ಏಷ್ಯಾಕಪ್ 2022ರ ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್ 4ಗೆ ಲಗ್ಗೆಯಿಟ್ಟಿದ್ದ ಭಾರತಕ್ಕೆ ಮೊದಲ ಮ್ಯಾಚ್ ನಲ್ಲೇ ಶಾಕ್ ಆಗಿದೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ತಪ್ಪುಗಳನ್ನು ಎಸಗಿ ಅಂತಿಮ ಹಂತದಲ್ಲಿ ಸೋಲು ಕಾಣಬೇಕಾಯಿತು.
ಪಾಕ್ ಪರ ವಿರಾಟ್ ಕೊಹ್ಲಿ ಮಾತ್ರ ಕೊನೆಯ ವರೆಗೂ ನಿಂತು ತಂಡದ ಮೊತ್ತ ಹೆಚ್ಚಿಸಲು ನೆರವಾದರು. ರೋಹಿತ್–ರಾಹುಲ್ ನಿರ್ಗಮನದ ಬಳಿಕ ಕುಸಿತ ಕಂಡ ಭಾರತಕ್ಕೆ ಕೊಹ್ಲಿ ಬೆನ್ನೆಲುಬಾಗಿ ನಿಂತರು. 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್ ಗಳ ಕೊಡುಗೆ ನೀಡಿದರು.
ಈ ಸೋಲಿನ ಮೂಲಕ ಇದೀಗ ರೋಹಿತ್ ಪಡೆಯ ಫೈನಲ್ ಹಾದಿ ಕಠಿಣವಾಗಿದ್ದು, ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲ ಬೇಕಾದ ಒತ್ತಡದಲ್ಲಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು.
ರೋಹಿತ್ ಹಾಗೂ ಕೆಎಲ್ ರಾಹುಲ್ ತಲಾ 28 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಉರುಳುತ್ತಿದ್ದರೆ ಅತ್ತ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಾಕಿಸ್ತಾನದ ಪರ ಶದಾಬ್ ಖಾನ್ 2 ವಿಕೆಟ್ ಪಡೆದರೆ, ನಸೀಮ್ ಶಾ, ಮೊಹಮ್ಮದ್, ಹ್ಯಾರಿಸ್ ರೌಫ್ ಹಾಗೂ ನವಾಜ್ ತಲಾ 1 ವಿಕೆಟ್ ಕಿತ್ತರು.
ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮೊಹಮ್ಮದ್ ರಿಜ್ವಾನ್ (71 ರನ್, 51 ಎಸೆತ, 6 ಬೌಂಡರಿ,2 ಸಿಕ್ಸರ್) ಹಾಗೂ ಮೊಹಮ್ಮದ್ ನವಾಜ್ (42 ರನ್, 20 ಎಸೆತ) 3ನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ಗೆಲುವಿಗೆ ಕಾರಣರಾದರು.
ಭಾರತದ ಪರ ಭುವನೇಶ್ವರ್, ರವಿ ಬಿಷ್ಣೋಯಿ, ಹಾರ್ದಿಕ್ ಪಾಂಡ್ಯ ಹಾಗೂ ಯುಜ್ವೇಂದ್ರ ಚಹಲ್ ತಲಾ 1 ವಿಕೆಟ್ ಪಡೆದರು.
Published On - 12:00 pm, Mon, 5 September 22