ಸೈನಿಕರ ಪತ್ನಿಯರ ಕಲ್ಯಾಣ ಸಂಘಕ್ಕೆ ಕೋಟಿ ರೂ. ದೇಣಿಗೆ ನೀಡಿದ ಪಂಜಾಬ್ ಕಿಂಗ್ಸ್ ಮಾಲಕಿ
IPL 2025 Punjab Kings: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸದ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಪಡೆ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈ ಮೂಲಕ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿದೆ.

ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಿಕಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ (Preity Zinta) ಅವರು ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್‌ನ ಸೇನಾ ಪತ್ನಿಯರ ಕಲ್ಯಾಣ ಸಂಘಕ್ಕೆ (AWWA) 1.10 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಿಂದ ಝಿಂಟಾ ಅವರು ಈ ಕೊಡುಗೆ ನೀಡಿದ್ದಾರೆ.
ಝಿಂಟಾ ಅವರ ಪಾಲಿನಿಂದ ನೀಡಲಾದ ಈ ಕೊಡುಗೆಯು, ವೀರ್ ನಾರಿಸ್ (ಯುದ್ಧ ವಿಧವೆಯರು) ಅವರ ಸಬಲೀಕರಣ ಮತ್ತು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಪಂಜಾಬ್ ಕಿಂಗ್ಸ್ನ ಕಾರ್ಪೊರೇಟ್ ಸೋಷಿಯಲ್ ರೆಸ್ಪೊನ್ಸಿಬಿಲಿಟಿ ಫಂಡ್ನಿಂದ 1.10 ಕೋಟಿ ರೂ.ಗಳನ್ನು ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ಗೆ ನೀಡಿರುವುದಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿ ಕುಟುಂಬಗಳಿಗೆ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸೈನಿಕರು ಮಾಡಿದ ತ್ಯಾಗಗಳನ್ನು ಎಂದಿಗೂ ಮರುಪಾವತಿಸಲು ಸಾಧ್ಯವಿಲ್ಲ. ಆದರೆ ನಾವು ಅವರ ಕುಟುಂಬಗಳೊಂದಿಗೆ ನಿಂತು ಅವರ ಮುಂದಿನ ಪ್ರಯಾಣವನ್ನು ಬೆಂಬಲಿಸಬಹುದು ಎಂದು ಪ್ರೀತಿ ಝಿಂಟಾ ಹೇಳಿದ್ದಾರೆ.
ಇದಕ್ಕಾಗಿ ಪಂಜಾಬ್ ಕಿಂಗ್ಸ್ ಫಂಡ್ನಿಂದ 1.10 ಕೋಟಿ ರೂ.ಗಳನ್ನು ದೇಣಿಗೆ ನೀಡುತ್ತಿರುವುದಾಗಿ ಪ್ರೀತಿ ತಿಳಿಸಿದ್ದಾರೆ. ಅದರಂತೆ ಜೈಪುರದಲ್ಲಿ ನಡೆದ ದೇಣಿಗೆ ಸಮಾರಂಭದಲ್ಲಿ ಸೌತ್ ವೆಸ್ಟರ್ನ್ ಕಮಾಂಡ್‌ನ ಸೇನಾ ಪತ್ನಿಯರ ಕಲ್ಯಾಣ ಸಂಘದ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ನಿಧಿ ಹಸ್ತಾಂತರಿಸುವ ಮೂಲಕ ಪ್ರೀತಿ ಝಿಂಟಾ ಸಂತಸವನ್ನು ಹಂಚಿಕೊಂಡರು .ಇದೀಗ ಪಂಜಾಬ್ ಕಿಂಗ್ಸ್ ತಂಡದ ಮಾಲಕಿಯ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಪ್ಲೇಆಫ್ ಸುತ್ತಿನಲ್ಲಿ ಪಂಜಾಬ್ ಕಿಂಗ್ಸ್:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಈವರೆಗೆ ಕಪ್ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಇದೀಗ 11 ವರ್ಷಗಳ ಬಳಿಕ ಪ್ಲೇಆಫ್ಗೆ ಪ್ರವೇಶಿಸಿರುವ ಪಂಜಾಬ್ ಪಡೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ: IPL 2025: ನಾಯಕನಾಗಿ ಕಣಕ್ಕಿಳಿಯದಿದ್ರು ರಜತ್ ಪಾಟಿದಾರ್ಗೆ 24 ಲಕ್ಷ ರೂ. ದಂಡ
ಏಕೆಂದರೆ ಈ ಬಾರಿ ಆಡಿದ 13 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 8 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು ಪಂಜಾಬ್ ಪಡೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಒಂದು ಪಂದ್ಯ ಮಾತ್ರ ಬಾಕಿಯಿದ್ದು, ಈ ಮ್ಯಾಚ್ನಲ್ಲಿ ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದು ಬಹುತೇಕ ಖಚಿತವಾಗಲಿದೆ. ಅದರಂತೆ ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದು ಶ್ರೇಯಸ್ ಅಯ್ಯರ್ ಪಡೆ ಫೈನಲ್ಗೇರಲಿದೆಯಾ ಕಾದು ನೋಡಬೇಕಿದೆ.
Published On - 10:58 am, Sun, 25 May 25
