3 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ್!

WI vs PAK: ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್​ನಲ್ಲಿ 344 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಪಾಕಿಸ್ತಾನ್ ಮೊದಲ ಇನಿಂಗ್ಸ್​ನಲ್ಲಿ 387 ರನ್​ ಪೇರಿಸಿದ್ದರು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಕೇವಲ 177 ರನ್​ಗಳಿಗೆ ಆಲೌಟ್ ಆಗಿದೆ. ಅದರಂತೆ ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ ಕೇವಲ 75 ರನ್​ಗಳ ಗುರಿ ಪಡೆ ಪಾಕಿಸ್ತಾನ್ 2 ವಿಕೆಟ್ ನಷ್ಟಕ್ಕೆ 77 ರನ್​ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

3 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ್!
Babar Azam
Image Credit source: PCB

Updated on: Aug 06, 2026 | 8:17 AM

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ವಿದೇಶಿ ನೆಲದಲ್ಲಿ ಪಾಕಿಸ್ತಾನಕ್ಕೆ ಕಳೆದ ಮೂರು ವರ್ಷಗಳಲ್ಲೇ ಸಿಕ್ಕ ಮೊದಲ ಟೆಸ್ಟ್ ಗೆಲುವಾಗಿದ್ದು, ಈ ಮೂಲಕ ಸತತ 8 ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

  • 2023 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಪಾಕಿಸ್ತಾನ್ ತಂಡ ವಿದೇಶಿ ಟೆಸ್ಟ್ ಪಂದ್ಯ ಗೆದ್ದಿದ್ದರು.
  • ಇದಾದ ಬಳಿಕ ಸತತ 8 ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿತ್ತು.
  • ಮೂರು ವರ್ಷಗಳ ಬಳಿಕ ಇದೀಗ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ, ಪಾಕ್ ಪಡೆ ವಿದೇಶದಲ್ಲಿ ಟೆಸ್ಟ್ ಗೆಲುವಿನ ನಗೆ ಬೀರಿದೆ.

ಸ್ಪಿನ್ನರ್‌ಗಳ ಜಾದೂ, ಕಂಗೆಟ್ಟ ವಿಂಡೀಸ್:

ಪಾಕ್ ತಂಡದ ನಾಯಕ ಬಾಬರ್ ಆಝಂ ಅವರ ಹೆಚ್ಚುವರಿ ಸ್ಪಿನ್ನರ್ ಬಳಸುವ ತಂತ್ರ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಸ್ಪಿನ್ ಜೋಡಿಯಾದ ಸಾಜಿದ್ ಖಾನ್ ಮತ್ತು ಅಲಿ ಉಸ್ಮಾನ್ ತಲಾ 4 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದರಿಂದಾಗಿ ಆತಿಥೇಯ ವಿಂಡೀಸ್ ಕೇವಲ 117 ರನ್‌ಗಳಿಗೆ ಆಲೌಟ್ ಆಗಿ, ಪಾಕಿಸ್ತಾನಕ್ಕೆ 75 ರನ್‌ಗಳ ಸುಲಭ ಗುರಿ ನೀಡಿತು.

ಶಫೀಕ್ ಶತಕ, ಪಾಕ್​ಗೆ ಪ್ಲಸ್ ಪಾಯಿಂಟ್:

ಶಾನ್ ಮಸೂದ್ ಅವರ ಬದಲಿಯಾಗಿ ಕೊನೆಯ ಕ್ಷಣದಲ್ಲಿ ತಂಡ ಸೇರಿದ ಅಬ್ದುಲ್ಲಾ ಶಫೀಕ್, ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 160 ರನ್ ಬಾರಿಸಿ ತಂಡದ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಅವರ ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿತು. ಅತ್ತ ಬೌಲಿಂಗ್​ನಲ್ಲಿ ಪಾಕ್​ ಪಾಲಿಗೆ ಗೆಲುವಿನ ರೂವಾರಿಗಳಾದರೆ, ಇತ್ತ ಬ್ಯಾಟಿಂಗ್​ನಲ್ಲಿ ಅಬ್ದುಲ್ಲಾ ಶಫೀಕ್ ಬಾರಿಸಿದ ಭರ್ಜರಿ ಶತಕ ಪಾಕ್ ಪಡೆಗೆ ಪ್ಲಸ್ ಪಾಯಿಂಟ್ ಆಯಿತು.

ಸಿಕ್ಸರ್ ಸಿಡಿಸಿ ಪಂದ್ಯ ಮುಗಿಸಿದ ಬಾಬರ್:

ಕೇವಲ 75 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ಆರಂಭದಲ್ಲೇ ಇಮಾಮ್-ಉಲ್-ಹಕ್ ಮತ್ತು ಅಝಾನ್ ಅವೈಸ್ ವಿಕೆಟ್ ಕಳೆದುಕೊಂಡಿತು. ಆದರೆ, ನಾಯಕ ಬಾಬರ್ ಆಝಂ ಹಾಗೂ ಶಫೀಕ್ ಜವಾಬ್ದಾರಿಯುತ ಆಟವಾಡಿದರು. ಅಂತಿಮವಾಗಿ ಜೋಮೆಲ್ ವಾರಿಕನ್ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಚಚ್ಚುವ ಮೂಲಕ ಬಾಬರ್ ಆಝಂ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಂಡೀಸ್‌ಗೆ ಗಾಯದ ಸಮಸ್ಯೆ:

ಮೊದಲ ಟೆಸ್ಟ್​ನಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಟಗಾರ ಬ್ರ್ಯಾಂಡನ್ ಕಿಂಗ್ ಅವರ ಅನುಪಸ್ಥಿತಿ ಭಾರಿ ಹಿನ್ನಡೆಯಾಗಿ ಪರಿಣಮಿಸಿತು. ಮೂರನೇ ದಿನದಾಟದಲ್ಲಿ ಬಾಬರ್ ಆಝಂ ಅವರನ್ನು ರನ್ ಔಟ್ ಮಾಡುವ ವೇಳೆ ಬೆನ್ನುನೋವಿಗೆ ತುತ್ತಾಗಿದ್ದ ಕಿಂಗ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಲಿಲ್ಲ. ಪ್ರಮುಖ ಆಟಗಾರನ ಅಲಭ್ಯತೆಯು ವೆಸ್ಟ್ ಇಂಡೀಸ್​ ಇನಿಂಗ್ಸ್ ಮೇಲೆ ಪರಿಣಾಮ ಬೀರಿತು.

ಸಂಕ್ಷಿಪ್ತ ಸ್ಕೋರ್ ವಿವರ:

  • ವೆಸ್ಟ್ ಇಂಡೀಸ್ (ಮೊದಲ ಇನ್ನಿಂಗ್ಸ್): 344/10 (ಜಸ್ಟಿನ್ ಗ್ರೀವ್ಸ್ 73, ರೋಸ್ಟನ್ ಚೇಸ್ 70; ಸಾಜಿದ್ ಖಾನ್ 4/85)
  • ಪಾಕಿಸ್ತಾನ್ (ಮೊದಲ ಇನ್ನಿಂಗ್ಸ್): 387/10 (ಅಬ್ದುಲ್ಲಾ ಶಫೀಕ್ 160*, ಬಾಬರ್ ಆಝಂ 88; ಜೋಮೆಲ್ ವಾರಿಕನ್ 6/112)
  • ವೆಸ್ಟ್ ಇಂಡೀಸ್ (ಎರಡನೇ ಇನ್ನಿಂಗ್ಸ್): 117/10 (ಕಾವೆಮ್ ಹಾಡ್ಜ್ 34; ಅಲಿ ಉಸ್ಮಾನ್ 4/39, ಸಾಜಿದ್ ಖಾನ್ 4/32)
  • ಪಾಕಿಸ್ತಾನ್ (ಎರಡನೇ ಇನ್ನಿಂಗ್ಸ್ – ಗುರಿ 75 ರನ್): 23.3 ಓವರ್‌ಗಳಲ್ಲಿ 77/2 (ಬಾಬರ್ ಆಝಂ 24*, ಅಬ್ದುಲ್ಲಾ ಶಫೀಕ್ 24*)

ಇದನ್ನೂ ಓದಿ: CWC 2027: 36 ತಂಡಗಳ ಕದನ: ಕೇವಲ 4 ತಂಡಗಳಿಗೆ ಅವಕಾಶ!

ಈ ಪಂದ್ಯದ ಗೆಲುವಿನೊಂದಿಗೆ ಪಾಕಿಸ್ತಾನ್ ತಂಡವು 2 ಮ್ಯಾಚ್​ಗಳ ಸರಣಿಯನ್ನು 1-1 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Loading...
Unable to load recommendations.
Follow Us