IPL 2025: ಚೊಚ್ಚಲ ಐಪಿಎಲ್ ಆಡುತ್ತಿರುವ ಈ 8 ಆಟಗಾರರ ಸಾಮರ್ಥ್ಯ ಏನು ಎಂಬುದು ತಿಳಿದಿರಲಿ
IPL 2025 new players: 18ನೇ ಆವೃತ್ತಿಯ ಐಪಿಎಲ್ ಲೀಗ್ ಶೀಘ್ರದಲ್ಲಿ ಆರಂಭವಾಗಲಿದೆ. ಈ ಸೀಸನ್‌ನಲ್ಲಿ ಅನೇಕ ಯುವ ಆಟಗಾರರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಅದರಲ್ಲೂ ಭಾರತ ಮತ್ತು ವಿದೇಶಗಳಿಂದ ಆಯ್ಕೆಯಾದ ಈ ಎಂಟು ಯುವ ಆಟಗಾರರು ತಮ್ಮ ಚೊಚ್ಚಲ ಐಪಿಎಲ್ ಆಡುತ್ತಿದ್ದು, ಇದೀಗ ಎಲ್ಲರ ಗಮನ ಅವರ ಮೇಲಿದೆ.
Updated on: Mar 21, 2025 | 6:09 PM

18ನೇ ಆವೃತ್ತಿಯ ಐಪಿಎಲ್ ನಾಳೆಯಿಂದ ಆರಂಭವಾಗಲಿದೆ. ಪ್ರತಿ ಸೀಸನ್ನಂತೆ ಈ ಸೀಸನ್ನಲ್ಲೂ ಸಾಕಷ್ಟು ಯುವ ಆಟಗಾರರು ಈ ಲೀಗ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಇದರಲ್ಲಿ ಭಾರತದ ಆಟಗಾರರು ಮಾತ್ರವಲ್ಲದೆ ವಿದೇಶಿ ಆಟಗಾರರು ಸೇರಿದ್ದಾರೆ. ಆದರೆ ಅವರಲ್ಲಿ ತಂಡದಲ್ಲಿ ಸ್ಥಾನ ಪಡೆಯಬಹುದಾದ 8 ಯುವ ಆಟಗಾರರ ಬಗ್ಗೆ ವಿವರ ಇಲ್ಲಿದೆ.

ರಾಬಿನ್ ಮಿಂಜ್: 22 ವರ್ಷದ ರಾಬಿನ್ ಮಿಂಜ್ ಕಳೆದ ಋತುವಿನಲ್ಲಿ ಪಾದಾರ್ಪಣೆ ಮಾಡಬೇಕಿತ್ತು. ಆದರೆ ರಸ್ತೆ ಅಪಘಾತದಿಂದಾಗಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಆದರೆ ಈ ಬಾರಿ ಅವರು ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಮುಂಬೈ ತಂಡ ಅವರನ್ನು 65 ಲಕ್ಷ ರೂ.ಗೆ ಖರೀದಿಸಿದೆ. ಮಿಂಜ್ ಪ್ರಸ್ತುತ ಕೇವಲ 2 ಪ್ರಥಮ ದರ್ಜೆ ಪಂದ್ಯಗಳು ಮತ್ತು 7 ಟಿ20 ಪಂದ್ಯಗಳ ಅನುಭವ ಹೊಂದಿದ್ದಾರೆ. ಜಾರ್ಖಂಡ್ ಮೂಲದ ಮಿಂಜ್, ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯಬಲ್ಲರು.

ವೈಭವ್ ಸೂರ್ಯವಂಶಿ: ಕೇವಲ 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ ಒಪ್ಪಂದ ಪಡೆದ ಅತ್ಯಂತ ಕಿರಿಯ ಆಟಗಾರ. ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು 1.1 ಕೋಟಿ ರೂ.ಗೆ ಖರೀದಿಸಿದೆ. ಕಳೆದ ವರ್ಷ, ಆಸ್ಟ್ರೇಲಿಯಾ ವಿರುದ್ಧದ ಯೂತ್ ಟೆಸ್ಟ್‌ನಲ್ಲಿ, ಅವರು ಕೇವಲ 58 ಎಸೆತಗಳಲ್ಲಿ ಶತಕ ಗಳಿಸಿದರು ಮತ್ತು ಅಂಡರ್-19 ಮಟ್ಟದಲ್ಲಿ ವೇಗವಾಗಿ ಶತಕ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಾದ ನಂತರ, ಅವರು ಅಂಡರ್-19 ಏಷ್ಯಾ ಕಪ್‌ನಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು.

ಸೂರ್ಯಾಂಶ್ ಶೆಡ್ಜ್: ಸೂರ್ಯಾಂಶು ಶೆಡ್ಜ್ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ವಿದರ್ಭ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 12 ಎಸೆತಗಳಲ್ಲಿ ಅಜೇಯ 36 ರನ್ ಮತ್ತು ಮಧ್ಯಪ್ರದೇಶ ವಿರುದ್ಧದ ಫೈನಲ್‌ನಲ್ಲಿ 15 ಎಸೆತಗಳಲ್ಲಿ ಅಜೇಯ 36 ರನ್ ಕಲೆಹಾಕಿದ್ದರು. ಇದಲ್ಲದೆ, ಸೂರ್ಯಾಂಶ್ 9 ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು. 22 ವರ್ಷದ ಸೂರ್ಯಾಂಶು ಅವರಿಗೆ ಇದು ಎರಡನೇ ಐಪಿಎಲ್ ಸೀಸನ್ ಆಗಲಿದೆ, ಆದರೆ ಇಲ್ಲಿಯವರೆಗೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿಲ್ಲ. ಈ ಬಾರಿ ಪಂಜಾಬ್ ಕಿಂಗ್ಸ್ ಅವರನ್ನು ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿದೆ.

ಪ್ರಿಯಾಂಶ್ ಆರ್ಯ: ಎಡಗೈ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ದೆಹಲಿ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಸಂಚಲನ ಸೃಷ್ಟಿಸಿದ್ದರು. 50 ಎಸೆತಗಳಲ್ಲಿ 120 ರನ್ ಗಳಿಸಿದ್ದ ಪ್ರಿಯಾಂಶ್, ಆಯುಷ್ ಬಡೋನಿ ಅವರೊಂದಿಗೆ 286 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಈ ಬಾರಿ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದು, ತಂಡ ಅವರನ್ನು 3.4 ಕೋಟಿ ರೂ.ಗೆ ಖರೀದಿಸಿದೆ.

ವಿಪ್ರಜ್ ನಿಗಮ್; 20 ವರ್ಷದ ಲೆಗ್ ಸ್ಪಿನ್ನರ್ ವಿಪ್ರಜ್ ನಿಗಮ್ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಯುಪಿಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ಪರ ಆಡುತ್ತಿದ್ದ ಅವರು, 11 ಇನ್ನಿಂಗ್ಸ್‌ಗಳಲ್ಲಿ 11.15 ಸ್ಟ್ರೈಕ್ ರೇಟ್ ಮತ್ತು 7.45 ರ ಎಕಾನಮಿಯಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ, ಅವರು ಯುಪಿಯ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು.

ರಯಾನ್ ರಿಕೆಲ್ಟನ್: 28 ವರ್ಷದ ರಯಾನ್ ರಿಕಲ್ಟನ್ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಆಡಲಿದ್ದಾರೆ. ಈ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ SA20 2025 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ MI ಕೇಪ್ ಟೌನ್ ಪರ ಅದ್ಭುತ ಪ್ರದರ್ಶನ ನೀಡಿದರು. ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಹೀಗಾಗಿ ಮುಂಬೈ ತಂಡ ಅವರನ್ನು 1 ಕೋಟಿ ರೂ.ಗೆ ಖರೀದಿಸಿತ್ತು.

ಕಾರ್ಬಿನ್ ಬಾಷ್: ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಕಾರ್ಬಿನ್ ಬಾಷ್ ಅವರ ಹೆಸರು ಬಿಡ್ಡಿಂಗ್‌ಗೆ ಬರಲಿಲ್ಲ. ಆದರೆ ಪಂದ್ಯಾವಳಿಯ ಆರಂಭಕ್ಕೂ ಸ್ವಲ್ಪ ಮೊದಲು, ಮುಂಬೈ ಇಂಡಿಯನ್ಸ್ ಗಾಯಗೊಂಡ ಲಿಜರ್ಡ್ ವಿಲಿಯಮ್ಸ್ ಬದಲಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಬಾಷ್ ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಅಲ್ಲದೆ, ಅವರು ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇಶಾನ್ ಮಾಲಿಂಗ:ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಶಾನ್ ಮಾಲಿಂಗ ಅವರನ್ನು 1.2 ಕೋಟಿ ರೂ.ಗೆ ಖರೀದಿಸಿದೆ. ಇದಾದ ನಂತರ, ಶ್ರೀಲಂಕಾ ಪರ ODI ಗೆ ಪಾದಾರ್ಪಣೆ ಮಾಡಿದ ಇಶಾನ್, ಪಾರ್ಲ್ ರಾಯಲ್ಸ್ ಪರ SA20 ಗೆ ಪಾದಾರ್ಪಣೆ ಮಾಡಿದರು. ಇಶಾನ್ ಹೊಸ ಬಾಲ್ನಲ್ಲಿ ಸ್ವಿಂಗ್ ಮಾಡುವುದರಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ನಿಖರವಾದ ಯಾರ್ಕರ್‌ಗಳನ್ನು ಎಸೆಯುವಲ್ಲಿ ನಿಪುಣರು.
























