ಫೈನಲ್ ಪಂದ್ಯಕ್ಕಿಂತ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಇವರಿಬ್ಬರದ್ದೇ ಚಿಂತೆ..!
Champions Trophy Final: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ದಿಗ್ಗಜರು ನಿವೃತ್ತಿ ಘೋಷಿಸಲಿದ್ದಾರಾ ಎಂಬ ಆತಂಕವೊಂದು ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಮೂರು ವರ್ಷಗಳಲ್ಲಿ ನಾಲ್ಕನೇ ಫೈನಲ್. ಎರಡು ಸೋತವು, ಒಂದು ಗೆದ್ದೆವು. ಇದೀಗ ನಾಲ್ಕನೆಯ ಫೈನಲ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಈ ಕಾಯುವಿಕೆ ಆಘಾತಕಾರಿ ಸುದ್ದಿಯೊಂದರ ನಿರೀಕ್ಷೆಯೊಂದಿಗೆ ಎಂಬುದೇ ವಿಶೇಷ. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಟೀಮ್ ಇಂಡಿಯಾ ಮುಂಚೂಣಿಯಲ್ಲಿದೆ. ಹೀಗಾಗಿ ಟ್ರೋಫಿಯನ್ನು ಗೆಲ್ಲುವ ಕಾತುರತೆಗಿಂತ ಅಂತಿಮ ಪಂದ್ಯವು ಆತಂಕದ ಅಣೆಕಟ್ಟಾಗಿ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾ ಬಗ್ಗೆ ಕೇಳಿ ಬರುತ್ತಿರುವ ಸುದ್ದಿ.
ಭಾರತ ತಂಡ ಫೈನಲ್ನಲ್ಲಿ ಗೆದ್ದರೆ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಪಂದ್ಯವೇ ಹಿಟ್ಮ್ಯಾನ್ ಅವರ ಕೊನೆಯ ಅಂತಾರಾಷ್ಟ್ರೀಯ ಮ್ಯಾಚ್ ಎಂದು ಕೂಡ ಹೇಳಲಾಗುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ.
ಈ ಹಿಂದೆ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿ ಮೂಲಕ ಅವರು ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ. ಹೀಗಾಗಿಯೇ ಫೈನಲ್ ನಡುವೆ ಹಿಟ್ಮ್ಯಾನ್ ಅಭಿಮಾನಿಗಳಿಗೆ ಆತಂಕವೊಂದು ಶುರುವಾಗಿದೆ.
ಇತ್ತ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಕೂಡ ನಿವೃತ್ತಿ ಘೋಷಿಸಲಿದ್ದಾರಾ ಎಂಬ ಆತಂಕ ಕಿಂಗ್ ಕೊಹ್ಲಿ ಅಭಿಮಾನಿಗಳಲ್ಲೂ ಇದೆ. ಏಕೆಂದರೆ ಉತ್ತಮ ಫಾರ್ಮ್ನಲ್ಲಿರುವಾಗಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಇದು ಚಾಂಪಿಯನ್ಸ್ ಟ್ರೋಫಿಯಲ್ಲೂ ಪುನರಾವರ್ತನೆಯಾಗಲಿದೆಯಾ ಎಂಬುದೇ ಈಗ ಪ್ರಶ್ನೆ.
ಏಕೆಂದರೆ ಇಬ್ಬರೂ ಅನುಭವಿ ಆಟಗಾರರು 2027ರ ಏಕದಿನ ವಿಶ್ವಕಪ್ವರೆಗೂ ಮುಂದುವರೆಯುತ್ತಾರಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದಾಗ್ಯೂ ಇನ್ನೂ ಕೆಲವು ವರ್ಷಗಳ ಕಾಲ ಆಟವಾಡುವುದನ್ನು ಮುಂದುವರಿಸಬೇಕೆಂಬುದು ಅಭಿಮಾನಿಗಳ ಆಶಯ. ಆದರೆ 2024 ಟಿ20 ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದ ಜೋಡಿಯಿಂದ ಅಂತಹದೊಂದು ನಿರೀಕ್ಷೆಯನ್ನು ನಿರೀಕ್ಷಿಸುವಂತಿಲ್ಲ.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಅಚ್ಚರಿಯ ಸುದ್ದಿಯೊಂದು ಹೊರಬಿದ್ದರೂ ಅಚ್ಚರಿಪಡಬೇಕಿಲ್ಲ. ಅದು ಟ್ರೋಫಿ ಎತ್ತಿ ಹಿಡಿಯುವ ಮೂಲಕ ಬಂದರೆ ತುಸು ಸಮಾಧಾನ ಎನ್ನಬಹುದಷ್ಟೇ..!