಡುಗಡೆ ಮಾಡಿದೆ’’ ಎಂದು ಈ ಪೋಸ್ಟ್‌ಗೆ ಕ್ಯಾಪ್ಶನ್ ನೀಡಲಾಗಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವರು ಈ ವಿಡಿಯೋ ಜನವರಿ 2022 ರದ್ದಾಗಿರಬಹುದು ಎಂದು ಹೇಳಿದ್ದಾರೆ. ಇದರರ್ಥ ಈ ವೀಡಿಯೊ BLA ಉಗ್ರಗಾಮಿಗಳು ಇತ್ತೀಚೆಗೆ ನಡೆಸಿದ ರೈಲು ಅಪಹರಣಕ್ಕಿಂತ ಹಿಂದಿನದು.
BLA has released footage of an IED attack on Train carrying FC(Frontier Corps) near Sibbi, Balochistan. pic.twitter.com/ztOuBBznJz
— Rohan Panchigar (@rohanpanchigar) April 15, 2022
ಇದೇವೇಳೆ ನಮಗೆ ವೈರಲ್ ವಿಡಿಯೋವನ್ನು ಹೊಂದಿರುವ ಜನವರಿ 2022 ರ ವರದಿ ಸಿಕ್ಕಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ವಿಡಿಯೋವು ಜನವರಿ 18, 2022 ರಂದು ಈಶಾನ್ಯ ಬಲೂಚಿಸ್ತಾನ್ ಪಟ್ಟಣದ ಸಿಬಿಯಲ್ಲಿ ರೈಲಿನ ಮೇಲೆ ಐಇಡಿ ದಾಳಿಯನ್ನು ತೋರಿಸುತ್ತದೆ. ಈ ರೈಲು ಪಾಕಿಸ್ತಾನಿ ಸೈನಿಕರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಹಲವರು ಸಾವನ್ನಪ್ಪಿದರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಗಿನ ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖಾಡೋಸ್ ಬಿಜೆಂಜೊ ಅವರು ದಾಳಿಯನ್ನು ಖಂಡಿಸಿದರು ಎಂದು ಬರೆಯಲಾಗಿದೆ.\
ಈ ಬಗ್ಗೆ ಮತ್ತಷ್ಟು ಹುಡುಕಿದಾಗ ಅನೇಕ ಮಾಧ್ಯಮ ವರದಿಗಳು ನಮಗೆ ಸಿಕ್ಕಿದ್ದು, ಜನವರಿ 2022 ರ ಮತ್ತೊಂದು ವರದಿಯು ಸ್ಫೋಟದ ಪರಿಣಾಮವಾಗಿ ಜಾಫರ್ ಎಕ್ಸ್‌ಪ್ರೆಸ್‌ನ ಹಲವಾರು ಬೋಗಿಗಳು ಹಳಿತಪ್ಪಿ ಹಲವಾರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಬರೆಯಲಾಗಿದೆ.
ಹೀಗಾಗಿ, ಬಲೂಚಿಸ್ತಾನದಲ್ಲಿ ರೈಲಿನ ಮೇಲೆ ಬಿಎಲ್‌ಎ ನಡೆಸಿದ ದಾಳಿಯ 2022 ರ ವಿಡಿಯೋವನ್ನು ಇತ್ತೀಚಿನ ಜಾಫರ್ ಎಕ್ಸ್‌ಪ್ರೆಸ್ ಅಪಹರಣ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಪಾಕಿಸ್ತಾನ ಸೇನೆ ಸುಳ್ಳು ಹೇಳಿಕೆ?:
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ರೈಲು ಅಪಹರಣ ಘಟನೆಯ ನಂತರ, ಪಾಕಿಸ್ತಾನ ಸೇನೆಯ ಹೇಳಿಕೆಗಳ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಬುಧವಾರ ರಾತ್ರಿ ಕಾರ್ಯಾಚರಣೆಯ ಅಂತ್ಯದ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನಿ ಸೇನೆ, 33 ದಾಳಿಕೋರರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರೆ, 21 ನಾಗರಿಕರು ಒತ್ತೆಯಾಳುಗಳಾಗಿ ಸಾವನ್ನಪ್ಪಿದರು. ಆದರೆ ಸೇನೆಯ ಈ ಹೇಳಿಕೆಗಳು ತಪ್ಪು ಎಂದು ಪಾಕಿಸ್ತಾನಿ ಸೇನೆಯ ಮಾಜಿ ಅಧಿಕಾರಿಯೊಬ್ಬರು ಘೋಷಿಸಿದ್ದಾರೆ. ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿ ಆದಿಲ್ ರಜಾ, ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ, ಬಿಎಲ್‌ಎ ದಂಗೆಕೋರರು ಸುಮಾರು 100 ಸೈನಿಕರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ