PAK vs ENG: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಇಂಗ್ಲೆಂಡ್- ಪಾಕ್ ಮೊದಲ ಪಂದ್ಯ ಸ್ಥಳಾಂತರ..!
PAK vs ENG: ವಾಸ್ತವವಾಗಿ ರಾವಲ್ಪಿಂಡಿಯಲ್ಲಿ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯ ಸ್ಥಳಾಂತರಗೊಳ್ಳಲು ಪ್ರಮುಖ ಕಾರಣ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿ.
ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸದ ಭಾಗ ಎರಡು ಇಷ್ಟರಲ್ಲೇ ಆರಂಭವಾಗಲಿದೆ. ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಇಂಗ್ಲೆಂಡ್ ತಂಡ ಟಿ20 ಸರಣಿ ಆಡಲು ಪಾಕಿಸ್ತಾನಕ್ಕೆ ತೆರಳಿದ್ದು, ಈಗ ಅಲ್ಲಿಗೆ ಟೆಸ್ಟ್ ಸರಣಿ ಆಡಲು ತೆರಳಲಿದೆ. ಡಿಸೆಂಬರ್ 1 ರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ (Pakistan and England) ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ನಿಗಧಿಯಂತೆ ಈ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಿಂದ (Rawalpindi) ಆರಂಭವಾಗಬೇಕಿತ್ತು. ಆದರೆ ಈಗ ಮೊದಲ ಟೆಸ್ಟ್ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ ಎಂಬ ವರದಿ ಇದೆ. ರಾವಲ್ಪಿಂಡಿಯಲ್ಲಿ ರಾಜಕೀಯ ತಾಪಮಾನ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಈ ನಗರದ ಮೊದಲ ಟೆಸ್ಟ್‌ನ ಜಾಗಕ್ಕೆ ಗ್ರಹಣ ಹಿಡಿದಿದೆ. ಇದೇ ಕಾರಣಕ್ಕೆ ಪಿಸಿಬಿ (PCB) ಈಗ ಕರಾಚಿಯನ್ನು ಮೊದಲ ಟೆಸ್ಟ್ ಪಂದ್ಯದ ವೇದಿಕೆಯನ್ನಾಗಿ ನೋಡುತ್ತಿದೆ.
ಇಂಗ್ಲೆಂಡ್‌ನ ಪಾಕಿಸ್ತಾನ ಪ್ರವಾಸದಲ್ಲಿ ಈಗಾಗಲೇ ನಿಗದಿತ ವೇಳಾಪಟ್ಟಿಯ ಪ್ರಕಾರ, 3 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ, ಎರಡನೇ ಪಂದ್ಯ ಮುಲ್ತಾನ್‌ನಲ್ಲಿ ಮತ್ತು ಮೂರನೇ ಪಂದ್ಯ ಕರಾಚಿಯಲ್ಲಿ ನಡೆಯಬೇಕಿತ್ತು. ಆದರೆ, ಈಗ ರಾವಲ್ಪಿಂಡಿಯಲ್ಲಿ ರಾಜಕೀಯ ಅರಾಜಕತೆ ನಿರ್ಮಾಣವಾಗಿದ್ದು, ಹೀಗಾಗಿ ಮೊದಲ ಪಂದ್ಯ ಕರಾಚಿಯಲ್ಲಿ ನಡೆಯುವ ಸಾಧ್ಯತೆಗಳಿವೆ. ಇದರರ್ಥ ಕರಾಚಿ, ಟೆಸ್ಟ್ ಸರಣಿಯ ಮೊದಲ ಮತ್ತು ಮೂರನೇ ಪಂದ್ಯಗಳಿಗೆ ಮತ್ತೊಮ್ಮೆ ಆತಿಥ್ಯ ವಹಿಸಲಿದೆ.
ಮೊದಲ ಟೆಸ್ಟ್ ರಾವಲ್ಪಿಂಡಿಯಿಂದ ಕರಾಚಿಗೆ ಸ್ಥಳಾಂತರ
ಸ್ಥಳ ಬದಲಾದರೂ ಟೆಸ್ಟ್ ಪಂದ್ಯದ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಖಚಿತವಾಗಿದೆ. ಹಾಗೆಯೇ ಎರಡನೇ ಟೆಸ್ಟ್ ನಡೆಯುವ ಸ್ಥಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮೊದಲಿನಂತೆ ಮುಲ್ತಾನ್‌ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ. 20 ವರ್ಷಗಳ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡ ಈ ಬಾರಿ ಕರಾಚಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. 2000-01ರಲ್ಲಿ ಇಂಗ್ಲೆಂಡ್ ಇಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು.
ಸರಣಿಯ ಮೊದಲ ಟೆಸ್ಟ್ ಪಂದ್ಯದ ಸ್ಥಳಕ್ಕೆ ಸಂಬಂಧಿಸಿದಂತೆ ಕರಾಚಿ ಹೆಸರನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಮುಂದಿನ 48 ರಿಂದ 72 ಗಂಟೆಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ರಾವಲ್ಪಿಂಡಿಯಿಂದ ಟೆಸ್ಟ್ ಪಂದ್ಯ ಶಿಫ್ಟಾಗಿದ್ದು ಏಕೆ?
ವಾಸ್ತವವಾಗಿ ರಾವಲ್ಪಿಂಡಿಯಲ್ಲಿ ನಡೆಯಬೇಕಾಗಿದ್ದ ಟೆಸ್ಟ್ ಪಂದ್ಯ ಸ್ಥಳಾಂತರಗೊಳ್ಳಲು ಪ್ರಮುಖ ಕಾರಣ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ನಡೆದ ಮಾರಣಾಂತಿಕ ದಾಳಿ. ಸುಮಾರು ಎರಡು ವಾರಗಳ ಹಿಂದೆ, ಇಮ್ರಾನ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಮ್ರಾನ್ ಖಾನ್ಗೆ ಗುಂಡು ತಗುಲಿತ್ತಾದರೂ ಪ್ರಾಣಪಾಯದಿಂದ ಬದುಕುಳಿದಿದ್ದರು. ಆ ಘಟನೆಯಿಂದ ರಾವಲ್ಪಿಂಡಿಯಲ್ಲಿ ರಾಜಕೀಯ ಉದ್ವಿಗ್ನ ವಾತಾವರಣವಿದ್ದು, ಜನರು ಹೊಸದಾಗಿ ಚುನಾವಣೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ರಾವಲ್ಪಿಂಡಿಯಲ್ಲಿ ಹೆಚ್ಚಿದ ರಾಜಕೀಯ ಉದ್ವಿಗ್ನತೆಯ ಪರಿಣಾಮ ಪಾಕಿಸ್ತಾನದ ದೇಶೀಯ ಪಂದ್ಯಾವಳಿಯ ಕ್ವೈಡ್-ಎ-ಅಜಮ್ ಟ್ರೋಫಿ ಪಂದ್ಯಗಳ ಮೇಲೂ ಕಂಡುಬಂದಿದೆ. ಈಗ ಅದರ ಪರಿಣಾಮ ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿಯಲ್ಲಿಯೂ ಗೋಚರಿಸುತ್ತಿದೆ.