ಬಿಸಿಸಿಐ ಕ್ಷಮೆಯಾಚಿಸಿದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಆದರೆ…
India vs Pakistan: ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 150 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 9ನೇ ಬಾರಿ ಏಷ್ಯಾಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿತು.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಭಾರತೀಯ ಕ್ರಿಕೆಟ್ ಮಂಡಳಿಯ ಕ್ಷಮೆಯಾಚಿಸಿದ್ದಾರೆ. ಏಷ್ಯಾಕಪ್ ಫೈನಲ್ ಬಳಿಕ ಏನು ನಡೆಯಬಾರದಿತ್ತೋ, ಅದು ನಡೆದು ಹೋಗಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ನಖ್ವಿ ತಿಳಿಸಿದ್ದಾರೆ. ಇದಾಗ್ಯೂ ಅವರು ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸುವ ಬಗ್ಗೆ ತನ್ನ ನಿಲುವು ಬದಲಿಸಿಲ್ಲ.
ಭಾನುವಾರ (ಸೆ.28) ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು 5 ವಿಕೆಟ್ಗಳ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು.
ಇದಕ್ಕೆ ಮುಖ್ಯ ಕಾರಣ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರಾಗಿರುವುದು. ಇದರ ಜೊತೆಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ಪಾಕ್ ವ್ಯಕ್ತಿಯಿಂದ ಏಷ್ಯಾಕಪ್ ಸ್ವೀಕರಿಸಲು ನಿರಾಕರಿಸಿತ್ತು.
ಇದನ್ನೂ ಓದಿ: 6,6,6,6,6,6,6,6: ಟೆಸ್ಟ್ನಲ್ಲೂ ಶರವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ
ಅತ್ತ ಭಾರತೀಯ ಆಟಗಾರರು ತನ್ನಿಂದ ಟ್ರೋಫಿ ಸ್ವೀಕರಿಸಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮೊಹ್ಸಿನ್ ನಖ್ವಿ, ಏಷ್ಯಾ ಕಪ್ ಟ್ರೋಫಿ ಹಾಗೂ ವಿನ್ನರ್ ಮೆಡಲ್ಗಳನ್ನು ಹೊಟೇಲ್ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು. ಇದರಿಂದಾಗಿ ಟೀಮ್ ಇಂಡಿಯಾ ಆಟಗಾರರು ಟ್ರೋಫಿ ಇಲ್ಲದೇ ಸಂಭ್ರಮಿಸಿದ್ದರು.
ಬಿಸಿಸಿಐ ಆಕ್ರೋಶ:
ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ನಡೆಗೆ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿತ್ತು. ಸೆಪ್ಟೆಂಬರ್ 30 ರಂದು ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದ ಬಿಸಿಸಿಐ ಪ್ರತಿನಿಧಿಗಳು, ಕೌನ್ಸಿಲ್ನ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮೊಹ್ಸಿನ್ ನಖ್ವಿ ಕ್ಷಮೆಯಾಚಿಸಿದ್ದಾರೆ. ಆದರೆ….
ಕಪ್ ಕೊಡಲು ಒಪ್ಪದ ನಖ್ವಿ:
ಈ ಕ್ಷಮಯಾಚಣೆಯ ಹೊರತಾಗಿಯೂ ಮೊಹ್ಸಿನ್ ನಖ್ವಿ ಭಾರತಕ್ಕೆ ಟ್ರೋಫಿ ಹಸ್ತಾಂತರಿಸಲು ಮುಂದಾಗಿಲ್ಲ. ಇದಕ್ಕಾಗಿ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. ಅಂದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರೇ ಬಂದು ಏಷ್ಯಾಕಪ್ ಟ್ರೋಫಿ ಸ್ವೀಕರಿಸಲಿ ಎಂದು ಆಗ್ರಹಿಸಿದ್ದಾರೆ. ಅತ್ತ ಕ್ಷಮೆಯಾಚಿಸಿದರೂ ಟ್ರೋಫಿ ನೀಡುವ ಬಗ್ಗೆ ಪಟ್ಟು ಸಡಿಲಿಸದ ಕಾರಣ ಏಷ್ಯಾಕಪ್ ವಿವಾದ ಮುಂದುವರೆಯುವ ಸಾಧ್ಯತೆಯಿದೆ.
Published On - 1:14 pm, Wed, 1 October 25
