Duleep Trophy 2024: ಭರ್ಜರಿ ಸೆಂಚುರಿ ಸಿಡಿಸಿದ ಪ್ರಥಮ್ ಸಿಂಗ್
Pratham Singh: ದೆಹಲಿ ಮೂಲದ ಪ್ರಥಮ್ ಸಿಂಗ್ ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಗುಜರಾತ್ ಲಯನ್ಸ್ ಪರ ಕಣಕ್ಕಿಳಿದಿದ್ದ ಪ್ರಥಮ್ ಇದೀಗ ದೇಶೀಯ ಟೆಸ್ಟ್ ಟೂರ್ನಿಯಲ್ಲಿ ಮೂರಂಕಿ ಮೊತ್ತ ಕಲೆಹಾಕಿ ಸಂಚಲನ ಸೃಷ್ಟಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರದಲ್ಲಿರುವ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಯುವ ದಾಂಡಿಗ ಪ್ರಥಮ್ ಸಿಂಗ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು ಪ್ರಥಮ ಇನಿಂಗ್ಸ್ನಲ್ಲಿ 290 ರನ್ ಗಳಿಸಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಭಾರತ ಡಿ ತಂಡದ ಪರ ದೇವದತ್ ಪಡಿಕ್ಕಲ್ (92) ಅರ್ಧಶತಕ ಬಾರಿಸಿ ಮಿಂಚಿದ್ದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 183 ರನ್ಗಳಿಸಿ ಭಾರತ ಡಿ ತಂಡವು ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.
ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಪ್ರಥಮ್ ಸಿಂಗ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದರು.
ಮೊದಲ ವಿಕೆಟ್ಗೆ 115 ರನ್ಗಳ ಜೊತೆಯಾಟವಾಡಿದ ಬಳಿಕ ಮಯಾಂಕ್ ಅಗರ್ವಾಲ್ (56) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪ್ರಥಮ್ ಸಿಂಗ್ 149 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 189 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 122 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಶೇಷ ಎಂದರೆ ಇದು ಪ್ರಥಮ್ ಸಿಂಗ್ ಅವರ ಮೊದಲ ದುಲೀಪ್ ಟ್ರೋಫಿ ಶತಕವಾಗಿದೆ.
ಭಾರತ A (ಪ್ಲೇಯಿಂಗ್ XI): ಪ್ರಥಮ್ ಸಿಂಗ್, ಮಯಾಂಕ್ ಅಗರ್ವಾಲ್ (ನಾಯಕ), ತಿಲಕ್ ವರ್ಮಾ, ರಿಯಾನ್ ಪರಾಗ್, ಶಾಶ್ವತ್ ರಾವತ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಪ್ರಸಿದ್ಧ್ ಕೃಷ್ಣ, ಖಲೀಲ್ ಅಹ್ಮದ್, ಆಕಿಬ್ ಖಾನ್.
ಭಾರತ D (ಪ್ಲೇಯಿಂಗ್ XI): ಅಥರ್ವ ತೈಡೆ, ಯಶ್ ದುಬೆ, ಶ್ರೇಯಸ್ ಅಯ್ಯರ್ (ನಾಯಕ), ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಕಿ ಭುಯಿ, ಸರನ್ಶ್ ಜೈನ್, ಸೌರಭ್ ಕುಮಾರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವಿಧ್ವತ್ ಕಾವೇರಪ್ಪ, ಆದಿತ್ಯ ಠಾಕರೆ.