India vs Pakistan: ಗೆದ್ದ ಭಾರತ ತಂಡಕ್ಕೆ, ಸೋತ ಪಾಕ್ಗೆ ದಂಡದ ಬರೆ..!
Asia Cup 2022: ನಿಗದಿತ ಸಮಯದಲ್ಲಿ ಓವರ್ ಮುಗಿಸದಿದ್ದರೆ ಕೇವಲ 4 ಫೀಲ್ಡರ್‌ಗಳು ಮಾತ್ರ ವೃತ್ತದ ಹೊರಗೆ ನಿಲ್ಲಲು ಅವಕಾಶ ಇರಲಿದೆ. ಅದರಂತೆ ಭಾರತ-ಪಾಕಿಸ್ತಾನ್ ತಂಡಗಳು ಕೊನೆಯ ಓವರ್ಗಳ ವೇಳೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತಗೊಳಿಸಿತ್ತು.
Asia Cup 2022: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಣ ಪಂದ್ಯದಲ್ಲಿ ಉಭಯ ತಂಡಗಳು ಮಾಡಿದ ತಪ್ಪಿಗಾಗಿ ಐಸಿಸಿ ದಂಡ ವಿಧಿಸಿದೆ. ಎರಡೂ ತಂಡಗಳು ನಿಗದಿತ ಸಮಯದೊಳಗೆ ಓವರ್ಗಳನ್ನು ಪೂರ್ಣಗೊಳಿಸ ಕಾರಣ ಇದೀಗ ಸ್ಲೋ ಓವರ್ ರೇಟ್ ಶಿಕ್ಷೆಯಾಗಿ ಪಂದ್ಯ ಶುಲ್ಕದ ಶೇ.40 ರಷ್ಟು ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ಉಭಯ ತಂಡಗಳು ಸ್ಲೋ ಓವರ್ ರೇಟ್ ಕಾರಣದಿಂದಾಗಿ ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಐಸಿಸಿ ಹೊಸ ನಿಯಮದ ಪ್ರಕಾರ, ಒಂದು ತಂಡವು ತನ್ನ ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಉಳಿದ ಓವರ್ಗಳ ವೇಳೆ ಓರ್ವ ಫೀಲ್ಡರ್ನನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ.
ಅಂದರೆ ನಿಗದಿತ ಸಮಯದಲ್ಲಿ 20 ಓವರ್ ಪೂರ್ಣಗೊಳಿಸದಿದ್ದರೆ, ಬೌಂಡರಿ ಲೈನ್ನಲ್ಲಿರುವ ಒಬ್ಬ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ನಲ್ಲಿ (ಫ್ರಂಟ್ ಫೀಲ್ಡರ್) ಫೀಲ್ಡಿಂಗ್ ನಿಲ್ಲಿಸಬೇಕು. ಪವರ್‌ಪ್ಲೇ (ಮೊದಲ 6 ಓವರ್‌ಗಳು) ನಂತರ 30-ಯಾರ್ಡ್ ಸರ್ಕಲ್ ಹೊರಗೆ 5 ಫೀಲ್ಡರ್‌ಗಳನ್ನು ನಿಲ್ಲಿಸಬಹುದು. ಆದರೆ ಹೊಸ ನಿಯಮಗಳ ಬಳಿಕ, ನಿಗದಿತ ಸಮಯದಲ್ಲಿ ಓವರ್ ಮುಗಿಸದಿದ್ದರೆ ಕೇವಲ 4 ಫೀಲ್ಡರ್‌ಗಳು ಮಾತ್ರ ವೃತ್ತದ ಹೊರಗೆ ನಿಲ್ಲಲು ಅವಕಾಶ ಇರಲಿದೆ. ಅದರಂತೆ ಭಾರತ-ಪಾಕಿಸ್ತಾನ್ ತಂಡಗಳು ಕೊನೆಯ ಓವರ್ಗಳ ವೇಳೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತಗೊಳಿಸಿತ್ತು.
ಉಭಯ ತಂಡಗಳು ಮಾಡಿದ ಸ್ಲೋ ಓವರ್ ರೇಟ್ ತಪ್ಪಿಗಾಗಿ ಐಸಿಸಿ ಪ್ರತಿ ಓವರ್ನಂತೆ ದಂಡ ವಿಧಿಸಿದೆ. ಅಂದರೆ ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳ್ಳದಿದ್ದರೆ, ಎಷ್ಟು ಓವರ್‌ಗಳು ಬಾಕಿ ಇರುತ್ತವೆಯೋ ಅಷ್ಟು ದಂಡ ಪಾವತಿಸಬೇಕಾಗುತ್ತದೆ. ಇಲ್ಲಿ ಪ್ರತಿ ಓವರ್ಗೆ ಪಂದ್ಯ ಶುಲ್ಕದ ಶೇ. 20 ರಷ್ಟು ದಂಡ ವಿಧಿಸಲಾಗುತ್ತದೆ. ಅದರಂತೆ ಭಾರತ ಹಾಗೂ ಪಾಕಿಸ್ತಾನ್ ತಂಡವು ನಿಗದಿತ ಸಮಯದಲ್ಲಿ 18 ಓವರ್ಗಳನ್ನು ಮಾತ್ರ ಪೂರ್ಣಗೊಳಿಸಿತ್ತು. ಈ ತಪ್ಪನ್ನು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದು, ಹೀಗಾಗಿ ಐಸಿಸಿಐ ಈ ಪ್ರಕರಣದ ಔಪಚಾರಿಕ ವಿಚಾರಣೆ ನಡೆಸಿಲ್ಲ.
ಅಲ್ಲದೆ ನಿಗದಿತ ಸಮಯದೊಳಗೆ ಓವರ್ ಪೂರ್ಣಗೊಳಿಸದೇ 2 ಓವರ್ ಬಾಕಿ ಉಳಿಸಿದ್ದ ಟೀಮ್ ಇಂಡಿಯಾಗೆ 20+20 ಯಂತೆ ಪಂದ್ಯದ ಶುಲ್ಕದ ಶೇ. 40 ರಷ್ಟು ದಂಡ ವಿಧಿಸಲಾಗಿದೆ. ಹಾಗೆಯೇ 2 ಓವರ್ ಬಾಕಿಯಿಟ್ಟಿದ್ದ ಪಾಕಿಸ್ತಾನ ತಂಡಕ್ಕೂ ಶೇ. 40ರಷ್ಟು ದಂಡ ವಿಧಿಸಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ನಿಗದಿತ 20 ಓವರ್ಗಳಲ್ಲಿ 147 ರನ್ ಕಲೆಹಾಕಿತ್ತು. ಈ ಸುಲಭ ಸವಾಲನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ಗಳನ್ನು ಬಾರಿಸಿ ರೋಚಕ ಜಯ ಸಾಧಿಸಿತ್ತು. ಇಂದು (ಆಗಸ್ಟ್ 31) ಭಾರತ ತಂಡವು ಹಾಂಗ್ ಕಾಂಗ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೂಪರ್- 4 ಹಂತಕ್ಕೇರಲಿದೆ.
Published On - 5:21 pm, Wed, 31 August 22