ಪಾಕಿಸ್ತಾನದ ರೈಲು ಹೈಜಾಕ್; ಉಗ್ರರಿಂದ 50 ಒತ್ತೆಯಾಳುಗಳ ಹತ್ಯೆ
ಪಾಕಿಸ್ತಾನದ ರೈಲು ಹೈಜಾಕ್ ಪ್ರಕರಣದಲ್ಲಿ 50 ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಲ್‌ಎ ಉಗ್ರರು ಹೇಳಿದ್ದಾರೆ. ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲಿನ ದಂಗೆಕೋರರ ದಾಳಿ ಕೊನೆಗೊಂಡಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಇಡೀ ದಿನ ನಡೆದ "ಪೂರ್ಣ ಪ್ರಮಾಣದ" ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲವು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.

ಬಲೂಚಿಸ್ತಾನ, (ಮಾರ್ಚ್ 12): ಮಂಗಳವಾರ ಬೋಲಾನ್ ಜಿಲ್ಲೆಯ ಬಳಿ ಪೇಶಾವರಕ್ಕೆ ಹೋಗುವ ರೈಲಿನಿಂದ ಅಪಹರಿಸಲ್ಪಟ್ಟ 50 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖಚಿತಪಡಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ. ಉಗ್ರಗಾಮಿ ಗುಂಪು ನೀಡಿದ ಹೇಳಿಕೆಯಲ್ಲಿ “ಇಂದು ಮಿಲಿಟರಿ ಪಡೆಗಳು ಭಾರೀ ಫಿರಂಗಿ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿಗೆ ಪ್ರಯತ್ನಿಸಿದವು. ಇದು ತೀವ್ರ ಘರ್ಷಣೆಗೆ ಕಾರಣವಾಯಿತು. ಪಾಕಿಸ್ತಾನದ ನಿರಂತರ ಆಕ್ರಮಣಕ್ಕೆ ನೇರ ಪ್ರತೀಕಾರವಾಗಿ ಕಳೆದ 1 ಗಂಟೆಯೊಳಗೆ ನಾವು 50 ಒತ್ತೆಯಾಳುಗಳನ್ನು ಗಲ್ಲಿಗೇರಿಸಿದ್ದೇವೆ” ಎಂದು ಹೇಳಿದೆ.
ಬಲೂಚಿಸ್ತಾನ್ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ, ಪ್ರಾಂತೀಯ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಕೆಲವು ಒತ್ತೆಯಾಳುಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಬಂದೂಕುಧಾರಿಗಳ ವಶದಲ್ಲಿಟ್ಟುಕೊಂಡಿದ್ದ 300ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಭದ್ರತಾ ಪಡೆಗಳು ಇಲ್ಲಿಯವರೆಗೆ ರಕ್ಷಿಸಿವೆ. ಆದರೆ ಇನ್ನೂ ಸೆರೆಯಲ್ಲಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ರೈಲು ಅಪಹರಣ; ಆತ್ಮಹತ್ಯಾ ಬಾಂಬರ್‌ಗಳಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ
ಉಗ್ರರ ದಾಳಿಗೆ ಕಾರಣವಾದ ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಮಂಗಳವಾರ ಬೋಲಾನ್ ಜಿಲ್ಲೆಯಲ್ಲಿ ಸುರಂಗವನ್ನು ಪ್ರವೇಶಿಸುವಾಗ ರೈಲನ್ನು ಹೈಜಾಕ್ ಮಾಡಿತ್ತು.ಪಾಕಿಸ್ತಾನದ ವಿರುದ್ಧ ದಂಗೆಗೆ ಹೆಸರುವಾಸಿಯಾದ ಈ ಗುಂಪು ಒತ್ತೆಯಾಳುಗಳನ್ನು ಆತ್ಮಹತ್ಯಾ ಬಾಂಬರ್‌ಗಳೊಂದಿಗೆ ಸುತ್ತುವರೆದು ಪ್ರಯಾಣಿಕರಿಗೆ ಬದಲಾಗಿ ಜೈಲಿನಲ್ಲಿರುವ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಆದರೆ, ಪಾಕ್ ಸರ್ಕಾರಿ ಅಧಿಕಾರಿಗಳು ಈ ಬೇಡಿಕೆಗೆ ಸ್ಪಂದಿಸಿಲ್ಲ. ಉಗ್ರಗಾಮಿ ಗುಂಪುಗಳೊಂದಿಗಿನ ಮಾತುಕತೆಗಳನ್ನು ತಿರಸ್ಕರಿಸುವ ತಮ್ಮ ದೀರ್ಘಕಾಲದ ನೀತಿಗೆ ಅವರು ಬದ್ಧರಾಗಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಮಾಡಿದ 27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಉಗ್ರಗಾಮಿಗಳು ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟಿಸಿ ಎಂಜಿನ್ ಮತ್ತು ಅದರ 9 ಬೋಗಿಗಳಿಗೆ ಹಾನಿ ಮಾಡಿದಾಗ ರೈಲು ನಿಶ್ಚಲವಾಯಿತು ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ದಾಳಿಯಲ್ಲಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ಅವರ ಸ್ವಂತ ಊರುಗಳಿಗೆ ಅಥವಾ 100 ಕಿಲೋಮೀಟರ್ ದೂರದಲ್ಲಿರುವ ಮಾಚ್ ಜಿಲ್ಲೆ ಮತ್ತು ಕ್ವೆಟ್ಟಾದಲ್ಲಿರುವ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ರೈಲನ್ನು ವಶಪಡಿಸಿಕೊಳ್ಳುವಾಗ ಆ ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ