Fact Check: ನಿವೃತ್ತಿ ಘೋಷಣೆ ಸಮಯದಲ್ಲಿ ಸ್ಟೀವ್ ಸ್ಮಿತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆಯೇ?: ನಿಜಾಂಶ ಏನು?
Steve Smith Retirement: ಚಾಂಪಿಯನ್ ಟ್ರೋಫಿಯ ಭಾರತ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ನಿವೃತ್ತಿ ಘೋಷಣೆಯ ಸಮಯದಲ್ಲಿ ಸ್ಟೀವ್ ಸ್ಮಿತ್ ಅಳುತ್ತಿದ್ದರು ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಸ್ಟೀವ್ ಸ್ಮಿತ್ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಫೇಸ್ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

(ಬೆಂಗಳೂರು ಮಾ, 08): ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಸೋತ ನಂತರ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ (Steve Smith) ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಸ್ಟೀವ್ ಸ್ಮಿತ್ ಅವರ ನಿವೃತ್ತಿಗೆ ಆಸೀಸ್ ಅಭಿಮಾನಿಗಳು ಸೇರಿದಂತೆ ಭಾರತೀಯ ಅಭಿಮಾನಿಗಳು ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಈಗ, ನಿವೃತ್ತಿ ಘೋಷಣೆಯ ಸಮಯದಲ್ಲಿ ಸ್ಟೀವ್ ಸ್ಮಿತ್ ಅಳುತ್ತಿದ್ದರು ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಸ್ಟೀವ್ ಸ್ಮಿತ್ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಸ್ಟೀವ್ ಸ್ಮಿತ್ ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸುವಾಗ ಕಣ್ಣೀರು ಹಾಕಿದರು” ಎಂದು ಶೀರ್ಷಿಕೆ ಬರೆದಿದ್ದಾರೆ.
ನಿವೃತ್ತಿ ಘೋಷಿಸುವಾಗ ಸ್ಟೀವ್ ಸ್ಮಿತ್ ಕಣ್ಣೀರು ಹಾಕಿದ್ದಾರಾ?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ. ಈ ವಿಡಿಯೋವನ್ನು ಸ್ಟೀವ್ ಸ್ಮಿತ್ ನಿವೃತ್ತಿ ಘೋಷಣೆಯ ಸಮಯದಲ್ಲಿ ಚಿತ್ರೀಕರಿಸಲಾಗಿಲ್ಲ. ಬದಲಾಗಿ ಇದು 2018 ರಲ್ಲಿ ನಡೆದ ಚೆಂಡು ವಿರೂಪ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯ ವಿಡಿಯೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಸ್ಟೀವ್ ಸ್ಮಿತ್ ಅಳುವುದಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದೇವೆ. ಆಗ ಆಸ್ಟ್ರೇಲಿಯಾ ಕ್ರಿಕೆಟ್ನ ಅಧಿಕೃತ ಸಾಮಾಜಿಕ ತಾನ cricket.com.au ಮಾರ್ಚ್ 29, 2018 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೈರಲ್ ವಿಡಿಯೋದ ಪೂರ್ಣ ಆವೃತ್ತಿಯನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ಆಡದಂತೆ ನಿಷೇಧಿಸಿದೆ ಮತ್ತು ಇದಾದ ನಂತರ ಸಿಡ್ನಿಗೆ ಆಗಮಿಸಿದ ಸ್ಟೀವ್ ಸ್ಮಿತ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಕಣ್ಣೀರಿಟ್ಟರು.
Fact Check: ಆಸೀಸ್ ವಿರುದ್ಧ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ-ಅನನ್ಯಾ ಪಾಂಡೆ ಅಪ್ಪಿಕೊಳ್ಳುತ್ತಿರುವ ಫೋಟೋ ವೈರಲ್
2018 ರಲ್ಲಿ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಸ್ಮಿತ್ ಕಣ್ಣೀರಿಟ್ಟರು. ಈ ಪತ್ರಿಕಾಗೋಷ್ಠಿಯ ಸಂಪೂರ್ಣ ವೀಡಿಯೊವನ್ನು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. 4.45 ನಿಮಿಷಗಳ ವಿಡಿಯೋದಲ್ಲಿ, ಸ್ಟೀವ್ ಸ್ಮಿತ್ ಚೆಂಡು ವಿರೂಪ ವಿವಾದದ ಜವಾಬ್ದಾರಿಯನ್ನು ವಹಿಸಿಕೊಂಡು ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ. ವಿಡಿಯೋವನ್ನು ಕೆಳಗೆ ನೋಡಬಹುದು.
ಕ್ರಿಕೆಟ್ ಇತಿಹಾಸದ ಅತಿದೊಡ್ಡ ವಿವಾದಗಳಲ್ಲಿ ಒಂದಾದ ಚೆಂಡು ವಿರೂಪ ಘಟನೆಯು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಸಮಯದಲ್ಲಿ ನಡೆಯಿತು. ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ಕೃತಕವಾಗಿ ರಿವರ್ಸ್ ಸ್ವಿಂಗ್ ರಚಿಸಲು ಚೆಂಡನ್ನು ಸ್ಯಾಂಡ್ ಪೇಪರ್ನಿಂದ ಅಕ್ರಮವಾಗಿ ಉಜ್ಜುತ್ತಿದ್ದರು. ಈ ಘಟನೆಗಾಗಿ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರನ್ನು ಒಂದು ವರ್ಷ ನಿಷೇಧಿಸಲಾಯಿತು. ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರ ಮೇಲೂ 9 ತಿಂಗಳು ನಿಷೇಧ ಹೇರಲಾಗಿತ್ತು. ಇದರ ನಂತರ, ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ನಂತರ ಸ್ಟೀವ್ ಸ್ಮಿತ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಕಣ್ಣೀರಿಟ್ಟರು.
ಸ್ಟೀವ್ ಸ್ಮಿತ್ ಅವರ ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆಯನ್ನೂ ನಾವು ತನಿಖೆ ಮಾಡಿದ್ದೇವೆ. ಕ್ರಿಕೆಟ್ ಆಸ್ಟ್ರೇಲಿಯಾ ವೆಬ್‌ಸೈಟ್‌ನಲ್ಲಿನ ಸುದ್ದಿ ವರದಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಸೋತ ನಂತರ ನಿವೃತ್ತಿ ಹೊಂದುವ ನಿರ್ಧಾರವನ್ನು ಸ್ಟೀವ್ ಸ್ಮಿತ್ ತಮ್ಮ ತಂಡದ ಸದಸ್ಯರಿಗೆ ತಿಳಿಸಿದರು ಮತ್ತು ಮರುದಿನ ಅಧಿಕೃತ ಘೋಷಣೆ ಮಾಡಿದರು. ಈ ಕುರಿತ ವರದಿಯನ್ನು ಟಿವಿ9 ಕನ್ನಡ ಕೂಡ ಪ್ರಕಟಿಸಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸ್ಟೀವ್ ಸ್ಮಿತ್ ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸುವಾಗ ಅಳುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ 2018 ರ ಪತ್ರಿಕಾಗೋಷ್ಠಿಯದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Sat, 8 March 25