
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾನುವಾರ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಾಯಿಂಟ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳು ಜಯಕ್ಕಾಗಿ ಹೋರಾಟ ನಡೆಸಲಿದ್ದು ಗೆದ್ದ ತಂಡ ಸೆಮಿ ಫೈನಲ್ ಪ್ರವೇಶಿಸಲು ಹತ್ತಿರವಾಗಲಿದೆ. ಟೀಮ್ ಇಂಡಿಯಾ ಆಡಿರುವ ಎರಡು ಪಂದ್ಯಗಳ ಪೈಕಿ ಎರಡನ್ನೂ ಗೆದ್ದು 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ, +1.425 ರನ್ರೇಟ್ ಹೊಂದಿದೆ. ಇತ್ತ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್ರೇಟ್ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ಗೆದ್ದರೆ ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಆಫ್ರಿಕಾ ಗೆದ್ದರೆ ಟೀಮ್ ಇಂಡಿಯಾ (Team India) ದ್ವಿತೀಯ ಸ್ಥಾನಕ್ಕೆ ಕುಸಿಯುತ್ತದೆ.
ಉಭಯ ತಂಡಗಳಿಗೆ ಪರ್ತ್ನಲ್ಲಿ ನಡೆಯಲಿರುವ ಪಂದ್ಯ ಬಹುಮುಖ್ಯ ಆಗಿರುವುದರಿಂದ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಸಲಿದೆಯೇ?. ಯಾಕೆಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಮಳೆಯ ಆಟ ಕೂಡ ಭರ್ಜರಿ ಆಗಿ ನಡೆಯುತ್ತಿದೆ. ಶುಕ್ರವಾರ ಮೆಲ್ಬೋರ್ನ್ನಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ- ಐರ್ಲೆಂಡ್ ಹಾಗೂ ಇಂಗ್ಲೆಂಡ್- ಆಸ್ಟ್ರೇಲಿಯಾ ನಡುವಣ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದ ಸಂಪೂರ್ಣ ರದ್ದಾಯಿತು. ಹಾಗಾದರೆ ಭಾರತ- ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆಯ ಕಾಟ ಇದೆಯೇ?.
ಪರ್ತ್ನಲ್ಲಿ ನಡೆಯಲಿರುವ ಭಾರತ- ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಪಂದ್ಯದ ದಿನ ಕೊಂಚ ಮಳೆ ಬೀಳುವ ಸಂಭವವಿದೆ. ಬೆಳಗ್ಗೆ 10 ಗಂಟೆಯಿಂದ 12 ಗಂಟೆ ನಡುವೆ ಮಳೆ ಆಗಬಹುದು. ಆದರೆ, ನಂತರ ವರುಣನ ಕಾಟ ಇರುವುದಿಲ್ಲ. ಭಾರತ-ಆಫ್ರಿಕಾ ಪಂದ್ಯ ಆಸ್ಟ್ರೇಲಿಯಾ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಶುರುವಾಗಲಿದೆ. ಹೀಗಾಗಿ ಈ ರೋಚಕ ಕದನ ಯಾವುದೇ ಅಡೆತಡೆಗಳಿಲ್ಲದೆ ಜರುಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಪರ್ತ್ ಸ್ಟೇಡಿಯಂನಲ್ಲಿನ ಪಿಚ್ ಬಗ್ಗೆ ಗಮನಿಸುವುದಾದರೆ, ಇಲ್ಲಿ ಬೌಲರ್‌ಗಳು ಹೆಚ್ಚು ಯಶಸ್ಸು ಸಾಧಿಸುತ್ತಾರೆ. ಈ ಪಿಚ್ ಹೆಚ್ಚು ಬೌನ್ಸ್ ಒದಗಿಸುವ ನಿರೀಕ್ಷೆಯಿದೆ. ವೇಗದ ಬೌಲರ್‌ಗಳು ಮೇಲ್ಮೈಯಲ್ಲಿ ಕಾರ್ಯನಿರ್ವಹಿಸುವುದನ್ನು ಆನಂದಿಸಬೇಕು. ಬೌಲರ್ಗಳ ಜೊತೆಗೆ ಪರ್ತ್‌ನಲ್ಲಿರುವ ಟ್ರ್ಯಾಕ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಇಲ್ಲಿ ನಡೆದಿರುವ ಬಹುತೇಕ ಪಂದ್ಯ ಹೈಸ್ಕೋರ್ ಗೇಮ್ ಆಗಿದೆ. ಹೀಗಾಗಿ ಸ್ಫೋಟಕ ಬ್ಯಾಟರ್ಗಳಿಂದ ಕೂಡಿರುವ ಭಾರತ-ಆಫ್ರಿಕಾ ಪಂದ್ಯ ಕೂಡ ರೋಚಕತೆಯಿಂದ ಕೂಡಿರಲಿದೆ.
ರೋಹಿತ್ ಶರ್ಮಾ ಸುದ್ದಿಗೋಷ್ಠಿ:
ಭಾನುವಾರದ ಪಂದ್ಯಕ್ಕೂ ಮೊದಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನ 12:30ಕ್ಕೆ ಪರ್ತ್ನಲ್ಲಿ ಹಿಟ್ಮ್ಯಾನ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇಲ್ಲಿ ಪತ್ರಕರ್ತರು ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಜೊತೆಗೆ ತಂಡದಲ್ಲಿನ ಬದಲಾವಣೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ರೋಹಿತ್ಗೆ ಎದುರಾಗಬಹುದಾದ ಪ್ರಶ್ನೆಗಳ ಪೈಕಿ ಮುಖ್ಯವಾಗಿ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಇರುವುದು ಖಚಿತ. ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದರಿಂದ ತಂಡ ಉತ್ತಮ ಆರಂಭ ಕೂಡ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಏನಾದರು ಬದಲಾವಣೆ ಮಾಡುವ ಸಂಭವವಿದೆಯೇ ಎಂಬ ಬಗ್ಗೆ ಮಾಹಿತಿ ಬಿಚ್ಚಿಡಲಿದ್ದಾರೆ. ರಾಹುಲ್ ವಿಚಾರದಲ್ಲಿ ರೋಹಿತ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
Published On - 10:52 am, Sat, 29 October 22