‘ನಿವೃತ್ತಿಯ ಬಳಿಕ ಭಾರತ- ಪಾಕ್ ಪಂದ್ಯವನ್ನು ಲೈವ್ ನೋಡುವುದೇ ನನ್ನ ಜೀವನದ ಹೆಬ್ಬಯಕೆ’; ಆಸೀಸ್ ನಾಯಕ

T20 World Cup 2022: ನಿವೃತ್ತಿಯ ನಂತರ ಫಿಂಚ್, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವುದನ್ನು ಎದುರು ನೋಡುತ್ತಿದ್ದಾರೆ.

‘ನಿವೃತ್ತಿಯ ಬಳಿಕ ಭಾರತ- ಪಾಕ್ ಪಂದ್ಯವನ್ನು ಲೈವ್ ನೋಡುವುದೇ ನನ್ನ ಜೀವನದ ಹೆಬ್ಬಯಕೆ’; ಆಸೀಸ್ ನಾಯಕ
ಫಿಂಚ್, ಭಾರತ- ಪಾಕ್ ಆಟಗಾರರು
Follow us
TV9 Web
| Updated By: ಪೃಥ್ವಿಶಂಕರ

Updated on:Oct 29, 2022 | 10:37 AM

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ( T20 World Cup 2022) ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಈ ಟೂರ್ನಿಯಲ್ಲಿ ಈಗಾಗಲೇ ಕೆಲವು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿದ್ದು, ಬಲಿಷ್ಠ ತಂಡಗಳನ್ನೇ ಮಣ್ಣು ಮುಕ್ಕಿಸುವುದರಲ್ಲಿ ದುರ್ಬಲ ತಂಡಗಳು ಯಶಸ್ವಿಯಾಗಿವೆ. ಇದೆಲ್ಲದರ ನಡುವೆ ಆತಿಥೇಯ ಆಸೀಸ್ ತಂಡದ ನಾಯಕ ಆರನ್ ಫಿಂಚ್ (Aaron Finch) ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಇದರೊಂದಿಗೆ ನಿವೃತ್ತಿ ಬಳಿಕ ಕಡ್ಡಾಯವಾಗಿ ಮಾಡಲೇಬೇಕಾದ ಒಂದು ಕೆಲಸವನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ನಿವೃತ್ತಿ ಬಳಿಕ ಫಿಂಚ್ ನೆರವೇರಿಸಿಕೊಳ್ಳಬೇಕಾದ ಮಹಾದಾಸೆ ಯಾವುದೆಂದರೆ, ನಿವೃತ್ತಿಯ ನಂತರ ಫಿಂಚ್, ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವುದನ್ನು ಎದುರು ನೋಡುತ್ತಿದ್ದಾರೆ. ಕ್ರಿಕೆಟ್‌ನ ಅತ್ಯಂತ ಹೈ-ವೋಲ್ಟೇಜ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ನಾನು ಎಂದಿಗೂ ಕಳೆದುಕೊಳ್ಳುವುದಿಲ್ಲಿ ಎಂದು ಆಸ್ಟ್ರೇಲಿಯದ ಟಿ20 ನಾಯಕ ಫಿಂಚ್ ಹೇಳಿಕೊಂಡಿದ್ದಾರೆ.

ಕಳೆದ ವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದೇನೆ. ಆದರೆ ಈ ಪಂದ್ಯವನ್ನು ಸ್ಟ್ಯಾಂಡ್‌ನಲ್ಲಿ ಕುಳಿತು ವೀಕ್ಷಿಸಲು ಕಾಯುತ್ತಿದ್ದೇನೆ. ಅಲ್ಲದೆ ನಿವೃತ್ತಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಹೋಗುವ ದಿನಕ್ಕಾಗಿ ಕಾಯುತ್ತಾ ಕುಳಿತಿರುವುದು ಕಷ್ಟವೆನಿಸುತ್ತಿದೆ ಎಂದು ಆಸ್ಟ್ರೇಲಿಯಾದ ನಾಯಕ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲಿ 11 ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ಶಾಕ್ ನೀಡಿದ ದುರ್ಬಲ ತಂಡಗಳು..!

ಕೊಹ್ಲಿಯನ್ನು ಹೊಗಳಿದ ಫಿಂಚ್

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಫಿಂಚ್, ಫಲಿತಾಂಶ ಏನೇ ಇರಲಿ, ಭಾರತ ಮತ್ತು ಪಾಕಿಸ್ತಾನ ಒಂದೊಳ್ಳೆ ಪಂದ್ಯವನ್ನಾಡಿದವು ಎಂಬುದು ನನ್ನ ಭಾವನೆಯಾಗಿದೆ. ನಾನು ನಿಜವಾಗಿಯೂ ಮನೆಯಲ್ಲಿ ಕುಳಿತು ಭಯಭೀತನಾಗಿದ್ದೆ ಎಂದಿದ್ದಾರೆ. ಹಾಗೆಯೇ ಕೊಹ್ಲಿ ಬ್ಯಾಟಿಂಗ್ ಶ್ಲಾಘಿಸಿದ ಫಿಂಚ್, ವಿರಾಟ್ ಕೊಹ್ಲಿ ಮಾಸ್ಟರ್ ಕ್ಲಾಸ್ ಬ್ಯಾಟ್ಸ್​ಮನ್, ಕೊಹ್ಲಿ ಬ್ಯಾಟಿಂಗ್​ನಲ್ಲಿದ್ದರೆ ಅವರು ಎದುರಾಳಿ ತಂಡದ ಮೇಲೆ ಎಷ್ಟು ಒತ್ತಡ ಹೇರುತ್ತಾರೆ ಎಂಬುದು ಈ ಪಂದ್ಯದಲ್ಲಿ ಗೊತ್ತಾಯಿತು ಎಂದು ಫಿಂಚ್ ಕೊಹ್ಲಿ ಬ್ಯಾಟಿಂಗ್ ಹೊಗಳಿದ್ದಾರೆ.

ನಾಲ್ಕನೇ ಸ್ಥಾನದಲ್ಲಿ ಆಸೀಸ್

ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಅತಿಥೇಯ ತಂಡ 3 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದು 3 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅದೇ ಅಂಕಗಳೊಂದಿಗೆ ಉತ್ತಮ ರನ್ ರೇಟ್‌ನಿಂದ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.

ಆಸ್ಟ್ರೇಲಿಯಾದ ಮೂರನೇ ಪಂದ್ಯ ರದ್ದು

ಆಸ್ಟ್ರೇಲಿಯ ತನ್ನ ಮೊದಲ ಪಂದ್ಯದಲ್ಲಿ ಕಿವೀಸ್ ಎದುರು 89 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಇದಾದ ನಂತರ ಆತಿಥೇಯರು ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದು ತನ್ನ ಗೆಲುವಿನ ಖಾತೆ ತೆರೆಯಿತು. ಬಳಿಕ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದ ಆತಿಥೇಯರಿಗೆ ಮಳೆ ವಿಲನ್ ಆಯಿತು. ಇಂಗ್ಲೆಂಡ್ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಿದೆ. ಹೀಗಾಗಿ ಉಳಿದಿರುವ ಎರಡು ಪಂದ್ಯಗಳಲ್ಲಿ ಆಸೀಸ್ ಪಡೆ ಭಾರೀ ಅಂತರದ ಗೆಲುವು ಸಾಧಿಸುವುದರೊಂದಿಗೆ ಸೇಮಿಸ್​ಗೆ ಎಂಟ್ರಿಕೊಡುವ ಪ್ರಯತ್ನದಲ್ಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sat, 29 October 22