Updated on: May 06, 2023 | 10:59 PM
IPL 2023 DC vs RCB: ಐಪಿಎಲ್ನ 50ನೇ ಪಂದ್ಯದಲ್ಲಿ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಫಿಲ್ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು.
ವಿರಾಟ್ ಕೊಹ್ಲಿ (55) ಹಾಗೂ ಮಹಿಪಾಲ್ ಲೋಮ್ರರ್ (54) ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಫಿಲ್ ಸಾಲ್ಟ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಆರ್ಸಿಬಿ ಬೌಲರ್ಗಳ ಬೆಂಡೆತ್ತಿದರು.
ಅದರಲ್ಲೂ ಮೊಹಮ್ಮದ್ ಸಿರಾಜ್ ಎಸೆದ 5ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಸಾಲ್ಟ್ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸಿದರು. ಆದರೆ ಸಿರಾಜ್ 4ನೇ ಎಸೆತವನ್ನು ಬೌನ್ಸರ್ ಎಸೆದರು.
ಅತ್ತ ಮಾರಕ ಬೌನ್ಸರ್ಗೆ ಉತ್ತರಿಸಲಾಗದೇ ಫಿಲ್ ಸಾಲ್ಟ್ ಅದೇನೋ ಗೊಣಗಿದ್ದಾರೆ. ಇತ್ತ ಮೊದಲೇ ಸಿಕ್ಸ್-ಫೋರ್ ಹೊಡೆಸಿಕೊಂಡು ಕುಪಿತಗೊಂಡಿದ್ದ ಮೊಹಮ್ಮದ್ ಸಿರಾಜ್ ಅವರ ಸಹನೆಯ ಕಟ್ಟೆ ಒಡೆದಿದೆ.
ಅಲ್ಲದೆ ಸೀದಾ ಹೋಗಿ ಫಿಲ್ ಸಾಲ್ಟ್ ಜೊತೆಗೆ ಕಿರಿಕ್ಗೆ ಇಳಿದಿದ್ದಾರೆ. ಹಾಗೆಯೇ ಮಾತಿನ ಚಕಮಕಿ ನಡುವೆ ಸಾಲ್ಟ್ಗೆ ಮುಚ್ಕೊಂಡಿರಬೇಕು ಎಂದು ಕೈ ತೋರಿಸಿ ಸೂಚನೆ ನೀಡಿದ್ದಾರೆ. ಇದರ ನಡುವೆ ನಾನ್ ಸ್ಟ್ರೈಕ್ನಲ್ಲಿದ್ದ ಡೇವಿಡ್ ವಾರ್ನರ್ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.
ಆದರೆ ಮೊದಲೇ ಸಿಡಿಮಿಡಿಗೊಂಡಿದ್ದ ಸಿರಾಜ್ ವಾರ್ನರ್ ಜೊತೆಗೂ ವಾಗ್ವಾದಕ್ಕೆ ಇಳಿದರು. ಅಷ್ಟರಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ಜಗಳವನ್ನು ಕೊನೆಗೊಳಿಸಿದರು. ಇದೀಗ ಸಿರಾಜ್ ಅವರ ಈ ಕೋಪತಾಪದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದಹಾಗೆ ಈ ಅತಿರೇಕದ ವರ್ತನೆಗೆ ಮೊಹಮ್ಮದ್ ಸಿರಾಜ್ಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ. ಐಪಿಎಲ್ ನೀತಿ ಸಂಹಿತೆ ಲೆವೆಲ್-1 ಫೈನ್ ಬಿದ್ದರೆ ಸಿರಾಜ್ 12 ಲಕ್ಷ ರೂ. ದಂಡ ಪಾವತಿಸಬೇಕಾಗಿ ಬರಬಹುದು. ಅಥವಾ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಬಹುದು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವಣ ಚಕಮಕಿ ಮರೆಯುವ ಮುನ್ನವೇ ಇದೀಗ ಸಿರಾಜ್ ಸಾಲ್ಟ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಇದರಿಂದ ಫೇರ್ಪ್ಲೇ ಪಾಯಿಂಟ್ಸ್ನಲ್ಲಿ ಆರ್ಸಿಬಿ 9ನೇ ಸ್ಥಾನಕ್ಕಿಳಿದಿದೆ.