ಸತತ ಸೋಲುಗಳೊಂದಿಗೆ WPL ನಿಂದ ಹೊರಬಿದ್ದ RCB
WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ WPLನಿಂದ ಹೊರಬಿದ್ದಿದೆ. ಅದು ಸಹ ಸತತ ಐದು ಸೋಲುಗಳೊಂದಿಗೆ. ಅಂದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದೆ.

ಮೊದಲೆರಡು ಪಂದ್ಯಗಳಲ್ಲಿ ಜಯ… ಆ ಬಳಿಕ ಸತತ 5 ಸೋಲು… ಇದು ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ. ಅದರಲ್ಲೂ ನಿರ್ಣಾಯಕವಾಗಿದ್ದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ ಮುಗ್ಗರಿಸಿದೆ. ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ WPL 2025 ರಿಂದ ಹೊರಬಿದ್ದಿದೆ.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 225 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಪರ ಅಗ್ರ ಕ್ರಮಾಂಕದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ 33 ಎಸೆತಗಳಲ್ಲಿ 69 ರನ್ ಚಚ್ಚಿದ್ದರು. ಇನ್ನು ಕೊನೆಯ ಹಂತದಲ್ಲಿ ಸ್ನೇಹ್ ರಾಣಾ 6 ಎಸೆತಗಳಲ್ಲಿ 26 ರನ್ ಬಾರಿಸಿದರು.
ಪರಿಣಾಮ ಕೊನೆಯ ಓವರ್ನಲ್ಲಿ ಆರ್ಸಿಬಿ ತಂಡಕ್ಕೆ 15 ರನ್ಗಳು ಬೇಕಿತ್ತು. ಆದರೆ ಕಿಮ್ ಗಾರ್ತ್ ರನೌಟ್ ಆಗುವುದರೊಂದಿಗೆ ಆರ್ಸಿಬಿ ತಂಡವು 19.3 ಓವರ್ಗಳಲ್ಲಿ 213 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ಮೂಲಕ ಯುಪಿ ವಾರಿಯರ್ಸ್ ತಂಡವು 12 ರನ್ಗಳ ಜಯ ಸಾಧಿಸಿದೆ.
ಆರ್ಸಿಬಿ ಸೋಲು-ಮುಂಬೈ ಪ್ಲೇಆಫ್ಗೆ:
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುತ್ತಿದ್ದಂತೆ ಅತ್ತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ ಒಟ್ಟು 8 ಅಂಕಗಳನ್ನು ಪಡೆದುಕೊಂಡಿದ್ದು, ಆರ್ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ 6 ಅಂಕಗಳನ್ನು ಮಾತ್ರ ಹೊಂದಲಿದೆ.
ಹೀಗಾಗಿ ಅಂತಿಮ ಪಂದ್ಯಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಇನ್ನು ಆರ್ಸಿಬಿ ತಂಡವು ಮಾರ್ಚ್ 11 ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಅಭಿಯಾನ ಅಂತ್ಯಗೊಳಿಸಲಿದೆ.
ಆರ್ಸಿಬಿ ಪ್ರದರ್ಶನ:
ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ 6 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ತನ್ನ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 8 ವಿಕೆಟ್ಗಳ ಸೋಲುಣಿಸಿತ್ತು.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಆದರೆ ಈ ಎರಡು ಗೆಲುವುಗಳ ಬಳಿಕ ಆರ್ಸಿಬಿ ಪಡೆ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ (2 ಪಂದ್ಯ) ವಿರುದ್ಧದ ಪಂದ್ಯಗಳಲ್ಲಿ ಸತತ ಸೋಲುಂಡಿದೆ. ಈ ಸೋಲುಗಳೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಪ್ರವೇಶಿಸುವ ಕನಸು ಕೂಡ ಕೊನೆಗೊಂಡಿದೆ.