IND vs NZ: ಟೀಮ್ ಇಂಡಿಯಾ ಪಾಲಿಗೆ ಸಂಡೆ ಸೂಪರಲ್ಲ..!
India vs New Zealand, Final: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಫೈನಲ್ ಪಂದ್ಯವು ಇಂದು ಜರುಗಲಿದೆ. ಆದರೆ ಈ ಪಂದ್ಯವು ಭಾನುವಾರ ನಡೆಯುತ್ತಿರುವುದೇ ಈಗ ಟೀಮ್ ಇಂಡಿಯಾ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಭಾನುವಾರ ಫೈನಲ್ ಪಂದ್ಯ ನಡೆದರೆ ಭಾರತ ತಂಡ ಗೆದ್ದ ಇತಿಹಾಸವಿಲ್ಲ. ಆದರೆ ಈ ಬಾರಿ ಇತಿಹಾಸ ಬದಲಿಸುವ ಅವಕಾಶ ಭಾರತ ತಂಡದ ಮುಂದಿದೆ.

ಟೀಮ್ ಇಂಡಿಯಾ ಪಾಲಿಗೆ ಸಂಡೆ ಸೂಪರಲ್ಲ. ಅದು ಸಹ ಐಸಿಸಿ ಫೈನಲ್ನಲ್ಲಿ..! ಹೌದು, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತ ತಂಡ ಭಾನುವಾರ ಫೈನಲ್ ಪಂದ್ಯ ಗೆದ್ದಿಲ್ಲ. ಆದರೆ ಈ ಬಾರಿ ಇತಿಹಾಸ ಬದಲಿಸುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಇಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದರೆ ಟೀಮ್ ಇಂಡಿಯಾ ಪಾಲಿಗೆ ಸಂಡೇ ಕೂಡ ಸೂಪರ್ ಆಗಲಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಭಾನುವಾರ 5 ಬಾರಿ ಐಸಿಸಿ ಟೂರ್ನಿ ಫೈನಲ್ ಪಂದ್ಯಗಳನ್ನು ಆಡಿದೆ. ಕಾಕತಾಳೀಯ ಎಂಬಂತೆ ಈ ಐದು ಪಂದ್ಯಗಳಲ್ಲೂ ಭಾರತ ತಂಡ ಸೋತಿದೆ. ಆ ಫೈನಲ್ ಪಂದ್ಯಗಳಾವುವು ಎಂದು ನೋಡುವುದಾದರೆ…
- 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು, ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ 4 ವಿಕೆಟ್ಗಳಿಂದ ಸೋಲನುಭವಿಸಿತ್ತು.
- 2003ರ ವಿಶ್ವಕಪ್‌ನ ಫೈನಲ್ ಮಾರ್ಚ್ 23 ರಂದು ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 125 ರನ್ಗಳಿಂದ ಸೋಲೊಪ್ಪಿಕೊಂಡಿತು.
- 2014ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಏಪ್ರಿಲ್ 4 ರಂದು ಭಾನುವಾರ ನಡೆಯಿತು. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳಿಂದ ಸೋಲನುಭವಿಸಿತ್ತು.
- 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕೂಡ ನಡೆದಿರುವುದು ಭಾನುವಾರ. ಜೂನ್ 18 ರಂದು ನಡೆದಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ 180 ರನ್ಗಳಿಂದ ಪರಾಜಯಗೊಂಡಿತು.
- 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಸಹ ಭಾನುವಾರದಂದೇ ಜರುಗಿತು. ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಭಾರತ 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತ್ತು.
ಅಂದರೆ ಐಸಿಸಿ ಟೂರ್ನಿಗಳಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಒಮ್ಮೆಯೂ ಗೆದ್ದಿಲ್ಲ. ಇನ್ನು ಟೀಮ್ ಇಂಡಿಯಾ ಗೆದ್ದಿರುವ ಐಸಿಸಿ ಟ್ರೋಫಿಗಳ ದಿನವನ್ನು ನೋಡುವುದಾದರೆ…
- 1983ರ ಏಕದಿನ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ಟೀಮ್ ಇಂಡಿಯಾ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಪಂದ್ಯ ನಡೆದಿದ್ದು 1983, ಜೂನ್ 25 ಶನಿವಾರ.
- 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 24 ರ ಸೋಮವಾರದಂದು ಆಡಲಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.
- 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಏಪ್ರಿಲ್ 2 ಸೋಮವಾರದಂದು ಮುಂಬೈನಲ್ಲಿ ನಡೆಯಿತು. ಈ ಮ್ಯಾಚ್ನಲ್ಲಿ ಶ್ರೀಲಂಕಾ ತಂಡಕ್ಕೆ ಸೋಲುಣಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
- 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಜರುಗಿದ್ದು ಏಪ್ರಿಲ್ 2, ಸೋಮವಾರ. ಈ ಪಂದ್ಯದಲ್ಲಿ ಇಂಗ್ಲೆಂಡ್ಗೆ ಸೋಲುಣಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
- 2024ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆದಿದ್ದು ಶನಿವಾರ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 7 ರನ್ಗಳ ಜಯ ಸಾಧಿಸಿ ಟೀಮ್ ಇಂಡಿಯಾ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ: IPL 2026: ಐಪಿಎಲ್ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್
ಇದೀಗ ಟೀಮ್ ಇಂಡಿಯಾ ಮತ್ತೊಂದು ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಈ ಬಾರಿ ಭಾರತ ತಂಡದ ಎದುರಾಳಿ ನ್ಯೂಝಿಲೆಂಡ್. ಕಿವೀಸ್ ಪಡೆಯನ್ನು ಸೋಲಿಸಿ ಟೀಮ್ ಇಂಡಿಯಾ ಸಂಡೆಯನ್ನು ಸೂಪರ್ ಸಂಡೆಯನ್ನಾಗಿಸಲಿದೆಯಾ ಕಾದು ನೋಡಬೇಕಿದೆ.