ಏಷ್ಯಾಕಪ್ 2022 ರಲ್ಲಿಂದು (Asia Cup 2022) ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋತಿರುವ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ (Pakistan vs Hong Kong) ತಂಡ ಇಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರಷ್ಟೇ ಉಳಿಗಾಲ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ ಗೆದ್ದ ತಂಡ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಸೆಪ್ಟೆಂಬರ್ 4 ರಂದು ಭಾರತ ವಿರುದ್ಧ ಸೆಣೆಸಾಟ ನಡೆಸಲಿದೆ. ಎಲ್ಲಾದರು ಇಂದು ಪಾಕಿಸ್ತಾನ ಜಯ ಸಾಧಿಸಿದರೆ ಇಂಡೋ– ಪಾಕ್ (IND vs PAK) ಕದನ ಮತ್ತೆ ನಡೆಯಲಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಪಾಕಿಸ್ತಾನ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಕಳೆದ ಪಂದ್ಯದಲ್ಲಿ ಭಾರತ ಎದುರು ನಡೆಯಲಿಲ್ಲ. ಸ್ವತಃ ನಾಯಕ ಬಾಬರ್ ಅಜಮ್ ವೈಫಲ್ಯ ಅನುಭವಿಸಿದರು. ರಿಜ್ವಾನ್ 43 ರನ್ಗಳ ಕೊಡುಗೆ ನೀಡಿದ್ದರಷ್ಟೆ. ಇಫ್ತಿಖರ್ ಅಹ್ಮದ್ 28 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳೆಲ್ಲ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಬೌಲಿಂಗ್ನಲ್ಲಿ ಕೂಡ ನಸೀಂ ಶಾ ಹಾಗೂ ಶಾದಾಬ್ ಖಾನ್ ಬಿಟ್ಟರೆ ಉಳಿದವರೆಲ್ಲ ದುಬಾರಿಯಾಗಿದ್ದರು.
ನಸೀಂ ಶಾ ಕಳೆದ ಭಾರತ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಇವರ ಲಭ್ಯತೆ ಬಗ್ಗೆ ಅನುಮಾನವಿದೆ. ಹೀಗಾದಲ್ಲಿ ಇದು ತಂಡಕ್ಕೆ ಮತ್ತೊಂದು ಹೊಡೆತ ಖಚಿತ. ಯಾಕೆಂದರೆ ಏಷ್ಯಾಕಪ್ ಆರಂಭಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದ ಶಾಹೀನ್ ಅಫ್ರಿದಿ ಜಾಗಕ್ಕೆ ನಸೀಂ ಬಂದಿದ್ದರು. ಈಗ ನಸೀಂ ಕೂಡ ಹೊರಗುಳಿದರೆ ಪಾಕ್ಗೆ ಹಿನ್ನಡೆಯಾಗಲಿದೆ. ಬಾಬರ್ ಅಜಮ್ ಮೇಲೆ ಒತ್ತಡ ಕೂಡ ಹೆಚ್ಚಿದ್ದು ಬ್ಯಾಟಿಂಗ್ನಲ್ಲಿ ಕೊಡುಗೆ ನೀಡಬೇಕಿದೆ.
ಇತ್ತ ಹಾಂಗ್ ಕಾಂಗ್ ತಂಡವನ್ನು ದುರ್ಬಲ ಎಂದು ಹೇಳಲು ಸಾಧ್ಯವಿಲ್ಲ. ಭಾರತ ವಿರುದ್ಧ ಸೋತಿದ್ದರೂ ಕಠಿಣ ಪೈಪೋಟಿ ನೀಡಿತ್ತು. ಬಾಬರ್ ಹಯಾತ್ ಹಾಗೂ ಕಿಂಚಿತ್ ಶಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇವರಿಗೆ ನಿಜಾಖಾತ್ ಖಾನ್, ಯಾಸೀಂ ಮುರ್ತಾಜ ಹಾಗೂ ಜೀಶನ್ ಅಲಿ ಸಾಥ್ ನೀಡಿದರೆ ಪಾಕಿಸ್ತಾನ ಪರದಾಡುವುದು ಖಚಿತ. ಆದರೆ, ಹಾಂಗ್ ಕಾಂಗ್ ಬೌಲರ್ಗಳು ದುಬಾರಿಯಾಗುತ್ತಿದ್ದಾರೆ. ಪ್ರಮುಖ ಬೌಲರ್ ಹರೂನ್ ಅರ್ಶದ್ ಕಳೆದ ಪಂದ್ಯದಲ್ಲಿ 3 ಓವರ್ಗೆ 53 ರನ್ ನೀಡಿದ್ದರು. ಹೀಗಾಗಿ ಬೌಲರ್ಗಳು ಎದುರಾಳಿಯನ್ನು ಕಟ್ಟಿ ಹಾಕಲು ರಣತಂತ್ರ ರೂಪಿಸಬೇಕಿದೆ.
ಪಂದ್ಯದ ಆರಂಭ ಸಮಯ: ಟಾಸ್– ರಾತ್ರಿ 7 ಗಂಟೆಗೆ, ಪಂದ್ಯ ಶುರು– ರಾತ್ರಿ 7.30 ಕ್ಕೆ
ಮೈದಾನ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ, ಶಾರ್ಜಾ.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್ವರ್ಕ್ನ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ. ಹಾಗೆಯೇ ಡಿಸ್ನಿ ಸ್ಟಾರ್ ಆ್ಯಪ್ನಲ್ಲೂ ಲೈವ್ ವೀಕ್ಷಿಸಬಹುದು.
ಸಂಭಾವ್ಯ ಪ್ಲೇಯಿಂಗ್ XI:
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಖರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಅಸಿಫ್ ಅಲಿ, ಮೊಹಮ್ಮದ್ ನವಾಜ್, ನಸೀಂ ಶಾ/ಮೊಹಮ್ಮದ್ ಹಸ್ನೇನ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ.
ಹಾಂಗ್ ಕಾಂಗ್: ನಿಜಾಕತ್ ಖಾನ್ (ನಾಯಕ), ಯಾಸೀಂ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಶದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ.
Published On - 8:39 am, Fri, 2 September 22