ಕೊರೊನಾ ವೈರಸ್ ಸೋಂಕು ಮತ್ತೊಮ್ಮೆ ಕ್ರಿಕೆಟ್ ಪಂದ್ಯಗಳ ಮೇಲೆ ತನ್ನ ಪರಿಣಾಮ ತೋರಿಸಲಾರಂಭಿಸಿದೆ. ಅದರ ಇತ್ತೀಚಿನ ಬಲಿಪಶುಗಳು ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್. ಕೊರೊನಾ ಸೋಂಕಿನಿಂದಾಗಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಕೊರೊನಾ ಸೋಂಕಿನ ಅನೇಕ ಪ್ರಕರಣಗಳ ನಂತರ, ಎರಡೂ ಮಂಡಳಿಗಳು ಮುಂದಿನ ವರ್ಷ ಸರಣಿಯನ್ನು ಒಟ್ಟಿಗೆ ಆಡಲು ನಿರ್ಧರಿಸಿವೆ. ಗುರುವಾರ ಉಭಯ ತಂಡಗಳ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ಶಿಬಿರದಲ್ಲಿ 5 ಸೋಂಕಿನ ಪ್ರಕರಣಗಳು ಕಂಡುಬಂದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೂರು ಪಂದ್ಯಗಳ ODI ಸರಣಿಯು ಕರಾಚಿಯಲ್ಲಿ ಡಿಸೆಂಬರ್ 18 ರಿಂದ ಪ್ರಾರಂಭವಾಗಬೇಕಿತ್ತು.
ಗುರುವಾರ, ಡಿಸೆಂಬರ್ 16 ರಂದು ಕರಾಚಿಯಲ್ಲಿ ಉಭಯ ತಂಡಗಳ ನಡುವೆ ಮೂರನೇ ಟಿ20 ಪಂದ್ಯ ನಡೆಯುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ಜಂಟಿ ಹೇಳಿಕೆಯಲ್ಲಿ ಸರಣಿಯನ್ನು ಮುಂದೂಡಲು ನಿರ್ಧರಿಸಿದೆ. ಎರಡೂ ತಂಡಗಳ ಯೋಗಕ್ಷೇಮ ಮತ್ತು ವೆಸ್ಟ್ ಇಂಡೀಸ್ ತಂಡದೊಂದಿಗೆ ಏಕದಿನ ಸರಣಿಗಾಗಿ ಸೀಮಿತ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಭಾಗವಾಗಿರುವ ಏಕದಿನ ಸರಣಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಈ ಸರಣಿಯನ್ನಯ ಜೂನ್ 2022 ರಲ್ಲಿ ಮತ್ತೆ ಆಡಲಾಗುತ್ತದೆ.
ಕೊರೊನಾ ಪ್ರಕರಣಗಳ ನಡುವೆಯೂ ಮೂರನೇ ಟಿ20 ಪಂದ್ಯ
ವಿಂಡೀಸ್ ತಂಡದಲ್ಲಿ ಕೊರೊನಾ ಪ್ರಕರಣ ಕಂಡುಬಂದ ನಂತರ ಮೂರನೇ ಟಿ 20 ಪಂದ್ಯವೂ ಅಪಾಯದಲ್ಲಿತ್ತು. ಆದರೆ ಇದಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಮನವೊಲಿಸುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಗುರುವಾರ ಬೆಳಗ್ಗೆ ಪಿಸಿಬಿಯ ಕೋವಿಡ್-19 ಪ್ರೋಟೋಕಾಲ್ ಅಡಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಉಳಿದ 15 ಆಟಗಾರರು ಮತ್ತು 6 ಮಂದಿ ಸಹಾಯಕ ಸಿಬ್ಬಂದಿಯನ್ನು ಕ್ಷಿಪ್ರ ಪ್ರತಿಜನಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಎಲ್ಲಾ ಸದಸ್ಯರ ವರದಿ ನೆಗೆಟಿವ್ ಬಂದಿತ್ತು.ಹೀಗಾಗಿ ಮೂರನೇ ಟಿ20ಯನ್ನು ವೇಳಾಪಟ್ಟಿಯ ಪ್ರಕಾರ ಆಡಲಾಯಿತು.
21 ಆಟಗಾರರ ಪೈಕಿ 14 ಮಂದಿ ಮಾತ್ರ ಉಳಿದಿದ್ದಾರೆ
ಈ ಟಿ20 ಮತ್ತು ಏಕದಿನ ಪ್ರವಾಸಕ್ಕೆ ವೆಸ್ಟ್ ಇಂಡೀಸ್ 21 ಆಟಗಾರರ ತಂಡವನ್ನು ಕರೆತಂದಿತ್ತು. ತಂಡವು ಡಿಸೆಂಬರ್ 9 ರಂದು ಪಾಕಿಸ್ತಾನವನ್ನು ತಲುಪಿತು. ಆದರೆ ಕರಾಚಿಗೆ ಬಂದಿಳಿದ ನಂತರ, 3 ಆಟಗಾರರು ಸೇರಿದಂತೆ 4 ಸದಸ್ಯರು ಸೋಂಕಿಗೆ ಒಳಗಾಗಿದ್ದರು. ಅದೇ ಸಮಯದಲ್ಲಿ, ಬುಧವಾರ ಹೊಸ ಪ್ರಕರಣಗಳು ಕಾಣಿಸಿಕೊಂಡ ನಂತರ ವಿಂಡೀಸ್ ಶಿಬಿರದಲ್ಲಿ ಕೊನೆಯ ಟಿ 20 ಗೆ ಕೇವಲ 14 ಆಟಗಾರರು ಮಾತ್ರ ಲಭ್ಯವಿದ್ದರು. ತಂಡದ ಆರು ಆಟಗಾರರು ಮತ್ತು ಮೂವರು ಸಹಾಯಕ ಸಿಬ್ಬಂದಿ ಕೋವಿಡ್ -19 ಗೆ ತುತ್ತಾಗಿದ್ದು ಒಬ್ಬ ಆಟಗಾರ ಡೆವೊನ್ ಥಾಮಸ್ ಮೊದಲ ಟಿ 20 ಪಂದ್ಯದಲ್ಲಿ ಬೆರಳಿನ ಗಾಯದಿಂದ ಹೊರಗುಳಿದಿದ್ದಾರೆ.
Published On - 9:10 pm, Thu, 16 December 21