Mankading: ವಿಶ್ವ ಕ್ರಿಕೆಟ್​ನಲ್ಲಿ ಮಂಕಡಿಂಗ್ ಮೂಲಕ ವಿಕೆಟ್ ಕಳೆದುಕೊಂಡ 11 ಕ್ರಿಕೆಟಿಗರಿವರು

Mankading: ಇಂಗ್ಲೆಂಡ್‌ನ ಮಹಿಳಾ ಬ್ಯಾಟರ್ ಚಾರ್ಲಿ ಡೀನ್ ಸೇರಿದಂತೆ, ಇದುವರೆಗೆ ಮಂಕಡಿಂಗ್‌ಗೆ ಬಲಿಯಾದ ಒಟ್ಟು ಕ್ರಿಕೆಟಿಗರ ಸಂಖ್ಯೆ 11 ಕ್ಕೆ ಏರಿದೆ.

Mankading: ವಿಶ್ವ ಕ್ರಿಕೆಟ್​ನಲ್ಲಿ ಮಂಕಡಿಂಗ್ ಮೂಲಕ ವಿಕೆಟ್ ಕಳೆದುಕೊಂಡ 11 ಕ್ರಿಕೆಟಿಗರಿವರು
ಚಾರ್ಲಿ ಡೀನ್ ಅವರನ್ನು ಮಂಕಡಿಂಗ್ ಮಾಡಿದ ದೀಪ್ತಿ
Follow us
TV9 Web
| Updated By: ಪೃಥ್ವಿಶಂಕರ

Updated on:Sep 25, 2022 | 5:33 PM

ಮಂಕಡಿಂಗ್‌ ಮತ್ತೆ ಸುದ್ದಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್ ರೌಂಡರ್ ದೀಪ್ತಿ ಶರ್ಮಾ (Deepti Sharma). ವಾಸ್ತವವಾಗಿ, ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಲಾರ್ಡ್ಸ್‌ನಲ್ಲಿ ಸರಣಿಯ ಕೊನೆಯ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ದೀಪ್ತಿ, ನಾನ್ ಸ್ಟ್ರೈಕರ್ ಎಂಡ್​ನಲ್ಲಿ ನಿಂತಿದ್ದ ಆಂಗ್ಲ ಬ್ಯಾಟರ್​ ಚಾರ್ಲಿ ಡೀನ್ (Charlie Dean) ಅವರನ್ನು ರನೌಟ್ ಮಾಡಿದ ಬಳಿಕ ಮಂಕಡಿಂಗ್ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಇನ್ನು ಕೆಲವರು ಈ ವಿಚಾರದಲ್ಲಿ ಟೀಂ ಇಂಡಿಯಾ ಆಟಗಾರ್ತಿ ದೀಪ್ತಿ ಶರ್ಮಾಗೆ ಬೆಂಬಲವಾಗಿ ನಿಂತಿದ್ದು, ಇನ್ನು ಹಲವರು ದೀಪ್ತಿ ಮಾಡಿದ ರನ್ ಔಟ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ದೀಪ್ತಿ ಔಟ್ ಮಾಡಿದ್ದ ರೀತಿ ಕ್ರಿಕೆಟ್ ನಿಯಮಗಳಿಗೆ ಒಳಪಟ್ಟಿದ್ದು, ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ನಾಯಕಿ ಹರ್ಮನ್ಪ್ರೀತ್​ ಕೌರ್​ ಕೂಡ ಅದನ್ನೇ ಉಲ್ಲೇಖಿಸಿದರು. ದೀಪ್ತಿ ಮಾಡಿದ ರನೌಟ್ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ನಡೆದ ಮೊದಲ ಘಟನೆಯಾಗಿರಬಹುದು, ಆದರೆ ನೀವು ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ಮಂಕಡಿಂಗ್‌ಗೆ ಬಲಿಯಾದ ಅನೇಕ ಆಟಗಾರರನ್ನು ನೀವು ಕಾಣಬಹುದು.

3 ಸ್ವರೂಪಗಳಲ್ಲಿ 11 ಆಟಗಾರರು ಮಂಕಡಿಂಗ್​ಗೆ ಬಲಿ

ಇಂಗ್ಲೆಂಡ್‌ನ ಮಹಿಳಾ ಬ್ಯಾಟರ್ ಚಾರ್ಲಿ ಡೀನ್ ಸೇರಿದಂತೆ, ಇದುವರೆಗೆ ಮಂಕಡಿಂಗ್‌ಗೆ ಬಲಿಯಾದ ಒಟ್ಟು ಕ್ರಿಕೆಟಿಗರ ಸಂಖ್ಯೆ 11 ಕ್ಕೆ ಏರಿದೆ. ವಾಸ್ತವವಾಗಿ ಮಂಕಡಿಂಗ್​ಗೆ ಇದುವರೆಗೆ 12 ವಿಕೆಟ್ ಉರುಳಿದ್ದು, ಇಂಗ್ಲೆಂಡ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ತಮ್ಮ ವಿಕೆಟ್ ಅನ್ನು ಎರಡು ಬಾರಿ ಈ ರೀತಿ ಕೈಚೆಲ್ಲಿದ್ದಾರೆ.  ಮಂಕಡಿಂಗ್‌ನಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ ವಿಕೆಟ್ ಕೈಚೆಲ್ಲಿದ ಆಟಗಾರರ ವಿವರ ಇಲ್ಲಿದೆ.

  1. ಮಂಕಡಿಂಗ್‌ನಿಂದ ಔಟಾದ ಮೊದಲ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಬಿಲ್ ಬ್ರೌನ್. 1947-48ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಆ ವೇಳೆ ಸಿಡ್ನಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಬೌಲರ್ ವಿನೂ ಮಂಕಡ್, ಬಿಲ್ ಬ್ರೌನ್ ಅವರನ್ನು ಮೊದಲ ಬಾರಿಗೆ ಈ ರೀತಿ ಔಟ್ ಮಾಡಿದ್ದರು. ಅಂದಿನಿಂದ ಮಂಕಡಿಂಗ್ ಪದವು ಕ್ರಿಕೆಟ್‌ನಲ್ಲಿ ಹುಟ್ಟಿಕೊಂಡಿತು.
  2. 1968-69ರ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಚಾರ್ಲಿ ಗ್ರಿಫಿತ್‌, ಇಯಾನ್ ರೆಡ್‌ಪಾತ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿದ್ದರು. ಈ ಮೂಲಕ ಈ ರೀತಿ ವಿಕೆಟ್ ಕಳೆದುಕೊಂಡ ಎರಡನೇ ಬ್ಯಾಟ್ಸ್‌ಮನ್ ಆಗಿ ಇಯಾನ್ ಹೆಸರು ಈ ಪಟ್ಟಿಯಲ್ಲಿ ಸೇರಿಕೊಂಡಿತು.
  3. 1974-75ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ODI ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಇಂಗ್ಲೆಂಡ್‌ನ ಬ್ರಿಯಾನ್ ಲಕ್‌ಹರ್ಸ್ಟ್ ಅವರನ್ನು ಮಂಕಡಿಂಗ್  ಔಟ್ ಮಾಡಿದ್ದರು.
  4. 1977-78ರ ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ vs ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಇವೆನ್ ಚಾಟ್‌,  ಡೆರೆಕ್ ರಾಂಡಾಲ್ ಅವರನ್ನು ಮಂಕಡಿಂಗ್ ಖೆಡ್ಡಕ್ಕೆ ಕೆಡುವಿದ್ದರು.
  5. 1978-79ರ ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಪಾಕಿಸ್ತಾನದ ಸಿಕಂದರ್ ಬಖ್ತ್, ಆಸ್ಟ್ರೇಲಿಯಾದ ಅಲನ್ ಹರ್ಸ್ಟ್ ಅವರನ್ನು ಮಂಕಡಿಂಗ್​ ಮೂಲಕ ಔಟ್ ಮಾಡಿದ್ದರು.
  6.   ಮಂಕಡಿಂಗ್​ಗೆ ಬಲಿಯಾದ 6ನೇ ಆಟಗಾರ ಜಿಂಬಾಬ್ವೆಯ ಗ್ರಾಂಟ್ ಫ್ಲವರ್ ಆಗಿದ್ದಾರೆ. ಅವರನ್ನು 1992-93ರಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ದೀಪಕ್ ಪಟೇಲ್ ಔಟ್ ಮಾಡಿದ್ದರು.
  7.   ದಕ್ಷಿಣ ಆಫ್ರಿಕಾದ ಪೀಟರ್ ಕರ್ಸ್ಟನ್ ಈ ಪಟ್ಟಿಯಲ್ಲಿ 7 ನೇ ಸ್ಥಾನ ಪಡೆದಿದ್ದು, ಅವರು 1992-93 ರಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಕಪಿಲ್ ದೇವ್ ಅವರಿಂದ ಮಂಕಡಿಂಗ್ ಆಗಿದ್ದರು.
  8. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಎರಡು ಬಾರಿ ಮಂಕಾಡಿಂಗ್‌ಗೆ ಬಲಿಯಾಗಿದ್ದಾರೆ. ಒಮ್ಮೆ 2014 ರಲ್ಲಿ, ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿತ್ರ ಸೇನಾನಾಯಕೆ ಅವರನ್ನು ವಜಾಗೊಳಿಸಿದರು. ಬಳಿಕ 2019 ರ ಐಪಿಎಲ್​ನಲ್ಲಿ ಅಶ್ವಿನ್ ಮಾಡಿದ ಮಂಕಡಿಂಗ್​ಗೆ ಬಲಿಯಾಗಿದ್ದರು.
  9. 2016 ರ ಏಷ್ಯಾಕಪ್ ಅರ್ಹತಾ ಸುತ್ತಿನಲ್ಲಿ ಒಮನ್‌ನ ಅಮೀರ್ ಕಲೀಮ್, ಹಾಂಗ್ ಕಾಂಗ್‌ನ ಮಾರ್ಕ್ ಚಾಪ್‌ಮನ್ ಅವರನ್ನು ಮಂಕಡಿಂಗ್ ಖೆಡ್ಡಾಕ್ಕೆ ಕೆಡುವಿದ್ದರು.
  10. ಅಫ್ಘಾನಿಸ್ತಾನದ ನೂರ್ ಅಲಿ ಜದ್ರಾನ್ ಮಂಕಡಿಂಗ್ ಬಲಿಯಾದ 10ನೇ  ಆಟಗಾರ ಎನಿಸಿಕೊಂಡಿದ್ದಾರೆ. 2020 ರಲ್ಲಿ, ಅಫ್ಘಾನಿಸ್ತಾನದ T20 ಲೀಗ್ ಶಪೇಜಾ ಕ್ರಿಕೆಟ್ ಲೀಗ್‌ನಲ್ಲಿ ದೌಲತ್ ಜದ್ರಾನ್ ಎಂಬ ಅಫ್ಘಾನ್ ಆಟಗಾರನಿಂದ ಅಲಿ ಜದ್ರಾನ್ ಮಂಕಡಿಂಗ್​ಗೆ ಬಲಿಯಾಗಿದ್ದರು.
  11. ಇದೀಗ ಮಂಕಡಿಂಗ್​ಗೆ ಬಲಿಯಾದ 11ನೇ ಆಟಗಾರ್ತಿಯಾಗಿ ಹಾಗೂ ಮಹಿಳಾ ಕ್ರಿಕೆಟ್​ನ ಮೊದಲ ಆಟಗಾರ್ತಿಯಾಗಿ ಇಂಗ್ಲೆಂಡ್​ನ ಚಾರ್ಲಿ ಡೀನ್ ಸೇರ್ಪಡೆಗೊಂಡಿದ್ದಾರೆ. ಇವರನ್ನು  ಭಾರತದ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಮಂಕಡಿಂಗ್ ಮಾಡಿದ್ದರು.

Published On - 5:33 pm, Sun, 25 September 22