RCB ಬೌಲರ್ಗಳ ಬೆಂಡೆತ್ತಿ WPLನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುಪಿ ವಾರಿಯರ್ಸ್
Womens Premier League 2025: ವುಮೆನ್ಸ್ ಪ್ರೀಮಿಯರ್ ಲೀಗ್ನ 18ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 225 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ಕೇವಲ 213 ರನ್ಗಳಿಸಿ 12 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಸಹ ಬರೋಬ್ಬರಿ 225 ರನ್ಗಳೊಂದಿಗೆ ಎಂಬುದು ವಿಶೇಷ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ WPLನ 18ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಯುಪಿ ವಾರಿಯರ್ಸ್ ತಂಡಕ್ಕೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೋಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 77 ರನ್ ಪೇರಿಸಿದ ಬಳಿಕ ಗ್ರೇಸ್ ಹ್ಯಾರಿಸ್ (39) ಔಟಾದರು. ಈ ಹಂತದಲ್ಲಿ ಕಣಕ್ಕಿಳಿದ ಕಿರಣ್ ನವಗಿರೆ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಆರ್ಸಿಬಿ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 46 ರನ್ ಚಚ್ಚಿದರು. ಪರಿಣಾಮ 10 ಓವರ್ ಮುಗಿಯುವಷ್ಟರಲ್ಲಿ ಯುಪಿ ವಾರಿಯರ್ಸ್ ತಂಡದ ಸ್ಕೋರ್ 100ರ ಗಡಿದಾಟಿತು.
ಆ ಬಳಿಕ ಬಂದ ಶಿನೆಲ್ಲೆ ಹೆನ್ರಿ 19 ರನ್ ಬಾರಿಸಿದರೆ, ಸೋಫಿ ಎಕ್ಲೆಸ್ಟೋನ್ 13 ರನ್ಗಳ ಕೊಡುಗೆ ನೀಡಿದರು. ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಮುಂದುವರೆಸಿದ ಜಾರ್ಜಿಯಾ ವೋಲ್ ಮೈದಾದನ ಮೂಲೆ ಮೂಲೆಗೂ ಚೆಂಡನ್ನಟ್ಟಿದರು. ಪರಿಣಾಮ 17 ಓವರ್ಗಳಲ್ಲಿ ಯುಪಿ ವಾರಿಯರ್ಸ್ ತಂಡದ ಸ್ಕೋರ್ 201 ಕ್ಕೆ ಬಂದು ನಿಂತಿತು.
ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜಾರ್ಜಿಯಾ ವೋಲ್ಗೆ ಶತಕ ಪೂರೈಸಲು ಕೊನೆಯ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಎಸೆತದಲ್ಲಿ ವೋಲ್ ಒಂದು ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಜಾರ್ಜಿಯಾ ವೋಲ್ 56 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 17 ಫೋರ್ಗಳೊಂದಿಗೆ ಅಜೇಯ 99 ರನ್ ಬಾರಿಸಿದರು.
ವೋಲ್ ಅವರ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 225 ರನ್ ಕಲೆಹಾಕಿತು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ವಾರಿಯರ್ಸ್ ಪಡೆ ಯಶಸ್ವಿಯಾದರು.
ಯುಪಿ ವಾರಿಯರ್ಸ್ ದಾಖಲೆ:
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ಗಳಿಸಿದ ದಾಖಲೆ ಇದೀಗ ಯುಪಿ ವಾರಿಯರ್ಸ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಸರಿನಲ್ಲಿತ್ತು.
2023 ರಲ್ಲಿ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 223 ರನ್ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಆರ್ಸಿಬಿ ವಿರುದ್ಧವೇ ಯುಪಿ ವಾರಿಯರ್ಸ್ 225 ರನ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಯುಪಿ ವಾರಿಯರ್ಸ್ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಆರ್ಸಿಬಿ ಪರ ಅತ್ಯಧಿಕ ರನ್ ನೀಡಿದ ಬೌಲರ್ಗಳು:
- ರೇಣುಕಾ ಸಿಂಗ್- 3 ಓವರ್ಗಳಲ್ಲಿ 42 ರನ್
- ಚಾರ್ಲಿ ಡೀನ್- 4 ಓವರ್ಗಳಲ್ಲಿ 47 ರನ್
- ಜಾರ್ಜಿಯಾ ವೇರ್‌ಹ್ಯಾಮ್- 4 ಓವರ್ಗಳಲ್ಲಿ 43 ರನ್, 3 ವಿಕೆಟ್
- ಕಿಮ್ ಗಾರ್ತ್- 4 ಓವರ್ಗಳಲ್ಲಿ 42 ರನ್
- ಎಲ್ಲಿಸ್ ಪೆರ್ರಿ- 4 ಓವರ್ಗಳಲ್ಲಿ 35 ರನ್, 1 ವಿಕೆಟ್
- ಸ್ನೇಹ್ ರಾಣಾ- 1 ಓವರ್ನಲ್ಲಿ 13 ರನ್, 1 ವಿಕೆಟ್
226 ರನ್ಗಳ ಗುರಿ:
ಗೆಲುವಿಗೆ 226 ರನ್ಗಳ ಕಠಿಣ ಗುರಿ ಪಡೆದ ಆರ್ಸಿಬಿ ಪರ ರಿಚಾ ಘೋಷ್ 33 ಎಸೆತಗಳಲ್ಲಿ 69 ರನ್ ಚಚ್ಚಿದ್ದರು. ಇನ್ನು ಕೊನೆಯ ಓವರ್ ವೇಳೆ ಅಬ್ಬರಿಸಿದ ಸ್ನೇಹ್ ರಾಣಾ 6 ಎಸೆತಗಳಲ್ಲಿ 26 ರನ್ ಬಾರಿಸಿದರು. ಇದಾಗ್ಯೂ ಆರ್ಸಿಬಿ ತಂಡ 19.3 ಓವರ್ಗಳಲ್ಲಿ 213 ರನ್ಗಳಿಗೆ ಆಲೌಟ್ ಆಗಿ 12 ರನ್ಗಳಿಂದ ಸೋಲೊಪ್ಪಿಕೊಂಡಿತು.
ಯುಪಿ ವಾರಿಯರ್ಸ್ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್ , ಜಾರ್ಜಿಯಾ ವೋಲ್ , ಕಿರಣ್ ನವಗಿರೆ , ದೀಪ್ತಿ ಶರ್ಮಾ (ನಾಯಕಿ) , ಶಿನೆಲ್ಲೆ ಹೆನ್ರಿ , ಶ್ವೇತಾ ಸೆಹ್ರಾವತ್ , ಪೂನಂ ಖೇಮ್ನಾರ್ , ಉಮಾ ಚೆಟ್ರಿ ( ವಿಕೆಟ್ ಕೀಪರ್ ) , ಸೋಫಿ ಎಕ್ಲೆಸ್ಟೋನ್ , ಕ್ರಾಂತಿ ಗೌಡ್ , ಅಂಜಲಿ ಸರ್ವಾಣಿ.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಆರ್ಸಿಬಿ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ) , ಸಬ್ಬಿನೇನಿ ಮೇಘನಾ , ಎಲ್ಲಿಸ್ ಪೆರ್ರಿ , ರಾಘ್ವಿ ಬಿಸ್ಟ್ , ರಿಚಾ ಘೋಷ್ (ವಿಕೆಟ್ ಕೀಪರ್) , ಕನಿಕಾ ಅಹುಜಾ , ಜಾರ್ಜಿಯಾ ವೇರ್ಹಮ್ , ಷಾರ್ಲೆಟ್ ಡೀನ್ , ಕಿಮ್ ಗಾರ್ತ್ , ಸ್ನೇಹ್ ರಾಣಾ , ರೇಣುಕಾ ಸಿಂಗ್ ಠಾಕೂರ್.
Published On - 7:03 am, Sun, 9 March 25