Asia Cup 2022: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯ ಎಂದರೆ ಹೈವೋಲ್ಟೇಜ್, ಬದ್ಧವೈರಿಗಳ ಮುಖಾಮುಖಿ…ಹೀಗೆ ನಾನಾ ಉತ್ಪ್ರೇಕ್ಷೆಗಳ ನಡುವೆ ಇದೀಗ ಮೂವರು ಕ್ರಿಕೆಟ್ ಪ್ರೇಮಿಗಳು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ-ಪಾಕ್ ನಡುವಿನ ಪಂದ್ಯವು ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯಿತು. ವಿಶೇಷ ಎಂದರೆ ಈ ಮೂವರು ಕ್ರಿಕೆಟ್ ಪ್ರೇಮಿಗಳಲ್ಲಿ ಇಬ್ಬರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು. ಆದರೆ ಅವರು ಭಾರತೀಯರಲ್ಲ. ಬದಲಾಗಿ ಪಾಕಿಸ್ತಾನದವರು. ಇನ್ನು ಇವರ ಜೊತೆ ಕಾಣಿಸಿಕೊಂಡ ಓರ್ವ ಭಾರತೀಯ ಬಾಬರ್ ಆಜಂ ಅಭಿಮಾನಿ.
ಅಂದರೆ ಇಲ್ಲಿ ಪಾಕ್ ತಂಡವನ್ನು ಬೆಂಬಲಿಸಲು ಬಂದ ಇಬ್ಬರು ಅಭಿಮಾನಿಗಳು ಪಾಕಿಸ್ತಾನದ ಜೆರ್ಸಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಹೆಸರುಗಳನ್ನು ಬರೆಸಿಕೊಂಡಿದ್ದರು. ಹಾಗೆಯೇ ಭಾರತ ತಂಡವನ್ನು ಬೆಂಬಲಿಸುತ್ತಿದ್ದ ಭಾರತೀಯ ಅಭಿಮಾನಿ ತನ್ನ ನೆಚ್ಚಿನ ಕ್ರಿಕೆಟಿಗ ಬಾಬರ್ ಆಜಂ ಹೆಸರನ್ನು ಹಚ್ಚಾಕಿಸಿದ್ದರು.
ಅತ್ತ ಮೈದಾನದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ-ಬಾಬರ್ ಆಜಂ-ರೋಹಿತ್ ಶರ್ಮಾ ಹೊಸ ಸಂದೇಶ ನೀಡುತ್ತಿದ್ದರೆ, ಇತ್ತ ಅಭಿಮಾನಿಗಳು ಕೂಡ ಜೊತೆ ಜೊತೆಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಏಕೆಂದರೆ ಏಷ್ಯಾಕಪ್ ಆರಂಭಕ್ಕೂ ಮುನ್ನ ಬಾಬರ್ ಆಜಂ ಹಾಗೂ ವಿರಾಟ್ ಕೊಹ್ಲಿ ನಡುವಣ ಭೇಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಬೇಗ ಮದುವೆಯಾಗುವಂತೆ ಬಾಬರ್ ಆಜಂರನ್ನು ಕಾಲೆಳೆಯುವ ರೋಹಿತ್ ಶರ್ಮಾ ಅವರ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದೀಗ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಈ ನಡೆಯು ಅಭಿಮಾನಿಗಳಲ್ಲೂ ಬದಲಾವಣೆ ತರುತ್ತಿರುವುದು ಸ್ಪಷ್ಟ. ಅಲ್ಲದೆ ಸಂಪ್ರಾದಾಯಿಕ ಎದುರಾಳಿಗಳ ನಡುವಣ ಮುಖಾಮುಖಿಯನ್ನು ಕೇವಲ ಕ್ರಿಕೆಟ್ ಪಂದ್ಯವನ್ನಾಗಿ ನೋಡುವಂತೆ ಉಭಯ ತಂಡಗಳ ಫ್ಯಾನ್ಸ್ ಕೂಡ ಸಂದೇಶ ರವಾನಿಸುತ್ತಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ (60) ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಈ ಕಠಿಣ ಟಾರ್ಗೆಟ್ ಬೆನ್ನತ್ತಿದ ಪಾಕ್ ಪರ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (71) ಅರ್ಧಶತಕ ಬಾರಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಅದರಂತೆ ಕೊನೆಯ ಓವರ್ನಲ್ಲಿ 7 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು 1 ಎಸೆತ ಬಾಕಿಯಿರುವಾಗ 182 ರನ್ಗಳ ಗುರಿ ಮುಟ್ಟುವ ಮೂಲಕ 5 ವಿಕೆಟ್ಗಳ ರೋಚಕ ಜಯ ಸಾಧಿಸಿತು.