T20 World Cup 2022: ಕೊರೊನಾ ಸೋಂಕಿಗೆ ಒಳಗಾದರೂ ಟಿ20 ವಿಶ್ವಕಪ್ ಆಡಬಹುದು! ಐಸಿಸಿ ಮಹತ್ವದ ಘೋಷಣೆ

| Updated By: ಪೃಥ್ವಿಶಂಕರ

Updated on: Oct 17, 2022 | 9:58 AM

T20 World Cup 2022: ಐಸಿಸಿ ಹೊರಡಿಸಿರುವ ನಿಯಮಾವಳಿಗಳ ಪ್ರಕಾರ ಯಾವುದೇ ಆಟಗಾರ ಸೋಂಕಿಗೆ ತುತ್ತಾದರೆ ಆತನನ್ನು ಕ್ವಾರಂಟೈನ್​ನಲ್ಲಿರಿಸುವಂತಿಲ್ಲ. ಹಾಗೆಯೇ ಪಂದ್ಯಾವಳಿಯ ಸಮಯದಲ್ಲೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಇರುವುದಿಲ್ಲ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

T20 World Cup 2022: ಕೊರೊನಾ ಸೋಂಕಿಗೆ ಒಳಗಾದರೂ ಟಿ20 ವಿಶ್ವಕಪ್ ಆಡಬಹುದು! ಐಸಿಸಿ ಮಹತ್ವದ ಘೋಷಣೆ
8ನೇ ಆವೃತ್ತಿಯ ಟಿ20 ವಿಶ್ವಕಪ್ ಆಯೋಜನೆಗೆ ಆಸ್ಟ್ರೇಲಿಯ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಪಂದ್ಯಾವಳಿಯ ಅರ್ಹತಾ ಸುತ್ತು ಈಗಾಗಲೇ ಆರಂಭವಾಗಿದ್ದು, ಸೂಪರ್ 12 ಸುತ್ತಿನ ಪಂದ್ಯಗಳು ಅ.22 ರಿಂದ ಆರಂಭವಾಗಲಿವೆ. ಈ ಚುಟುಕು ಸಮರ ಆಸ್ಟ್ರೇಲಿಯಾದ ಪ್ರಮುಖ 7 ಕ್ರೀಡಾಂಗಣಗಳಲ್ಲಿ ನಡೆಯಲ್ಲಿದ್ದು, ಆ ಕ್ರೀಡಾಂಗಣಗಳ ಬಗೆಗಿನ ಪೂರ್ಣ ಮಾಹಿತಿ ಹೀಗಿದೆ.
Follow us on

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup 2022) ಅಭಿಯಾನ ಭಾನುವಾರದಿಂದ ಆರಂಭವಾಗಿದ್ದು, ಅರ್ಹತಾ ಸುತ್ತಿನಲ್ಲೇ ಕೆಲವು ರೋಚಕ ಪಲಿತಾಂಶಗಳು ಹೊರಬಿದ್ದಿವೆ. ಇದರೊಂದಿಗೆ ಐಸಿಸಿ (ICC) ಕೂಡ ತನ್ನ ನಿಯಮಗಳಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೊರೊನಾ (Corona) ಸೋಂಕಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿದೆ. ಈ ಹಿಂದೆ, ಯಾವುದೇ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಆ ಆಟಗಾರ ತಂಡದಿಂದ ಬೇರ್ಪಟ್ಟು ನಿರ್ದಿಷ್ಟ ದಿನಗಳವರೆಗೆ ಕ್ವಾರಂಟೈನ್​ನಲ್ಲಿರಬೇಕಿತ್ತು. ಆದರೆ, ಇತ್ತೀಚೆಗೆ ಐಸಿಸಿ ಇದರಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ಕೊರೊನಾ ಸೋಂಕಿತ ಆಟಗಾರರಿಗೂ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದೆ.

ಈ ಹಿಂದೆ ನಡೆದ 2022 ರ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲೂ ಕೊರೊನಾ ಸೋಂಕಿತ ಆಟಗಾರರಿಗೆ ತಂಡದಲ್ಲಿ ಆಡಲು ಐಸಿಸಿ ಅವಕಾಶ ನೀಡಿತ್ತು. ಕಾಮನ್​ವೆಲ್​ ಗೇಮ್ಸ್​ ಫೈನಲ್​ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್​ಗೆ ಕೊರೊನಾ ಸೋಂಕು ತಗುಲಿತ್ತು. ಆದರೂ ಐಸಿಸಿ ಅವರಿಗೆ ತಂಡದಲ್ಲಿ ಆಡಲು ಅವಕಾಶ ನೀಡಿತ್ತು. ಆದರೆ ತಹ್ಲಿಯಾ ಮಾಸ್ಕ್ ಹಾಕಿಕೊಂಡು ತಂಡದಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ನಂತರ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡ ಚಿನ್ನದ ಪದಕ ಗೆದ್ದ ನಂತರ ತನ್ನ ಸಹ ಆಟಗಾರರೊಂದಿಗೆ ಸಂಭ್ರಮಿಸುವುದಕ್ಕೆ ಅವರಿಗೆ ಅವಕಾಶ ನೀಡಿತ್ತು.

ಈಗ ಐಸಿಸಿ ಹೊರಡಿಸಿರುವ ನಿಯಮಾವಳಿಗಳ ಪ್ರಕಾರ ಯಾವುದೇ ಆಟಗಾರ ಸೋಂಕಿಗೆ ತುತ್ತಾದರೆ ಆತನನ್ನು ಕ್ವಾರಂಟೈನ್​ನಲ್ಲಿರಿಸುವಂತಿಲ್ಲ. ಸೋಂಕು ತಗುಲಿದ ಆಟಗಾರ ದೈಹಿಕವಾಗಿ ಸದೃಢರಾಗಿದ್ದರೆ ಆತ ತಂಡದಲ್ಲಿ ಆಡಬಹುದು. ಆದರೆ ಇದಕ್ಕೆ ವೈದ್ಯರ ಅನುಮತಿ ಅವಶ್ಯಕ. ಹಾಗೆಯೇ ಪಂದ್ಯಾವಳಿಯ ಸಮಯದಲ್ಲೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಇರುವುದಿಲ್ಲ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಜಾಗತಿಕವಾಗಿ ಕೊರೊನಾ ಸೋಂಕಿನ ತೀವ್ರತೆಯೂ ಸಹ ಕುಂಠಿತಗೊಂಡಿದ್ದು, ಎಲ್ಲರೂ ಸಹ ಲಸಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಐಸಿಸಿ ಹೇಳಿಕೊಂಡಿದೆ.

ಇದನ್ನೂ ಓದಿ: T20 world cup 2022: ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಕ್ರಿಕೆಟಿಗರಿವರು

ಪಂದ್ಯದ ಬಗ್ಗೆ ಐಸಿಸಿ ನಿಯಮಗಳು

ಪಾಯಿಂಟ್ ವ್ಯವಸ್ಥೆಯ ಪ್ರಕಾರ, ಪಂದ್ಯಾವಳಿಯಲ್ಲಿ ಒಂದು ಪಂದ್ಯದಲ್ಲಿ ಗೆದ್ದ ತಂಡಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಹಾಗೆಯೇ ಸೋತ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ. ಪಂದ್ಯವು ಟೈ ಆದರೆ ಅಥವಾ ಮಳೆಯಿಂದ ರದ್ದಾದರೆ ಆಗ ಎರಡೂ ತಂಡಗಳಿಗು ತಲಾ 1 ಅಂಕಗಳನ್ನು ನೀಡಲಾಗುತ್ತದೆ. ಅರ್ಹತಾ ಮತ್ತು ಸೂಪರ್-12 ಸುತ್ತುಗಳಿಗೆ ಯಾವುದೇ ಮೀಸಲು ದಿನವನ್ನು ನಿಗದಿಪಡಿಸಿಲ್ಲ. ಅಂದರೆ ಪಂದ್ಯವನ್ನು ರದ್ದುಗೊಳಿಸಿದರೆ, ಅದನ್ನು ರದ್ದತಿ ಎಂದು ಪರಿಗಣಿಸಲಾಗುತ್ತದೆ.

ಯಾವ ಪಂದ್ಯಕ್ಕೆ ಮೀಸಲು ದಿನ?

ಐಸಿಸಿ ಪ್ಲೇಆಫ್ ಪಂದ್ಯಗಳಿಗೆ ಮಾತ್ರ ಮೀಸಲು ದಿನಗಳನ್ನು ಕಾಯ್ದಿರಿಸಿದೆ. ಅಂದರೆ, ಪ್ರಮುಖ ಪಂದ್ಯಗಳ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನು ಇರಿಸಲಾಗಿದೆ. ಒಂದು ವೇಳೆ ಈ ಪಂದ್ಯದ ದಿನ ಮಳೆ ಬಂದರೆ ಅಥವಾ ಬೇರೆ ಕಾರಣದಿಂದ ಪಂದ್ಯ ನಡೆಯದೇ ಇದ್ದರೆ ಮೀಸಲು ದಿನದಂದು ಪಂದ್ಯ ನಡೆಯಲಿದೆ. ಆದರೆ, ನಿಗದಿತ ಓವರ್‌ಗಳನ್ನು ಕಡಿಮೆ ಮಾಡಿದರೂ ಅದೇ ದಿನ ಪಂದ್ಯವನ್ನು ಪೂರ್ಣಗೊಳಿಸುವುದು ಮೊದಲ ಪ್ರಯತ್ನವಾಗಿದೆ.

ಪಂದ್ಯಕ್ಕೆ ನಿಗದಿ ಪಡಿಸಿದ ದಿನ ಐದು ಓವರ್‌ಗಳನ್ನು (ಉಭಯ ತಂಡಗಳಿಗು) ಬೌಲ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ ಮಾತ್ರ ಮೀಸಲು ದಿನವನ್ನು ಬಳಸಲಾಗುತ್ತದೆ. ಹಾಗೆಯೇ ಪಂದ್ಯವು ನಿಗದಿತ ದಿನದಂದು ಆರಂಭವಾಗಿ, ನಡುವೆ ಮಳೆ ಬಂದು ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಪಂದ್ಯವನ್ನು ನಿಲ್ಲಿಸಿದ ಹಂತದಿಂದ ಮುಂದುವರಿಸಲಾಗುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ