Fact Check: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾಗೆ ನೀತಾ ಅಂಬಾನಿ ಬುಗಾಟಿ ಕಾರು ನೀಡಿದ್ದು ನಿಜವೇ?
ಸಾಮಾಜಿಕ ಮಾಧ್ಯಮದಲ್ಲಿ ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಇರುವ ಎರಡು ಚಿತ್ರಗಳು ವೈರಲ್ ಆಗುತ್ತಿದೆ. ಇದರಲ್ಲಿ ನೀತಾ ಅಂಬಾನಿ ಅವರು ಕಾರಿನ ಕೀಲಿಯನ್ನು ರೋಹಿತ್ ಶರ್ಮಾಗೆ ನೀಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ಟ್ರೋಫಿ ಗೆದ್ದ ಸಂಭ್ರಮಕ್ಕಾಗಿ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರಿಗೆ ಬುಗಾಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು (ಮಾ. 18): ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ಕ್ರಿಕೆಟ್ ತಂಡ 2025 ರ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಾಗಿದೆ. ಇದೀಗ ಇಡೀ ತಂಡ ದುಬೈನಿಂದ ಭಾರತಕ್ಕೆ ವಾಪಾಸ್ ಆಗಿದ್ದು, ಐಪಿಎಲ್ 2025ಕ್ಕೆ ತಯಾರಿ ನಡೆಸುತ್ತಿದೆ. ಇದರ ಮಧ್ಯೆ, ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ಹಂಚಿಕೊಳ್ಳುವಾಗ, ಟ್ರೋಫಿ ಗೆದ್ದ ಸಂಭ್ರಮಕ್ಕಾಗಿ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರಿಗೆ ಬುಗಾಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?:
ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಇರುವ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀತಾ ಅಂಬಾನಿ ಅವರು ಕಾರಿನ ಕೀಲಿಯನ್ನು ರೋಹಿತ್ ಶರ್ಮಾಗೆ ನೀಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ‘‘ಚಾಂಪಿಯನ್ಸ್ ಟ್ರೋಫಿ 2025 ಗೆದ್ದ ಖುಷಿಗಾಗಿ ತಂಡದ ನಾಯಕ ರೋಹಿತ್ ಶರ್ಮಾ ರಿಗೆ Mumbai Indians ತಂಡದ Franchise ನೀತಾ ಅಂಬಾನಿ ಯಾವ ಕಾರನ್ನು ಉಡುಗೊರೆಯಾಗಿ ನೀಡಿದರು?’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಇನ್ನೂ ಕೆಲವರು, ‘‘2025 ರ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ನೀತಾ ಅಂಬಾನಿ ರೋಹಿತ್ ಶರ್ಮಾ ಬುಗಾಟಿಯನ್ನು ನೀಡುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ರೋಹಿತ್ ಶರ್ಮಾಗೆ ನೀತಾ ಅಂಬಾನಿ ಕಾರು ಉಡುಗೊರೆ ನೀಡಿದ್ದು ನಿಜವೇ?:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದೊಂದು ಸಂಪೂರ್ಣ ಸುಳ್ಳು ಮಾಹಿತಿ ಎಂಬುದು ತಿಳಿದುಬಂದಿದೆ. ಮೊದಲನೆಯದಾಗಿ, ನಾವು ಈ ಚಿತ್ರಕ್ಕೆ ಸಂಬಂಧಿಸಿದ ಕೀವರ್ಡ್‌ಗಳ ಮೂಲಕ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದೇವೆ. ಆದಾಗ್ಯೂ, ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವರದಿ ಗೂಗಲ್‌ನಲ್ಲಿ ನಮಗೆ ಕಂಡುಬಂದಿಲ್ಲ. ನೀತಾ ಅಂಬಾನಿ ದುಬಾರಿ ಮೊತ್ತದ ಕಾರು ಗಿಫ್ಟ್ ನೀಡಿದ್ದೇ ಆದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಧ್ಯಮ ಸುದ್ದಿ ಪ್ರಕಟಿಸಿಲ್ಲ. ಅಲ್ಲದೆ ರೋಹಿತ್ ಶರ್ಮಾ, ನೀತಾ ಅಂಬಾನಿ, ಮುಂಬೈ ಇಂಡಿಯನ್ಸ್ ಸಾಮಾಜಿಕ ಖಾತೆಯಲ್ಲೂ ಈ ಕುರಿತು ಮಾಹಿತಿಯಿಲ್ಲ.
Fact Check: ಮಾರುಕಟ್ಟೆಗೆ ಬಂದಿವೆ ಹೊಸ 350 ರೂ. ನೋಟುಗಳು?: ವೈರಲ್ ಫೋಟೋದ ಸತ್ಯ ತಿಳಿಯಿರಿ
ಆ ಬಳಿಕ, ನಾವು ವೈರಲ್ ಚಿತ್ರವನ್ನು ಎಚ್ಚರಿಕೆಯಿಂದ ನೋಡಿದಾಗ, ರೋಹಿತ್ ಶರ್ಮಾ ಮತ್ತು ನೀತಾ ಅಂಬಾನಿ ಅವರ ಕೈಗಳು ಚಿತ್ರದಲ್ಲಿ ಸ್ವಲ್ಪ ವಿಚಿತ್ರವಾಗಿ ಕಾಣುತ್ತಿದ್ದವು. ಇದರ ಜೊತೆಗೆ, ಎರಡೂ ಚಿತ್ರಗಳಲ್ಲಿ ರೋಹಿತ್ ಶರ್ಮಾ ಅವರ ಜೆರ್ಸಿ ವಿಭಿನ್ನವಾಗಿ ಕಾಣುತ್ತದೆ. ಫೋಟೋ ಒಂದೇ ಸಮಯದ್ದಾಗಿದ್ದರೆ ಎರಡೂ ಜೆರ್ಸಿಗಳು ಒಂದೇ ಆಗಿರಬೇಕು. ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು.
ಹೀಗಾಗಿ ನಾವು ವೈರಲ್ ಫೋಟೋವನ್ನು ತನಿಖೆ ಮಾಡಲು AI ಉಪಕರಣದೊಂದಿಗೆ ಪರಿಶೀಲಿಸಿದ್ದೇವೆ. ಸೈಟ್‌ಎಂಜಿನ್‌ನ ಫಲಿತಾಂಶಗಳ ಪ್ರಕಾರ, ವೈರಲ್ ಫೋಟೋವು ಶೇಕಡಾ 97 ರಷ್ಟು AI ನಿಂದ ರಚಿಸಲಾಗಿದೆ ಎಂಬುದು ತಿಳಿಯಿತು. ಹೀಗಾಗಿ 2025 ರಲ್ಲಿ ಭಾರತೀಯ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ರೋಹಿತ್ ಶರ್ಮಾ ಅವರಿಗೆ ಬುಗಾಟಿ ಉಡುಗೊರೆಯಾಗಿ ಸಿಕ್ಕಿದೆ ಎಂಬ ಹೇಳಿಕೆ ತನಿಖೆಯ ನಂತರ ಸುಳ್ಳು ಎಂದು ಕಂಡುಬಂದಿದೆ. ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಅವರ ವೈರಲ್ ಚಿತ್ರವು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ