ಟೀಮ್ ಇಂಡಿಯಾ ವಿರುದ್ಧ ಮಾತ್ರ ಗೆಲ್ಲುವ ನ್ಯೂಝಿಲೆಂಡ್
India vs New Zealand, Final: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯವು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಐಸಿಸಿ ಟೂರ್ನಿಯ ಫೈನಲ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಗೆದ್ದಂತಹ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬುದೇ ಈಗ ಕುತೂಹಲ.

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಮಾ.9) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇದು ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ನ್ಯೂಝಿಲೆಂಡ್ ನಡುವಣ ಮೂರನೇ ಮುಖಾಮುಖಿ. ಇದಕ್ಕೂ ಮುನ್ನ ಎರಡು ಬಾರಿ ಭಾರತ ಮತ್ತು ನ್ಯೂಝಿಲೆಂಡ್ ಫೈನಲ್ ಪಂದ್ಯಗಳನ್ನಾಡಿದೆ. ಈ ಎರಡು ಮ್ಯಾಚ್ಗಳಲ್ಲೂ ಕಿವೀಸ್ ಪಡೆ ಜಯಿಸಿರುವುದು ವಿಶೇಷ.
ಭಾರತದ ವಿರುದ್ಧ ಗೆಲ್ಲುವ ನ್ಯೂಝಿಲೆಂಡ್:
ಐಸಿಸಿ ಟೂರ್ನಿಗಳಲ್ಲಿ ನ್ಯೂಝಿಲೆಂಡ್ ತಂಡವು ಈವರೆಗೆ 6 ಬಾರಿ ಫೈನಲ್ ಆಡಿದೆ. ಈ ಆರು ಫೈನಲ್ಗಳಲ್ಲಿ ನ್ಯೂಝಿಲೆಂಡ್ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅದು ಕೂಡ ಭಾರತದ ವಿರುದ್ಧ ಎಂಬುದೇ ಅಚ್ಚರಿ.
- 2000 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಿತ್ತು. ಈ ವೇಳೆ 4 ವಿಕೆಟ್ಗಳ ಜಯ ಸಾಧಿಸಿ ಕಿವೀಸ್ ಪಡೆ ಟ್ರೋಫಿ ಎತ್ತಿ ಹಿಡಿಯಿತು.
- 2009 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲೆಂಡ್ ತಂಡ ಮತ್ತೊಮ್ಮೆ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಕಿವೀಸ್ ಪಡೆ 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದ್ದರು.
- 2015ರ ಏಕದಿನ ವಿಶ್ವಕಪ್ನಲ್ಲಿ ಫೈನಲ್ಗೇರಿದ್ದ ನ್ಯೂಝಿಲೆಂಡ್ ತಂಡಕ್ಕೆ 7 ವಿಕೆಟ್ಗಳ ಸೋಲುಣಿಸಿ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯಿತು.
- 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಬೌಂಡರಿ ಕೌಂಟ್ನಲ್ಲಿ ಜಯ ಸಾಧಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿದ್ದರು.
- 2021 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಕಿವೀಸ್ ಪಡೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
- 2021ರ ಟಿ20 ವಿಶ್ವಕಪ್ನಲ್ಲಿ ಫೈನಲ್ಗೇರಿದ್ದ ನ್ಯೂಝಿಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತ್ತು.
ಅಂದರೆ ನ್ಯೂಝಿಲೆಂಡ್ ತಂಡವು ಈವರೆಗೆ ಆಡಿದ 6 ಐಸಿಸಿ ಟೂರ್ನಿ ಫೈನಲ್ಗಳಲ್ಲಿ 2 ಬಾರಿ ಮಾತ್ರ ಜಯ ಸಾಧಿಸಿದೆ. ಅದು ಕೂಡ ಭಾರತದ ವಿರುದ್ಧ ಮಾತ್ರ. ಇದೀಗ ಉಭಯ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿದೆ.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಟೀಮ್ ಇಂಡಿಯಾ ಕಳೆದ ಎರಡು ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಅತ್ತ ನ್ಯೂಝಿಲೆಂಡ್ ತಂಡವು ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಹೀಗಾಗಿ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.