ಸ್ಪೋಟಕ ಸೆಂಚುರಿ ಸಿಡಿಸಿ ವಿಂಡೀಸ್ ಬೌಲರ್​ಗಳ ಬೆವರಿಳಿಸಿದ ಸಾಲ್ಟ್​

| Updated By: ಝಾಹಿರ್ ಯೂಸುಫ್

Updated on: Dec 17, 2023 | 9:38 AM

Phil Salt Century: ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲಿ 56 ಎಸೆತಗಳನ್ನು ಎದುರಿಸಿ 9 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಸಿಡಿಲಬ್ಬರದ ಶತಕ ಸಿಡಿಸಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ (109) ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಪೋಟಕ ಸೆಂಚುರಿ ಸಿಡಿಸಿ ವಿಂಡೀಸ್ ಬೌಲರ್​ಗಳ ಬೆವರಿಳಿಸಿದ ಸಾಲ್ಟ್​
Phil Salt
Follow us on

ಗ್ರೇನಾಡದ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಫಿಲ್ ಸಾಲ್ಟ್ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರರಾದ ಕೈಲ್ ಮೇಯರ್ಸ್ (0) ಹಾಗೂ ಬ್ರಾಂಡನ್ ಕಿಂಗ್ (8) ಬಂದ ವೇಗದಲ್ಲೇ ಹಿಂತಿರುಗಿದ್ದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಎಡಗೈ ದಾಂಡಿಗ ನಿಕೋಲಸ್ ಪೂರನ್ 45 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 82 ರನ್ ಚಚ್ಚಿದರು.

ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಶೆರ್ಫಾನ್ ರುದರ್​ಫೋರ್ಡ್​ 17 ಎಸೆತಗಳಲ್ಲಿ 29 ರನ್​ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್​ ಕಲೆಹಾಕಿತು.

223 ರನ್​ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಸ್ಪೋಟಕ ಆರಂಭ ಒದಗಿಸಿದ್ದರು. 11.2 ಓವರ್​ಗಳಲ್ಲಿ ಮೊದಲ ವಿಕೆಟ್​ಗೆ 115 ರನ್ ಪೇರಿಸಿದ ಜೋಸ್ ಬಟ್ಲರ್ (51) ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಫಿಲ್ ಸಾಲ್ಟ್​ ಸಿಡಿಲಬ್ಬರ ಮಾತ್ರ ಮುಂದುವರೆಯಿತು. ವೆಸ್ಟ್ ಇಂಡೀಸ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದ ಸಾಲ್ಟ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ ಇಂಗ್ಲೆಂಡ್​ಗೆ ಗೆಲ್ಲಲು 31 ರನ್​ಗಳ ಅವಶ್ಯಕತೆಯಿತ್ತು.

19ನೇ ಓವರ್​ನಲ್ಲಿ ಬ್ರೂಕ್-ಸಾಲ್ಟ್ ಜೊತೆಗೂಡಿ ಕೇವಲ 10 ರನ್​ಗಳಿಸಲಷ್ಟೇ ಯಶಸ್ವಿಯಾಗಿದ್ದರು. ಇದರಿಂದ ಕೊನೆಯ 6 ಎಸೆತಗಳಲ್ಲಿ 21 ರನ್​ಗಳಿಸಬೇಕಿತ್ತು.

ಆ್ಯಂಡ್ರೆ ರಸೆಲ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲೇ ಹ್ಯಾರಿ ಬ್ರೂಕ್ ಫೋರ್ ಬಾರಿಸಿದರು. 2ನೇ ಮತ್ತು 3ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು. 4ನೇ ಎಸೆತದಲ್ಲಿ 2 ರನ್​ ಕಲೆಹಾಕಿದ ಹ್ಯಾರಿ ಬ್ರೂಕ್ 5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಈ ಪಂದ್ಯದಲ್ಲಿ 56 ಎಸೆತಗಳನ್ನು ಎದುರಿಸಿ 9 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 109 ರನ್ ಬಾರಿಸಿದ್ದ ಫಿಲ್ ಸಾಲ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಾಯ್ ಹೋಪ್, ಶೆರ್ಫಾನ್ ರುದರ್​ಫೋರ್ಡ್​, ರೋವ್​ಮನ್ ಪೊವೆಲ್ (ನಾಯಕ), ಆ್ಯಂಡ್ರೆ ರಸೆಲ್, ಅಲ್ಜಾರಿ ಜೋಸೆಫ್, ಅಕೇಲ್ ಹೋಸೇನ್, ಗುಡಾಕೇಶ್ ಮೋಟಿ, ಜೇಸನ್ ಹೋಲ್ಡರ್.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾಗೆ ಬಿಗ್ ಆಫರ್ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್​

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ವಿಲ್ ಜಾಕ್ಸ್, ಹ್ಯಾರಿ ಬ್ರೂಕ್, ಮೊಯೀನ್ ಅಲಿ, ರೀಸ್ ಟಾಪ್ಲಿ, ಟೈಮಲ್ ಮಿಲ್ಸ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್.

Published On - 9:36 am, Sun, 17 December 23