India vs South Africa: ಹಿಂದಿನ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ವಿರುದ್ಧ ಭಾರತ ಹೇಗೆ ಆಡಿತ್ತು?: ಇಲ್ಲಿದೆ ಫುಲ್ ಡಿಟೇಲ್ಸ್
ICC T20 World Cup 2022: ಈ ಹಿಂದಿನ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ- ದಕ್ಷಿಣ ಆಫ್ರಿಕಾ (India vs South Africa) ಐದು ಬಾರಿ ಮುಖಾಮುಖಿ ಆಗಿತ್ತು. ಈ ಸಂದರ್ಭ ಏನಾಗಿತ್ತು ಎಂಬುದನ್ನು ನೋಡೋಣ.
ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾರತ ಮುಂದಿನ ಸವಾಲಿಗೆ ಸಜ್ಜಾಗುತ್ತಿದೆ. ಅಕ್ಟೋಬರ್ 30 ರಂದು ಟೀಮ್ ಇಂಡಿಯಾ (Team India) ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಪ್ರಾರಂಭವಾಗಲಿದೆ. ಗ್ರೂಪ್ 2 ರಲ್ಲಿರುವ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯಿಸಿ +1.425 ರನ್ರೇಟ್ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಇತ್ತ ಆಫ್ರಿಕಾ 3 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಗೆದ್ದ ತಂಡ ಸೆಮಿ ಫೈನಲ್ ಹಂತಕ್ಕೇರಲು ಮತ್ತಷ್ಟು ಸನಿಹವಾಗಲಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದ್ದು ಹೂವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ. ಈ ಹಿಂದಿನ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತ-ಆಫ್ರಿಕಾ (India vs South Africa) ಐದು ಬಾರಿ ಮುಖಾಮುಖಿ ಆಗಿತ್ತು. ಈ ಸಂದರ್ಭ ಏನಾಗಿತ್ತು ಎಂಬುದನ್ನು ನೋಡೋಣ.
2007 ಟಿ20 ವಿಶ್ವಕಪ್: ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ- ಆಫ್ರಿಕಾ ನಡುವಣ ಮುಖಾಮುಖಿ ರಣರೋಚಕವಾಗಿತ್ತು. ಯಾಕೆಂದರೆ ಸೆಮಿ ಫೈನಲ್ಗೆ ತಲುಪಬೇಕಾದರೆ ಧೋನಿ ನೇತೃತ್ವದ ಟೀಮ್ ಇಂಡಿಯಾ ಗೆಲ್ಲಲೇ ಬೇಕಾಗಿತ್ತು. ಈ ಪಂದ್ಯದಲ್ಲಿ ಭಾರತ ರೋಹಿತ್ ಶರ್ಮಾ ಅವರ 40 ಎಸೆತದಲ್ಲಿ 50 ರನ್ ಮತ್ತು ಆರ್ಪಿ ಸಿಂಗ್ 13 ರನ್ಗೆ 4 ವಿಕೆಟ್ ಕಿತ್ತು 37 ರನ್ಗಳ ಜಯ ಸಾಧಿಸುವಂತೆ ಮಾಡಿದರು.
2009 ಟಿ20 ವಿಶ್ವಕಪ್: ಟಿ20 ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿರುವುದು ಇದೊಂದೆ ಪಂದ್ಯದಲ್ಲಿ. ಟ್ರೆಂಟ್ಬ್ರಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಭಾರತಕ್ಕೆ ಇದುದೊಡ್ಡ ಟಾರ್ಗೆಟ್ ಏನೂ ಆಗಿರಲಿಲ್ಲ. ಆದರೆ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ 12 ರನ್ಗಳ ಸೋಲು ಕಂಡಿತು.
2010 ಟಿ20 ವಿಶ್ವಕಪ್: ಆಫ್ರಿಕಾ ವಿರುದ್ಧ ನಡೆದ ಈ ವಿಶ್ವಕಪ್ ಪಂದ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ಈ ಮ್ಯಾಚ್ನಲ್ಲಿ ಸುರೇಶ್ ರೈನಾ ಕೇವಲ 60 ಎಸೆತಗಳಲ್ಲಿ 101 ರನ್ ಸಿಡಿಸಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದರು. ರೈನಾ ಅವರ ಈ ಸ್ಫೋಟಕ ಆಟದ ನೆರವಿನಿಂದ ಭಾರತ 186 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿದ ಪರಿಣಾಮ ಭಾರತ 14 ರನ್ಗಳಿಂದ ಗೆದ್ದಿತು.
2012 ಟಿ20 ವಿಶ್ವಕಪ್: ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ 1 ರನ್ಗಳ ಜಯ ಸಾಧಿಸಿತು. 153 ರನ್ ಗಳಿಸಿದ್ದ ಭಾರತ ಕೊನೆಯ ಓವರ್ನಲ್ಲಿ ಗೆದ್ದಿತು. ಲಕ್ಷ್ಮೀಪತಿ ಬಾಲಾಜಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು.
2014 ಟಿ20 ವಿಶ್ವಕಪ್: ಈ ಟಿ20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ಮುಖಾಮುಖಿ ಆದ ಭಾರತ ಭರ್ಜರಿ ಪ್ರದರ್ಶನ ತೋರಿತು. ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 72 ರನ್ ಚಚ್ಚಿ ಭಾರತಕ್ಕೆ 19.1 ಓವರ್ನಲ್ಲಿ 173 ರನ್ ಗಳಿಸವಂತೆ ಮಾಡಿ ಗೆಲುವು ತಂದುಕೊಟ್ಟರು. ಈ ಮೂಲಕ ಫೈನಲ್ಗೆ ಟೀಮ್ ಇಂಡಿಯಾ ಲಗ್ಗೆಯಿಟ್ಟಿತು. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಇದೇ ಕೊನೆಯ ಬಾರಿಗೆ ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ ಆಗಿದ್ದು.