India vs Pakistan: ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ಮುಗಿದಿದೆ. ಈ ಪಂದ್ಯದಲ್ಲಿ ಪಾಕ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿ ಶುಭಾರಂಭ ಮಾಡಿತು. ಈ ಸೋಲಿನ ಬಳಿಕ ಇದೀಗ ಪಾಕಿಸ್ತಾನ್ ತಂಡವು ಹಾಂಗ್ ಕಾಂಗ್ ವಿರುದ್ದದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳದ ಹಸನ್ ಅಲಿ ಇದೀಗ 2ನೇ ಪಂದ್ಯಕ್ಕಾಗಿ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿಯ ಮೈದಾನದಲ್ಲಿ ಬೆವರಿಳಿಸುತ್ತಿರುವುದು ಕಂಡು ಬಂದಿದೆ.
ಹೀಗೆ ಅಭ್ಯಾಸ ಮಾಡುತ್ತಿದ್ದ ಪಾಕ್ ಕ್ರಿಕೆಟಿಗರನ್ನು ಕೆಲ ಅಭಿಮಾನಿಗಳು ಭೇಟಿಯಾಗಿದ್ದಾರೆ. ಈ ವೇಳೆ ಭಾರತೀಯರು ಕೂಡ ಇದ್ದರು ಎಂಬುದು ವಿಶೇಷ.
ಇವರಲ್ಲಿ ಇಬ್ಬರು ಹಸನ್ ಅಲಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ನಿಮಗೆ ಭಾರತದಲ್ಲಿ ತುಂಬಾ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿದಾಕ್ಷಣ ಹಸನ್ ಅಲಿ ಐ ಲವ್ ಇಂಡಿಯಾ ಎಂದು ಉತ್ತರಿಸಿದರು. ಅಲ್ಲದೆ ಆ ವ್ಯಕ್ತಿಯ ಜೊತೆಗಿದ್ದ ಮಹಿಳೆಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಇದೀಗ ಹಸನ್ ಅಲಿ ನಾನು ಕೂಡ ಭಾರತವನ್ನು ಪ್ರೀತಿಸುತ್ತೇನೆ ಎಂದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಕ್ ಆಟಗಾರನ ಈ ಹೇಳಿಕೆಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ ಹಸನ್ ಅಲಿ ವಿವಾಹವಾಗಿರುವುದು ಕೂಡ ಭಾರತೀಯ ಯುವತಿಯನ್ನು ಎಂಬುದು ವಿಶೇಷ. ಹರ್ಯಾಣ ಮೂಲದ ಸಮಿಯಾ ಅರ್ಜೂ ಅವರನ್ನು ಪಾಕ್ ಕ್ರಿಕೆಟಿಗ 2019 ರಲ್ಲಿ ವಿವಾಹವಾಗಿದ್ದರು. ದುಬೈನ ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಇಂಜಿನಿಯರ್ ಆಗಿರುವ ಸಮಿಯಾ ಹಾಗೂ ಹಸನ್ ಅಲಿ 2 ವರ್ಷಗಳ ಪರಸ್ಪರ ಡೇಟಿಂಗ್ ಮಾಡಿದ್ದರು. ಇದಾದ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತನಗೆ ಭಾರತದ ಮೇಲಿರುವ ಪ್ರೀತಿಯನ್ನು ಬಹಿರಂಗವಾಗಿಯೇ ತಿಳಿಸುವ ಮೂಲಕ ಹಸನ್ ಅಲಿ ಎಲ್ಲರ ಮನಗೆದ್ದಿದ್ದಾರೆ.
ಈ ಬಾರಿಯ ಏಷ್ಯಾಕಪ್ಗೆ ಆಯ್ಕೆ ಮಾಡಿದ ತಂಡದಲ್ಲಿ ಹಸನ್ ಅಲಿಗೆ ಸ್ಥಾನ ಸಿಕ್ಕಿರಲಿಲ್ಲ. ತಂಡದ ಪ್ರಮುಖ ವೇಗಿ ವಾಸಿಂ ಜೂನಿಯರ್ ಗಾಯಗೊಂಡ ಕಾರಣ, ಹಸನ್ ಅಲಿ ಅವರನ್ನು ಕೊನೆಯ ಕ್ಷಣದಲ್ಲಿ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದಾಗ್ಯೂ ಅನುಭವಿ ವೇಗಿ ಟೀಮ್ ಇಂಡಿಯಾ ವಿರುದ್ದ ನಡೆದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.