ವಿರಾಟ್ ಕೊಹ್ಲಿ ಗಾಯಾಳು: ಚಾಂಪಿಯನ್ಸ್ ಟ್ರೋಫಿ ಫೈನಲ್ಗೂ ಮುನ್ನ ಟೀಂ ಇಂಡಿಯಾಗೆ ಆತಂಕ
Virat Kohli Injury Update: ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮುನ್ನ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಮೊಣಕಾಲಿಗೆ ಗಾಯವಾಗಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯ ಪ್ರಕಾರ, ವೇಗದ ಬೌಲಿಂಗ್ ವಿರುದ್ಧ ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡು ಅವರ ಮೊಣಕಾಲಿಗೆ ಬಡಿದಿದೆ. ಆದರೂ, ಗಾಯ ಗಂಭೀರವಾಗಿಲ್ಲ ಎಂದು ಹೇಳಲಾಗಿದೆ ಮತ್ತು ಅವರು ಫೈನಲ್ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.

ದುಬೈ, ಮಾರ್ಚ್ 8: ಚಾಂಪಿಯನ್ಸ್ ಟ್ರೋಫಿಯ ಫೈನಲ್ (Champions Trophy final) ಪಂದ್ಯವು ಮಾರ್ಚ್ 9 ರ ಭಾನುವಾರದಂದು ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ದುಬೈಯಲ್ಲಿ ನಡೆಯಲಿದೆ. ಎರಡೂ ತಂಡಗಳು ಪೂರ್ಣ ಹುರುಪಿನಿಂದ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಟೀಂ ಇಂಡಿಯಾಕ್ಕೆ (Team India) ಆಘಾತ ಎದುರಾಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸದ ಸಮಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದು, ನಂತರ ಅಭ್ಯಾಸವನ್ನು ನಿಲ್ಲಿಸಿದರು. ತಕ್ಷಣವೇ ವೈದ್ಯರ ತಂಡ ಅವರ ಗಾಯದ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮೊಣಕಾಲಿಗೆ ಬಡಿದ ಚೆಂಡು
ಅಭ್ಯಾಸದ ಸಮಯದಲ್ಲಿ ವಿರಾಟ್ ವೇಗದ ಬೌಲರ್‌ಗಳನ್ನು ಎದುರಿಸುತ್ತಿದ್ದರು. ಆ ಸಂದರ್ಭ, ಚೆಂಡು ಅವರ ಮೊಣಕಾಲಿಗೆ ಬಡಿದಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಇದಾದ ನಂತರ ಅವರು ಬ್ಯಾಟಿಂಗ್ ಅಭ್ಯಾಸ ನಿಲ್ಲಿಸಿದರು ಮತ್ತು ತಂಡದ ವೈದ್ಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಇದಾದ ನಂತರ ಕೊಹ್ಲಿ ಅಭ್ಯಾಸ ಮಾಡಲಿಲ್ಲ. ಆದರೆ ಈ ಸಮಯದಲ್ಲಿ ಅವರು ಇತರ ಆಟಗಾರರ ಅಭ್ಯಾಸವನ್ನು ಗಮನಿಸುತ್ತಲೇ ಇದ್ದರು ಮತ್ತು ತಂಡದೊಂದಿಗೆ ಮೈದಾನದಲ್ಲಿಯೇ ಇದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕೊಹ್ಲಿ ಫೈನಲ್‌ಗೆ ಫಿಟ್
ಕೊಹ್ಲಿ ಅವರು ಇತ್ತೀಚೆಗೆ ಮೊಣಕಾಲಿನ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಮತ್ತೆ ಗಾಯಕ್ಕೆ ತುತ್ತಾಗಿದ್ದು ಒಮ್ಮೆಗೆ ತಂಡವನ್ನು ಚಿಂತೆಗೀಡು ಮಾಡಿತ್ತು. ಆದರೆ, ಕೊಹ್ಲಿ ಗಾಯ ಗಂಭೀರವಾಗಿಲ್ಲ ಎಂಬುದು ಸಮಾಧಾನದ ವಿಷಯ. ಕೊಹ್ಲಿ ಫೈನಲ್‌ಗೆ ಫಿಟ್ ಆಗಿದ್ದು, ಮೈದಾನಕ್ಕಿಳಿಯಲಿದ್ದಾರೆ ಎಂದು ಭಾರತೀಯ ತಂಡದ ಸಹಾಯಕ ಸಿಬ್ಬಂದಿ ತಿಳಿಸಿರುವುದಾಗಿಯೂ ಮಾಧ್ಯಮ ವರದಿಗಳು ತಿಳಿಸಿವೆ.
ಇದನ್ನೂ ಓದಿ: ಫೈನಲ್ ಮ್ಯಾಚ್ ಪಿಚ್ ಯಾವುದೆಂಬುದು ಬಹಿರಂಗ: ವಿರಾಟ್ ಕೊಹ್ಲಿ ಫುಲ್ ಹ್ಯಾಪಿ
ಟೀಂ ಇಂಡಿಯಾ ಕಪ್ ಗೆಲ್ಲಬೇಕಾದರೆ ವಿರಾಟ್ ಕೊಹ್ಲಿ ಫಿಟ್ ಆಗಿ ಮೈದಾನಕ್ಕೆ ಬರುವುದು ಕೂಡ ಬಹಳ ಮುಖ್ಯ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ವಿರಾಟ್ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಲ್ಲದೆ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಜೇಯ 100 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ನಂತರ ಸೆಮಿಫೈನಲ್‌ನಲ್ಲೂ ಕೊಹ್ಲಿ ಅತ್ಯುತ್ತಮ 84 ರನ್‌ಗಳನ್ನು ಗಳಿಸಿ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ಫೈನಲ್‌ಗೆ ಕೊಂಡೊಯ್ದರು. ಕೊಹ್ಲಿ ಈವರೆಗೆ ಟೂರ್ನಿಯ 4 ಇನ್ನಿಂಗ್ಸ್‌ಗಳಲ್ಲಿ 217 ರನ್ ಗಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಇನ್ನಷ್ಟು ಅಪ್ಡೇಟ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Sat, 8 March 25